ಶ್ಲೋಕ – 30
ಅಪರೇ ನಿಯತ ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ ।
ಸರ್ವೇSಪ್ಯೇತೇ ಯಜ್ಞವಿದೋ ಯಜ್ಞಕ್ಷಪಿತಕಲ್ಮಷಾಃ ॥೩೦॥
ಅಪರೇ ನಿಯತ ಆಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ |
ಸರ್ವೇ ಅಪಿ ಏತೇ ಯಜ್ಞವಿದಃ ಯಜ್ಞಕ್ಷಪಿತ ಕಲ್ಮಷಾಃ -ಕೆಲವರು ಆಹಾರವನ್ನು ಮಿತಗೊಳಿಸಿ ಇಂದ್ರಿಯವೃತ್ತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುತ್ತಾರೆ.[ಕಿರಿಯರಾದ ಇಂದ್ರಿಯ ದೇವತೆಗಳು ಹಿರಿಯರಾದ ಇಂದ್ರಿಯ ದೇವತೆಗಳಿಗೆ ಅಧೀನರೆಂದು ಚಿಂತನೆ ಮಾಡುತ್ತಾರೆ] ಈ ಎಲ್ಲರೂ ಯಜ್ಞದ ಬಗೆಯನ್ನು ಬಲ್ಲವರು; ಯಜ್ಞದಿಂದ ಕೊಳೆಯನ್ನು ತೊಳೆದುಕೊಂಡವರು.
ಕೆಲವರು ಆಹಾರ ನಿಯಂತ್ರಣಗೊಳಿಸಿ, ಇಂದ್ರಿಯ ಚಾಪಲವನ್ನು ಕಡಿಮೆ ಮಾಡಿಕೊಂಡು ಸಾಧನೆ ಮಾಡುತ್ತಾರೆ. ಆಹಾರ ನಿಯಂತ್ರಣ ಎಂದರೆ ಹೆಚ್ಚು ಆಹಾರ ಸೇವಿಸದೆ ಇರುವುದು, ಉಪ್ಪು-ಹುಳಿ-ಖಾರ ಕಡಿಮೆ ತಿನ್ನುವುದು ಇತ್ಯಾದಿ. ಇದರಿಂದ ಇಂದ್ರಿಯ ಸೆಳೆತ ಕಡಿಮೆಯಾಗುತ್ತದೆ. ಇದರ ಪರಿಣಾಮ ನೇರವಾಗಿ ಮನಸ್ಸಿನ ಮೇಲೆ. ಹೀಗೆ ಆಹಾರ ನಿಯಂತ್ರಣದ ಮೂಲಕ ಸಾಧನೆ ಒಂದು ಯಜ್ಞ. ಈ ಕಾರಣಕ್ಕಾಗಿ ನಮ್ಮಲ್ಲಿ ಅನೇಕ ಹಬ್ಬ ಹರಿದಿನಗಳಲ್ಲಿ, ಏಕಾದಶಿಯಂದು-ಉಪವಾಸ ಪದ್ಧತಿ ಸಾಮಾಜಿಕವಾಗಿ ನೆಡೆದು ಬಂತು. ಇದರಿಂದ ಕನಿಷ್ಠ ಆ ಒಂದು ದಿನವಾದರೂ ಮನಸ್ಸು ಸ್ವಚ್ಛವಾಗಿ ಭಗವಂತನ ಉಪಾಸನೆಯಲ್ಲಿ ತೊಡಗಲಿ ಎನ್ನುವುದು ಇದರ ಹಿಂದಿನ ಸಂಕಲ್ಪ.
