ಶ್ಲೋಕ – 34 & 35
ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ ।
ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ ॥೩೪॥
ಯಜ್ ಜ್ಞಾತ್ವಾ ನ ಪುನರ್ಮೋಹಮೇವಂ ಯಾಸ್ಯಸಿ ಪಾಂಡವ ।
ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾSತ್ಮನ್ಯಥೋ ಮಯಿ ॥೩೫॥
ತತ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ |
ಉಪದೇಕ್ಷ್ಯಂತಿ ತೇ ಜ್ಞಾನಮ್ ಜ್ಞಾನಿನಃ ತತ್ತ್ವದರ್ಶಿನಃ ||
ಯತ್ ಜ್ಞಾತ್ವಾ ನ ಪುನಃ ಮೋಹಮ್ ಏವಮ್ ಯಾಸ್ಯಸಿ ಪಾಂಡವ |
ಯೇನ ಭೂತಾನಿ ಅಶೇಷೇಣ ದ್ರಕ್ಷ್ಯಸಿ ಆತ್ಮನಿ ಅಥ ಉ ಮಯಿ- ಪಾಂಡವ, ಯಾವುದನ್ನು ತಿಳಿದಾಗ ನೀನು ಮತ್ತೆ ಹೀಗೆ ಮೋಹಗೊಳ್ಳುವುದಿಲ್ಲ; ಯಾವುದರಿಂದ ಮೋಹವಳಿದದ್ದರಿಂದ ಎಲ್ಲಾ ಜೀವಿಗಳನ್ನು ಅಂತರ್ಯಾಮಿಯಾದ [ಎಲ್ಲೆಲ್ಲೂ ಇರುವ] ನನ್ನಲ್ಲಿ ಕಾಣಬಲ್ಲೆ, ಅಂಥ ತಿಳಿವನ್ನು ನಿಜ ಕಂಡು ತಿಳಿದವರು ನಿನಗೆ ತಿಳಿಹೇಳುತ್ತಾರೆ. ಕಾಲಿಗೆರಗಿ, ಪರಿಪರಿಯಿಂದ ಕೇಳಿ, ಸೇವೆಗೈದು ಅದನ್ನು ತಿಳಿದುಕೋ.
ಜ್ಞಾನವನ್ನು ಗಳಿಸಬೇಕಾದರೆ “ನೀನು ಜ್ಞಾನಿಗಳ ಬೆನ್ನುಹತ್ತಬೇಕು; ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆ ಎನ್ನುತ್ತಾನೆ ಕೃಷ್ಣ. ಜ್ಞಾನ ಎನ್ನುವುದು ಕೇವಲ ಪುಸ್ತಕವನ್ನು ಓದುವುದರಿಂದ ಬರುವುದಲ್ಲ. ಅದು ನಮಗೆ ಸಾಕ್ಷಾತ್ಕಾರವಾಗಬೇಕು. “Truth is an intuitional flash, it is not Intellectual”. ಸತ್ಯ ಎನ್ನುವುದು ನಮಗೆ ಸ್ಪೂರಣವಾಗಬೇಕು. ಎಲ್ಲಾ ವೇದ ಮಂತ್ರಗಳೂ ಋಷಿಗಳಿಗೆ ಅಂತರಂಗದಲ್ಲಿ ಸ್ಪೂರಣವಾಗಿರುವುದು(intuitional composition). ನ್ಯೂಟನ್ ಗೆ ಗುರುತ್ವಾಕರ್ಷಣ ಶಕ್ತಿಯ ವಿಚಾರ ಹೊಳೆದಂತೆ. ಈ ಕಾರಣಕ್ಕಾಗಿ ಮೊದಲು ನಾವು ಸತ್ಯಕ್ಕೆ ಶರಣಾಗಬೇಕು; ಸತ್ಯವನ್ನು ಕಂಡ ತತ್ವಜ್ಞಾನಿಗಳ ಬೆನ್ನುಹತ್ತಬೇಕು.
