ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 33

ಶ್ರೇಯಾನ್ ದ್ರವ್ಯಮಯಾದ್ ಯಜ್ಞಾಜ್ ಜ್ಞಾನಯಜ್ಞಃ ಪರಂತಪ ।
ಸರ್ವಂ ಕರ್ಮಾ[S]ಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ ॥೩೩॥

ಶ್ರೇಯಾನ್ ದ್ರವ್ಯ ಮಯಾತ್ ಯಜ್ಞಾತ್ ಜ್ಞಾನಯಜ್ಞಃ ಪರಂತಪ |

ಸರ್ವಮ್ ಕರ್ಮಾ ಅ[ಆ]ಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ- ಓ ಪರಂತಪ, ಸೊತ್ತುಗಳನ್ನು ಹೊಮಿಸುವ ಬಾಹ್ಯ ಯಜ್ಞಕ್ಕಿಂತ ಜ್ಞಾನ ಯಜ್ಞ ಮಿಗಿಲು. ಓ ಪಾರ್ಥ, ಸಾಂಗವಾದ [ತಿಳಿವಿನೆದುರು ತೀರ ಸಣ್ಣದಾದ] ಎಲ್ಲಾ ಕರ್ಮವೂ ತಿಳಿವಿನಲ್ಲಿ ಪೂರ್ತಿಗೊಳ್ಳುತ್ತದೆ.

ವಾಸ್ತವಿಕವಾಗಿ ಪೂರ್ಣವಾದ ಬರಿಯ ಬಾಹ್ಯಯಜ್ಞ ಮತ್ತು ಬರಿಯ ಅಂತರಂಗ ಯಜ್ಞ ಅನ್ನುವುದೊಂದಿಲ್ಲ. ನಾವು ಮಾಡುವ ಬಾಹ್ಯಯಜ್ಞದ ಹಿಂದೆ ಅರಿವಿದೆ. ಅಂತರಂಗ ಯಜ್ಞದ ಜೊತೆಗೆ ಆಚರಣೆ ಕೂಡಾ ಇದೆ. ಇವೆರಡರಲ್ಲಿ ಅಂತರಂಗ ಯಜ್ಞಕ್ಕೆ ಹೆಚ್ಚು ಮಹತ್ವ. ಏಕೆಂದರೆ ನಾವು ಮಾನಸಿಕವಾಗಿ ಧ್ಯಾನ ಮಾಡುವುದರಿಂದ ಬಾಹ್ಯಕ್ರಿಯೆ ಇಲ್ಲದೆ ಮನಸ್ಸಿನಲ್ಲಿ ವಿಶೇಷ ಶಕ್ತಿ ನಿರ್ಮಾಣವಾಗುತ್ತದೆ. ಆದರೆ ಅರಿವು ಇಲ್ಲದೆ ಕರ್ಮ ಮಾಡಿದರೆ ಅದು ವ್ಯರ್ಥ! ಈ ಕಾರಣಕ್ಕಾಗಿ ಕರ್ಮದ ಹಿಂದಿನ ಅರಿವು ಬಹಳ ಮುಖ್ಯ. ಹಾಗಾಗಿ ಜ್ಞಾನಪೂರ್ವಕ ನಾವು ಕರ್ಮ ಮಾಡಬೇಕು. ಬರೀ ದ್ರವ್ಯಮಯವಾಗಿ, ಅದರ ಹಿಂದೆ ಜ್ಞಾನ ಇಲ್ಲದೇ ಇದ್ದರೆ, ತಿಳಿದು ಮಾಡದಿದ್ದರೆ, ಅದಕ್ಕೆ ಅರ್ಥವಿಲ್ಲ. ಯಾವ ಕರ್ಮವನ್ನಾಗಲಿ ತಿಳಿದು ಮಾಡಿದಾಗ ಮಾತ್ರ ಪರಿಣಾಮಕಾರಿ. ಈ ಕಾರಣದಿಂದ ಜ್ಞಾನಪರವಾದ ಯಜ್ಞ ಮಹತ್ವದ್ದು. ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ಪರಂತಪ ಎಂದು ಸಂಬೋಧಿಸುತ್ತಾನೆ. ಇಲ್ಲಿ ಈ ಸಂಬೋಧನೆಗೆ ವಿಶೇಷ ಅರ್ಥವಿದೆ. ಈ ಪದವನ್ನು ಎರಡು ನೆಲೆಯಲ್ಲಿ ಅರ್ಥೈಸಬಹುದು. ಸ್ಥೂಲವಾಗಿ ನೋಡಿದರೆ ಪರಂತಪ ಎಂದರೆ ‘ಶತ್ರುಗಳನ್ನು ಸದೆಬಡಿಯುವ ವೀರ’. ಇಲ್ಲಿ ಅರ್ಜುನ ಮಾಡುತ್ತಿರುವ ಯಜ್ಞ ಶತ್ರುನಿಗ್ರಹ. ಆ ಯಜ್ಞದ ಹಿಂದೆ ಜ್ಞಾನದ ಸಹಕಾರವಿದೆ. ಆದ್ದರಿಂದ ಅದು ಜ್ಞಾನಯಜ್ಞವಾಗುತ್ತದೆ- ದ್ರವ್ಯಯಜ್ಞವಲ್ಲ. ಏಕೆಂದರೆ ಅರ್ಜುನ ಪರಂತಪ-‘ಪರಮಾತ್ಮನನ್ನು ಸದಾ ಚಿಂತಿಸುವವನು’. ಇಲ್ಲಿ ‘ಅವರು ನನ್ನ ಶತ್ರುಗಳು, ಅವರನ್ನು ನಿಗ್ರಹಿಸಿ ನಾನು ಅಧಿಕಾರ ಸಾಧಿಸಬೇಕು’ ಎನ್ನುವ ಅನುಸಂಧಾನವಿಲ್ಲ. ಇದೊಂದು ಭಗವಂತನ ಆರಾದನಾ ರೂಪವಾದ ಯಜ್ಞ. ಅನ್ಯಾಯದ ವಿರುದ್ಧ ಹೋರಾಟ ಅರ್ಜುನನ ಕರ್ತವ್ಯ, ಜಯಾಪಜಯಗಳು ಆ ಭಗವಂತನಿಗೆ ಬಿಟ್ಟಿದ್ದು. ಈ ಅನುಸಂಧಾನದಿಂದ ಯುದ್ಧ ಮಾಡಿದಾಗ ಅದು ಜ್ಞಾನಯಜ್ಞವಾಗುತ್ತದೆ. ಪರಂತಪ ಎನ್ನುವ ಈ ವಿಶೇಷಣ ಇಲ್ಲಿ ಕರ್ಮವನ್ನು ಜ್ಞಾನವಾಗಿ ಹೇಗೆ ಪರಿವರ್ತಿಸಬಹುದು ಎನ್ನುವುದನ್ನು ಸೂಚಿಸುತ್ತದೆ.