ಇನ್ನೊಂದು ವಿಧವಾದ ಯಜ್ಞ “ಪ್ರಾಣಾನ್ ಪ್ರಾಣೇಷು ಜುಹ್ವತಿ” ಅಂದರೆ ಪ್ರಾಣಗಳಲ್ಲಿ ಪ್ರಾಣವನ್ನು ಹೋಮಿಸುವುದು ಅಥವಾ ಇಂದ್ರಿಯಗಳಲ್ಲಿ ಇಂದ್ರಿಯವನ್ನು ಹೋಮಿಸುವುದು. ಇಲ್ಲಿ ಇಂದ್ರಿಯಗಳು ಎಂದರೆ ಇಂದ್ರಿಯಾಭಿಮಾನಿ ದೇವತೆಗಳು. ನಮ್ಮ ಪ್ರತಿಯೊಂದು ಇಂದ್ರಿಯಕ್ಕೂ ಒಬ್ಬ ಅಭಿಮಾನಿ ದೇವತೆ ಇದ್ದಾನೆ. ಈ ದೇವತೆಗಳು ಒಂದೊಂದು ಸ್ತರದಲ್ಲಿ ಕೆಲಸ ಮಾಡುತ್ತಾರೆ(Protocol). ಒಬ್ಬೊಬ್ಬ ದೇವತೆ ಒಂದೊಂದು ಮೆಟ್ಟಲಿನಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿರುತ್ತಾರೆ ಹಾಗು ಇವರು ಭಗವಂತನನ್ನು ಸೇರುವಲ್ಲಿ ನಮಗೆ ಸಹಾಯ ಮಾಡುತ್ತಾರೆ. ಈ ದೇವತೆಗಳನ್ನು ವಿವಿಧ ಮೆಟ್ಟಲಿನಲ್ಲಿ ತಾರತಮ್ಯ ಚಿಂತನೆ ಮಾಡುವುದು, ಅದರ ಮುಖೇನ ಭಗವಂತನ ಚಿಂತನೆ ಒಂದು ಯಜ್ಞ. ಸರ್ವೋತ್ತಮನಾದ ಭಗವಂತ ಮೊದಲಿನವನು. ಎಲ್ಲವೂ ಅವನ ಅಧೀನ. ಆತನ ನಂತರ ಪ್ರಕೃತಿ ಮಾತೆ ಲಕ್ಷ್ಮಿ, ನಂತರ ಬ್ರಹ್ಮ-ವಾಯು, ಸರಸ್ವತಿ-ಭಾರತಿ, ಗರುಡ-ಶೇಷ-ರುದ್ರ, ಸುಪರ್ಣಿ-ವಾರುಣಿ-ಪಾರ್ವತಿ, ಇಂದ್ರ-ಕಾಮರು, ದಕ್ಷಾದಿಗಳು, ಸೂರ್ಯ-ಚಂದ್ರ-ಯಮಾದಿಗಳು, ವರುಣ, ಅಗ್ನಿ, ಅಶ್ವೀದೇವತೆಗಳು, ಕುಬೇರ, ಯಜ್ಞ. ಹೀಗೆ ಒಬ್ಬರು ಇನ್ನೊಬ್ಬರಿಗೆ ಅಧೀನವಾಗಿ ವಿವಿಧ ಮೆಟ್ಟಲಿನಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ರೀತಿ ದೇಹ ಎನ್ನುವ ಈ ಅದ್ಭುತ ಯಂತ್ರವನ್ನು ನಿಯಂತ್ರಿಸುವ ದೇವತೆಗಳ ಅರಿವು, ಅದರ ಮೂಲಕ ಭಗವಂತನೆಡೆಗೆ ಸಾಗುವ ಜ್ಞಾನಸಾಧನೆ-ತಾರತಮ್ಯ ಜ್ಞಾನಯಜ್ಞ.
ಯಜ್ಞದಲ್ಲಿ ಒಂದು ಒಳ್ಳೆಯದು ಒಂದು ಕೆಟ್ಟದ್ದು ಅನ್ನುವುದಿಲ್ಲ. ಯಾರಿಗೆ ಯಾವ ಯಜ್ಞ ಒಗ್ಗುತ್ತದೆ ಅದರ ಮುಖೇನ ಸಾಧನೆ ಮಾಡುತ್ತಾರೆ. ಎಲ್ಲರೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಯಾರಿಗೆ ಯಾವುದು ಹಿತವೆನಿಸುತ್ತದೋ, ಸಾಧನೆಗೆ ಅನುಕೂಲವಾಗುತ್ತದೋ, ಆ ದಾರಿಯಲ್ಲಿ ಸಾಗಬೇಕು. ಯಜ್ಞದಿಂದ ಆರಾಧ್ಯನಾದ ಯಜ್ಞಮೂರ್ತಿಯಾದ ಭಗವಂತನತ್ತ ಸಾಗುವವನು, ತನ್ನ ಜೀವನದ ಪ್ರತಿಯೊಂದು ನಡೆಯನ್ನು ಭಗವಂತನ ಆರಾದನೆಯಾಗಿ ಮಾಡಿಕೊಳ್ಳುವ ಮೂಲಕ, ತನ್ನ ಬದುಕಿನ ಕಲ್ಮಶವನ್ನು ತೊಳೆದುಕೊಂಡು ಸ್ವಚ್ಚವಾದ ಬದುಕನ್ನು ಬಾಳುತ್ತಾನೆ.