ಸಾಮಾನ್ಯವಾಗಿ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳು ಜ್ಞಾನವನ್ನು ಯೋಗ್ಯರಲ್ಲದವರಿಗೆ ಎಂದೂ ಬೋಧಿಸುವುದಿಲ್ಲ. ಈ ಕಾರಣಕ್ಕಾಗಿ ಕೃಷ್ಣ ಹೇಳುತ್ತಾನೆ: “ತತ್ವದರ್ಶಿಗಳನ್ನು ಕಂಡರೆ ಬಿಡಬೇಡ, ಅವರ ಬೆನ್ನು ಹತ್ತು, ಅವರನ್ನು ಒಲಿಸಿಕೊ, ಅವರ ಮುಂದೆ ನೀನು ಯೋಗ್ಯ ಎಂದು ರುಜುವಾತು ಪಡಿಸು. ನಿನ್ನ ಅನನ್ಯ ಬಯಕೆ ಅವರಿಗೆ ಮನವರಿಕೆಯಾಗುವಂತೆ ಮಾಡು, ಅವರಿಗೆ ಶರಣಾಗು” ಎಂದು. ಇಲ್ಲಿ ‘ಪ್ರಣಿಪಾತ’ ಅಂದರೆ ಎಂಟು ಅಂಗಗಳ ನಮಸ್ಕಾರ. ತಲೆ, ಎದೆ, ಕೈ, ಕಾಲು ಎಲ್ಲವನ್ನು ನೆಲಕ್ಕೆ ತಾಗಿಸಿ, ಭಕ್ತಿಯ ದೃಷ್ಟಿಯಿಂದ, ಸ್ತೋತ್ರ(ವಚನ) ಮುಖೇನ, ಮನಸ್ಸಿನಲ್ಲಿ ಅಪಾರ ಗೌರವವಿಟ್ಟು ಮಾಡುವ ನಮಸ್ಕಾರ-‘ಅಷ್ಟಾಂಗ ನಮನ’. ಹೀಗೆ ಶರಣಾಗಿ “ಕೆದಕಿ ಕೆದಕಿ, ಪರಿಪರಿಯಾಗಿ ಕೇಳಿ ತಿಳಿದುಕು” ಎನ್ನುತ್ತಾನೆ ಕೃಷ್ಣ. ‘ತತ್ವದರ್ಶಿಗಳ ಸೇವೆಮಾಡಿ ಅವರಿಂದ ಜ್ಞಾನವನ್ನು ಗಳಿಸು, ಅದರಿಂದ ಕರ್ಮ ಮಾಡು’ ಎನ್ನುವುದು ಕೃಷ್ಣ ಅರ್ಜುನನ ಮೂಲಕ ನಮಗೆ ಕೊಟ್ಟ ಸಂದೇಶ.
ಒಮ್ಮೆ ತತ್ವದರ್ಶಿಗಳಿಂದ ಜ್ಞಾನವನ್ನು ಪಡೆದರೆ ಮುಂದೆ ಮೋಹಕ್ಕೆ ಅವಕಾಶವಿಲ್ಲ. ಇಲ್ಲಿ ಅರ್ಜುನನನ್ನು ಕಾಡುತ್ತಿರುವುದು ಜ್ಞಾನವನ್ನು ಮುಚ್ಚಿರುವ ಮೋಹದ ಪರದೆ. ಅದಕ್ಕಾಗಿ ಕೃಷ್ಣ ಅರ್ಜುನನನ್ನು ‘ಪಾಂಡವ’ ಎಂದು ಸಂಬೋಧಿಸುತ್ತಾನೆ. ಇಲ್ಲಿ ‘ಪಂಡಾ’ ಎಂದರೆ ಜ್ಞಾನ (ಉದಾ:ಪಂಡಾ ಉಳ್ಳವ ಪಂಡಿತ), ಪಾಂಡವ ಎಂದರೆ ಜ್ಞಾನರಾಶಿಯನ್ನು ಪಡೆದವ. ಇನ್ನು ಪಾಂಡು ಎಂದರೆ ‘ಬಿಳಿ ಬಣ್ಣ’ ಅದು ಸಾತ್ವಿಕತೆಯ ಸಂಕೇತ. ‘ನೀನು ಸ್ವಯಂ ಜ್ಞಾನಿ ಹಾಗು ಸಾತ್ವಿಕ’ ಎಂದು ಸೂಚಿಸಿ ಇಲ್ಲಿ ಈ ಸಂಬೋಧನೆ.