ಇದು ಏಕೆ ಜ್ಞಾನಮಯ ಎನ್ನುವುದನ್ನು ಕೃಷ್ಣ ವಿವರಿಸುತ್ತಾ ಹೇಳುತ್ತಾನೆ: “ಸರ್ವಮ್ ಕರ್ಮಾ ಅ[ಆ]ಖಿಲಮ್ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಎಂದು. ಇಲ್ಲಿ ‘ಸರ್ವಂ’ ಮತ್ತು ‘ಅಖಿಲಂ’ ಎನ್ನುವ ಪದ ಪುನರುಕ್ತಿ ಇದ್ದಂತೆ ಕಾಣುತ್ತದೆ. ಆದರೆ ಇದರ ಹಿಂದೆ ವಿಶೇಷ ಅರ್ಥವಿದೆ. ಒಂದು ಮಂತ್ರದಲ್ಲಿ ಎಷ್ಟು ಬಗೆಯ ಪದಛೇದ, ಎಷ್ಟು ಬಗೆಯ ಅರ್ಥಾನುಸಂಧಾನ ಎನ್ನುವುದು ಮುಖ್ಯ. ಇಲ್ಲಿ “ಸರ್ವಂ ಕರ್ಮಾ[S]ಖಿಲಂ” ಎನ್ನುವುದನ್ನು ಎರಡು ಬಗೆಯಿಂದ ಪದಛೇದ ಮಾಡಬಹುದು. ಒಂದು- ‘ಸರ್ವ ಕರ್ಮ ಅಖಿಲಂ’ ಹಾಗು ಇನ್ನೊಂದು ‘ಸರ್ವ ಕರ್ಮ ಆಖಿಲಂ’. ಎಲ್ಲಾ ಪರಿಕರಗಳಿಂದ ಪರಿಪೂರ್ಣವಾದ ಸರ್ವಕರ್ಮವನ್ನು ‘ಸರ್ವ ಕರ್ಮ ಅಖಿಲಂ ಎನ್ನುತ್ತಾರೆ.’ ಅಂದರೆ ಪರಿಪೂರ್ಣವಾದ ಎಲ್ಲಾ ಕರ್ಮ. “ಒಂದು ಕರ್ಮವನ್ನು ಪೂರ್ಣವಾಗಿ ಮಾಡು” ಎನ್ನುತ್ತಾನೆ ಕೃಷ್ಣ. ಯಾವುದೇ ಕರ್ಮವನ್ನು ಜ್ಞಾನಪೂರ್ವಕವಾಗಿ ಮಾಡಿದಾಗ ಮಾತ್ರ ಅದು ಪೂರ್ಣವಾಗುತ್ತದೆ. ಕರ್ಮದ ಜೊತೆಗೆ ಜ್ಞಾನ ಬೇಕೇಬೇಕು. ಅದು ಜ್ಞಾನದ ಶ್ರೇಷ್ಠತೆ. ಜ್ಞಾನದಿಂದ ಕರ್ಮ ಮಾಡು; ಕರ್ಮ ಮಾಡಿ ಜ್ಞಾನಗಳಿಸು. ಆಗ ಅದು ಪರಿಪೂರ್ಣ. ಭಾಗವತದಲ್ಲಿ ಜ್ಞಾನವಿಲ್ಲದೆ ಮಾಡುವ ಯಜ್ಞವನ್ನು ಉಗ್ರವಾಗಿ ವಿರೋಧಿಸುತ್ತಾರೆ. ಅಲ್ಲಿ ಹೋಮದಲ್ಲಿ ಕೊಡುವ ಆಹುತಿಯನ್ನು ಏಕೆ ಕೊಡುತ್ತಿದ್ದೇವೆ ಎಂದು ತಿಳಿಯದೆ ಹೋಮ ಮಾಡುವವನು ‘ಬೆಂಕಿಗೆ ಮರುಳಾದವನು ಹಾಗು ಹೊಗೆ ತಿಂದು ಸಾಯುವವನು’ ಎನ್ನುತ್ತಾರೆ. ಕರ್ಮದ ಹಿಂದಿನ ಭಗವಂತನ ಅರಿವು ಬಹಳ ಮುಖ್ಯ. ಇಲ್ಲದಿದ್ದರೆ ಅದು ತೂತು ಬಿದ್ದ ದೋಣಿಯಂತೆ. ಮಾಡಿದ ಕರ್ಮ ಸಫಲವಾಗುವುದು ಅದರ ಹಿಂದೆ ಅರಿವು ಇದ್ದಾಗ ಮಾತ್ರ.

