ಶ್ಲೋಕ – 32
ಏವಂ ಬಹುವಿಧಾ ಯಜ್ಞಾ ವಿತತಾ ಬ್ರಹ್ಮಣೋ ಮುಖೇ ।
ಕರ್ಮಜಾನ್ ವಿದ್ಧಿ ತಾನ್ ಸರ್ವಾನೇವಂ ಜ್ಞಾತ್ವಾ ವಿಮೋಕ್ಷ್ಯಸೇ ॥೩೨॥
ಏವಮ್ ಬಹುವಿಧಾಃ ಯಜ್ಞಾಃ ವಿತತಾಃ ಬ್ರಹ್ಮಣಃ ಮುಖೇ
ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಮ್ ಜ್ಞಾತ್ವಾ ವಿಮೋಕ್ಷ್ಯಸೇ- ಹೀಗೆ ಹಲವು ಬಗೆಯ ಯಜ್ಞಗಳು ಭಗವಂತನ ಬಾಯಲ್ಲಿ ಹರವಿಕೊಂಡಿವೆ. ಅವೆಲ್ಲ ಕರ್ಮದಿಂದಲೆ ಆಗುವಂಥವು ಎನ್ನುವುದನ್ನು ತಿಳಿ. ಹೀಗೆ ತಿಳಿದರೆ ಬಿಡುಗಡೆ ಹೊಂದುವೆ.
ಯಜ್ಞ ಅನ್ನುವುದಕ್ಕೆ ಹಲವು ಮುಖ. ಬದುಕಿನ ಯಾವುದೇ ನಡೆಯನ್ನು ಭಗವಂತನ ಪ್ರಜ್ಞೆಯಿಂದ ಮಾಡಿದಾಗ, ಬದುಕಿನ ನಡೆ ಭಗವಂತನ ಕಡೆ ಸಾಗುವ ನಡೆಯಾದಾಗ, ಅದು ಯಜ್ಞವಾಗುತ್ತದೆ. ಯಾವ ರೀತಿ ಯಜ್ಞ ಮಾಡಿದರೂ ಅದು ಭಗವಂತನ ಮುಖದಲ್ಲೇ ಬಂದು ಸೇರುತ್ತದೆ. ಸರ್ವಯಜ್ಞಗಳ ನಿಯಾಮಕ ಆ ಭಗವಂತನೊಬ್ಬನೆ. ವೈವಿಧ್ಯತೆ ಕೇವಲ ನಮ್ಮ ಅನುಸಂಧಾನ ಮತ್ತು ಕ್ರಿಯೆಯಲ್ಲಿ.
ನಾವು ನಮ್ಮ ಕರ್ಮದ ಮುಖೇನ ಯಜ್ಞ ಮಾಡಬೇಕು. ಕರ್ಮವನ್ನು ಬಿಟ್ಟು ಭಗವಂತನ ಉಪಾಸನೆ ಮಾಡುತ್ತೇನೆ ಎಂದು ಹೊರಟರೆ ಅದು ಸಾಧ್ಯವಿಲ್ಲ. ನಾವು ನಮ್ಮನಮ್ಮ ಕರ್ತವ್ಯ ಕರ್ಮದಲ್ಲಿ ಭಗವಂತನನ್ನು ಕಾಣುವುದು ಯಜ್ಞ. ಈ ಅನುಸಂಧಾನದಿಂದ ಯಾವ ಕರ್ಮ ಮಾಡಿದರೂ ಅದು ನಮ್ಮನ್ನು ಬಿಡುಗಡೆಯ ಮಾರ್ಗದತ್ತ ಕೊಂಡೊಯ್ಯುತ್ತದೆ.
ಈವರಗೆ ಕೃಷ್ಣ ಕರ್ಮ-ಯಜ್ಞವಾಗುವುದು ಹೇಗೆ, ಅದರಲ್ಲಿನ ವಿಧ, ಅದರ ಸ್ವಾಮಿ- ಈ ವಿಚಾರವನ್ನು ವಿವರವಾಗಿ ಹೇಳಿದ. ಮೂಲಭೂತವಾಗಿ ಯಜ್ಞದಲ್ಲಿ ಬಾಹ್ಯ ಮತ್ತು ಅಂತರಂಗ ಯಜ್ಞ ಎನ್ನುವುದನ್ನೂ ನಾವು ನೋಡಿದೆವು. ಈ ಎರಡು ವಿಧವಾದ ಯಜ್ಞದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಮತ್ತು ಏಕೆ-ಈ ಕುರಿತು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.