ಒಮ್ಮೆ ಸತ್ಯದ ಅರಿವು ಬಂದರೆ ಅದರಿಂದ ಮೋಹದ ಪಾಶ ಕಳಚಿಹೋಗುತ್ತದೆ. ಅದು ಪುನಃ ಬರುವ ಸಂಭವವಿಲ್ಲ. ಈ ಸ್ಥಿತಿಯಲ್ಲಿ ಸಮಸ್ತ ಜೀವಜಾತವೂ ಆತ್ಮನಲ್ಲಿ (ಭಗವಂತನಲ್ಲಿ) ಆಶ್ರಿತವಾಗಿದೆ, ಎಲ್ಲವುದಕ್ಕೂ ನಿಯಾಮಕ ಶಕ್ತಿ ಭಗವಂತ ಎನ್ನುವ ಪ್ರಜ್ಞೆ ಜಾಗೃತವಾಗುತ್ತದೆ. ಇದರಿಂದ ಎಲ್ಲ ಗೊಂದಲವೂ ಮರೆಯಾಗುತ್ತದೆ. ಸ್ವಾರ್ಥ, ದುಃಖ, ಅಸೂಹೆ, ಎಲ್ಲವೂ ಹೊರಟು ಹೋಗಿ ಸ್ಥಿತಪ್ರಜ್ಞೆ ಮೂಡುತ್ತದೆ. ಭಗವಂತ ಅಣು ಒಳಗೆ ಅಣುವಾಗಿ, ಎಲ್ಲರೊಳಗೂ ಬಿಂಬ ರೂಪನಾಗಿ ತುಂಬಿದ್ದಾನೆ ಹಾಗು ಆತ ಮಹತ್ತಿನಲ್ಲಿ ಮಹತ್ತಾಗಿರುವ ಸರ್ವಗತ. ಅವನ ಇಚ್ಛೆಯಂತೇ ಎಲ್ಲವೂ ನಡೆಯುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಭಗವಂತನಲ್ಲಿ ತನ್ನನ್ನು ತಾನು ಒಪ್ಪಿಸಿಕೊಂಡವನಿಗೆ ಜೀವನದಲ್ಲಿ ಎಂದೂ ಭಯವಿಲ್ಲ.
ಜ್ಞಾನದಿಂದ ಕರ್ಮ ಮಾಡಬೇಕು, ತತ್ವ ಜ್ಞಾನಿಗಳಿಂದ ಜ್ಞಾನ ಪಡೆಯಬೇಕು, ಅದರಿಂದ ಮೋಕ್ಷ ಸಾಧ್ಯ ಎನ್ನುವ ವಿಚಾರ ತಿಳಿಯಿತು. ಆದರೆ ಈ ವಿಷಯ ತಿಳಿಯುವ ಮೊದಲು ಸಾಕಷ್ಟು ಪಾಪ ಕರ್ಮಗಳನ್ನು ಮಾಡಿದ ಪಾಪಿಗಳ ಗತಿ ಏನು? ಇದಕ್ಕಾಗಿ ಭಯ ಪಡಬೇಕಾಗಿಲ್ಲ ಎನ್ನುತ್ತಾನೆ ಕೃಷ್ಣ. ಈ ವಿಚಾರವಾಗಿ ಕೃಷ್ಣನ ಭರವಸೆಯನ್ನು ಮುಂದಿನ ಶ್ಲೋಕದಲ್ಲಿ ನೋಡೋಣ.