ಇನ್ನೊಂದು ಅರ್ಥದಲ್ಲಿ ಜ್ಞಾನರಹಿತವಾದ ಕೇವಲಕರ್ಮ ‘ಆ-ಖಿಲಂ’. ಇಲ್ಲಿ ‘ಖಿಲಂ’ ಅಂದರೆ ಚೂರು. ಜ್ಞಾನವಿಲ್ಲದ ಎಲ್ಲಾ ಕರ್ಮವನ್ನು ಒಂದುಗೂಡಿಸಿದರೂ ಅದು ಜ್ಞಾನದ ಮುಂದೆ ಒಂದು ಚಿಕ್ಕ ಚೂರು. ಜ್ಞಾನವಿಲ್ಲದ ಎಲ್ಲ ಕರ್ಮಗಳು ಸೇರಿದರೂ ಅದು ಜ್ಞಾನಪೂರ್ಣ ಕರ್ಮದ ಮುಂದೆ ಅತ್ಯಲ್ಪ. ನಮ್ಮ ಕರ್ಮ ಜ್ಞಾನಕ್ಕೋಸ್ಕರವಾಗಬೇಕೇ ಹೊರತು ಕರ್ಮಕ್ಕೋಸ್ಕರ ಕರ್ಮ ಮಾಡಬಾರದು. ಆದರೆ ಇಂದಿನ ದಿನದಲ್ಲಿ ಜ್ಞಾನಕ್ಕೋಸ್ಕರ ಕರ್ಮ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ದುಃಖದಾಯಕ.

ಇಲ್ಲಿ ಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ಹಿಂದೆ ಹೇಳಿದಂತೆ ಪಾರ್ಥ ಎಂದರೆ ಪಾರವನ್ನು ಕಂಡವನು, ಜ್ಞಾನದ ಕಡಲಿನ ಆಚೆಯ ದಡವನ್ನು ಕಂಡವನು; ವೇದಾರ್ಥವನ್ನು ಪಾನ ಮಾಡಿದವನು. “ಮಹಾನ್ ಜ್ಞಾನಿಯಾದ ನೀನು ಅರಿತು ಮಾಡುವ ಈ ಕರ್ಮ ಕೇವಲ ಕರ್ಮವಲ್ಲ ಇದು ಜ್ಞಾನಯಜ್ಞ” ಎನ್ನುವ ಧ್ವನಿ ಈ ಸಂಬೋಧನೆಯಲ್ಲಿದೆ. ಇಲ್ಲಿ ನಾವು ಪುನಃ ನೆನಪಿಸಿಕೊಳ್ಳಬೇಕಾದ ವಿಷಯ ಎಂದರೆ ಮೂಲತಃ ಅರ್ಜುನ ಮಹಾನ್ ಜ್ಞಾನಿ. ಆದರೆ ಮಹಾನ್ ಜ್ಞಾನಿಗಳಿಗೂ ಕೂಡಾ ಕೆಲವೊಮ್ಮೆ ಗೊಂದಲವಾಗಿ ಎಲ್ಲವೂ ಮರೆತು ಹೋಗುತ್ತದೆ. ಅರ್ಜುನ ಇಲ್ಲಿ ಆ ಸ್ಥಿತಿಯಲ್ಲಿದ್ದಾನೆ. ಇದು ಕೇವಲ ತಾತ್ಕಾಲಿಕ ಪರದೆ, ಆ ಪರದೆಯನ್ನು ಇಲ್ಲಿ ಕೃಷ್ಣ ಸರಿಸುತ್ತಿದ್ದಾನೆ.

ಜ್ಞಾನವಿಲ್ಲದ ಕರ್ಮದಿಂದ ಯಾವ ಉಪಯೋಗವೂ ಇಲ್ಲ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೆ ಈ ಜ್ಞಾನವನ್ನು ಗಳಿಸುವ ಪರಿ ಎಂತು? ಈ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *