ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 03

ಸ ಏವಾಯಂ ಮಯಾ ತೇSದ್ಯ ಯೋಗಃ ಪ್ರೋಕ್ತಃ ಪುರಾತನಃ।
ಭಕ್ತೋsಸಿ ಮೇ ಸಖಾ ಚೇತಿ ರಹಸ್ಯಂ ಹ್ಯೇತದುತ್ತಮಮ್ ॥೩॥

ಸಃ ಏವ ಅಯಮ್ ಮಯಾ ತೇ ಅದ್ಯ ಯೋಗಃ ಪ್ರೋಕ್ತಃ ಪುರಾತನಃ |

ಭಕ್ತಃ ಅಸಿ ಮೇ ಸಖಾ ಚ ಇತಿ ರಹಸ್ಯಮ್ ಹಿ ಏತತ್ ಉತ್ತಮಮ್-ಅದೇ ಹಳೆಯ ಅರಿವಿನ ದಾರಿಯನ್ನು ನಾನೀಗ ನಿನಗೆ ಹೇಳಿದೆ -ನೀನು ನನ್ನ ಭಕ್ತ ಮತ್ತು ಗೆಳೆಯ ಎನ್ನುವುದಕ್ಕಾಗಿ. ಇದು ತುಂಬ ರಹಸ್ಯವಾದ ಹಿರಿಯ ಸಂಗತಿ.

ಈ ಮೇಲಿನ ಮೂರು ಶ್ಲೋಕದಲ್ಲಿ ಸೃಷ್ಟಿಯ ಆದಿಯಿಂದ ಈ ಜ್ಞಾನದ ಪರಂಪರೆ ಹೇಗೆ ಬೆಳೆದು ಬಂತು ಎನ್ನುವ ಚಿತ್ರಣವನ್ನು ಕೃಷ್ಣ ಕೊಟ್ಟಿದ್ದಾನೆ. ವಾಸ್ತವಿಕವಾಗಿ ಜ್ಞಾನದ ಮೂಲ ವೇದಗಳು. ವೇದದ ಸಾರವನ್ನು ಸಂಗ್ರಹ ಮಾಡಿ, ಸಮಸ್ತ ವೇದಾರ್ಥ ಸಂಗ್ರಹವಾದಂತಹ ಒಂದು ಗ್ರಂಥ ರಚನೆಯಾಯಿತು. ಅದನ್ನು ಪಂಚರಾತ್ರ ಎಂದು ಕರೆದರು. ಪಂಚರಾತ್ರ ಅನ್ನುವುದು ವೈದಿಕ ವಾಗ್ಮಯದ ಜ್ಞಾನಯೋಗ ಮತ್ತು ಕರ್ಮಯೋಗಗಳ ಸಮಷ್ಠಿರೂಪವಾಗಿರುವಂತಹ ಗ್ರಂಥ. ಆ ಪಂಚರಾತ್ರದ ಸಾರಸಂಗ್ರಹವೇ ಭಗವದ್ಗೀತೆ. ಸೃಷ್ಟಿಯ ಆದಿಯಲ್ಲಿ, ಸ್ವಾಯಂಭುವ ಮನ್ವಂತರದಲ್ಲಿ ಭಗವಂತ ಪಂಚರಾತ್ರವನ್ನು ಚತುರ್ಮುಖನಿಗೆ ಉಪದೇಶಿಸಿದ. ಹೀಗೆ ಪ್ರಪಂಚ ಸೃಷ್ಟಿಯಾದ ಮೊದಲಲ್ಲೇ ಪಂಚರಾತ್ರದ ಜ್ಞಾನ ಚತುರ್ಮುಖನಿಗೆ ಹಾಗು ದೇವತೆಗಳಿಗೆ ಬಂತು. ಸೂರ್ಯ ವೈವಸ್ವತ ಮನ್ವಂತರದಲ್ಲಿ ಇದನ್ನು ತನ್ನ ಮಗನಾದ ಇಕ್ಷ್ವಾಕುವಿಗೆ ಹೇಳಿದ. ಇದನ್ನೇ ಕೃಷ್ಣ ಇಲ್ಲಿ ಅರ್ಜುನನನಿಗೆ ವಿವರಿಸುತ್ತಿದ್ದಾನೆ.

ಮೊಟ್ಟ ಮೊದಲು ದೇವತೆಗಳು ಭಗವಂತನಿಂದ ಈ ಜ್ಞಾನವನ್ನು ಪಡೆದರು. ಈ ದೇವತೆಗಳಲ್ಲಿ ಸೂರ್ಯನೂ ಒಬ್ಬ. ಸೂರ್ಯ ಭೂಮಿಗೂ ದೇವತೆಗಳಿಗೂ ಸಂಪರ್ಕ ಕೊಡುವ ದೇವತೆ. ಈತನಿಂದ ವೈವಸ್ವತ ಮನ್ವಂತರದ ಅಭಿಮಾನಿಯಾದ ಮನುವಿಗೆ ಈ ಜ್ಞಾನ ಹರಿದು ಬಂತು. ಮನು ಇದನ್ನು ತನ್ನ ಮಗ ಇಕ್ಷ್ವಾಕುವಿಗೆ ಹೇಳಿದ. ಈತ ಭೂಲೋಕದಲ್ಲಿ ಚಕ್ರವರ್ತಿಯಾಗಿ ಬಾಳಿದ ಮಹಾ ರಾಜರ್ಷಿ. ಹೀಗೆ ಈ ಜ್ಞಾನ ದೇವತೆಗಳಿಂದ ಭೂಲೋಕಕ್ಕೆ ಹರಿದು ಬಂತು.

ಜ್ಞಾನ ಎನ್ನುವುದು ಅನಾಧಿನಿತ್ಯ. ಇದು ಅಳಿವಿರದ ವಿದ್ಯೆ. ಪ್ರತೀ ಸೃಷ್ಟಿಯ ಆದಿಯಲ್ಲೂ ಈ ವಿದ್ಯೆ ಭಗವಂತನಿಂದ ಹೇಳಲ್ಪಡುತ್ತದೆ. ನಂತರ ದೇವತೆಗಳು, ದೇವತೆಗಳಿಂದ ರಾಜರ್ಷಿಗಳು, ನಂತರ ಋಷಿಗಳು ಹೀಗೆ ಜ್ಞಾನ ಪರಂಪರೆ ಬೆಳೆಯುತ್ತದೆ. ಇಂದು ಈ ರೀತಿ ಹರಿದು ಬಂದ ವಿದ್ಯೆ ಕಣ್ಮರೆಯಾಗುತ್ತಿದೆ; ಜನ ಮರೆಯುತ್ತಿದ್ದಾರೆ. ಮಹಾನ್ ಜ್ಞಾನಿಯಾದ ಅರ್ಜುನ ಕೂಡಾ ಈ ಜ್ಞಾನವನ್ನು ಮರೆತಿದ್ದಾನೆ. ಹಿಂದೆ ಹೇಳಿದಂತೆ ಅರ್ಜುನ ಆ ಕಾಲದ ಮಹಾನ್ ಜ್ಞಾನಿ. ಆದರೂ ಅದು ಆತನಿಗೆ ನೆನಪಿಗೆ ಬರುತ್ತಿಲ್ಲ. ಇಲ್ಲಿ ಕೃಷ್ಣ ಅರ್ಜುನನನ್ನು “ಪರಂತಪ” ಎಂದು ಸಂಬೋಧಿಸಿದ್ದಾನೆ. ಪರಂತಪ ಎಂದರೆ ಸದಾ ಭಗವಂತನನ್ನು ಜ್ಞಾನದ ದೃಷ್ಟಿಯಿಂದ ಕಾಣಬಲ್ಲವ. “ನೀನು ಅಪರೋಕ್ಷ ಜ್ಞಾನಿ; ನಿನ್ನಲ್ಲೇ ಆ ಜ್ಞಾನ ಪರಂಪರೆ ಇದೆ; ಆದರೂ ನಿನಗೆ ಸಂಶಯ ಬಂತು; ಈ ಅನಾಧಿನಿತ್ಯವಾದ ಜ್ಞಾನ ಪರಂಪರೆ ನಿನ್ನಲ್ಲೇ ಮರೆಯಾಗುತ್ತಿದೆ. ಹೀಗಿರುವಾಗ ಉಳಿದವರ ಪಾಡೇನು” ಎನ್ನುವ ಧ್ವನಿ ಈ ಪರಂತಪ ಎನ್ನುವ ಸಂಬೋಧನೆಯಲ್ಲಿದೆ.

ಜ್ಞಾನ ನಾಶವಾಗಿಲ್ಲ, ಆದರೆ ಮೋಹದ ಪರದೆ ಅದನ್ನು ತಡೆದಿದೆ. ಆದ್ದರಿಂದ ನಿನಗೆ ನಾನು ಈಗ ಆ ಜ್ಞಾನವನ್ನು ಪುನಃ ಹೇಳುತ್ತಿದ್ದೇನೆ ಎನ್ನುತ್ತಾನೆ ಕೃಷ್ಣ. ಅರ್ಜುನ ಕೃಷ್ಣನ ಮೇಲಿಟ್ಟಿರುವ ಅಪಾರ ಗೌರವ, ಭಕ್ತಿ ಹಾಗು ಆತ್ಮೀಯತೆಯನ್ನು ಗುರುತಿಸಿ, ಅನಾದಿನಿತ್ಯವಾದ, ಅಪೂರ್ವವಾದ ಈ ಜ್ಞಾನವನ್ನು ಕೃಷ್ಣ ಅರ್ಜುನನಿಗೆ ನೆನಪಿಸುತ್ತಿದ್ದಾನೆ. ಅರ್ಜುನನ ಭಕ್ತಿ ನವವಿಧ ಭಕ್ತಿಯಲ್ಲಿ (ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ ,ಸಖ್ಯ ಹಾಗು ಆತ್ಮ ನಿವೇದನ) ಒಂದಾದ ಸಖ್ಯ. ಆತ ಭಗವಂತನನ್ನು ಗೆಳೆಯನಾಗಿ ಪೂಜಿಸಿದ. ಈ ಕಾರಣಕ್ಕಾಗಿ ಇಲ್ಲಿ ಕೃಷ್ಣ ಹೇಳುತ್ತಾನೆ: “ನೀನು ನನ್ನ ಭಕ್ತ ಮತ್ತು ಸಖ. ಆ ಕಾರಣಕ್ಕಾಗಿ ಈ ಅಮೂಲ್ಯವಾದ ಜ್ಞಾನವನ್ನು ನಿನಗೆ ಹೇಳಿದೆ” ಎಂದು.

ಇಲ್ಲಿ ರಹಸ್ಯವಾದ ಜ್ಞಾನವನ್ನು ನಿನಗೆ ಹೇಳುತ್ತಿದ್ದೇನೆ ಎಂದು ಕೃಷ್ಣ ಹೇಳಿದ್ದಾನೆ. ಜ್ಞಾನವನ್ನು ರಹಸ್ಯವಾಗಿಡಲು ಎರಡು ಕಾರಣವಿದೆ. ಒಂದು ಅದರ ದುರುಪಯೋಗ ಹಾಗು ಇನ್ನೊಂದು ಅದರ ನಿರುಪಯೋಗ. ಯಾರು ಜ್ಞಾನವನ್ನು ಪಡೆದು ಅದನ್ನು ತಮ್ಮ ತಲೆಮಾರಿಗೆ ಕೊಡಲಾರರೋ ಅಂಥವರಿಗೆ ಜ್ಞಾನವನ್ನು ಕೊಡುವುದು ವ್ಯರ್ಥ. ಇದರಿಂದ ಜ್ಞಾನ ಪರಂಪರೆ ಹರಿದು ಬರಲಾರದು. ಇನ್ನು ದುರುಪಯೋಗ. ಜ್ಞಾನ ಇರುವುದು ನಮ್ಮ ಅಂತರಂಗದ ಉದ್ಧಾರಕ್ಕೆ ಹಾಗು ಇನ್ನೊಬ್ಬರ ಉದ್ಧಾರದ ದಾರಿ ತೋರುವುದಕ್ಕಾಗಿ. ಹೊರತು ವ್ಯವಹಾರ-ವ್ಯಾಪಾರ ಮಾಡುವುದಕ್ಕಾಗಿ ಅಲ್ಲ. ಜ್ಞಾನದಿಂದ ಸಮಾಜವನ್ನು ಮೋಸಗೊಳಿಸಬಹುದು. ತಿಳುವಳಿಕೆ ಇಲ್ಲದವರನ್ನು ತನ್ನ ತಿಳುವಳಿಕೆಯಿಂದ ಮೋಸ ಮಾಡಿ ವಂಚಿಸಬಹುದು. ಈ ಎಲ್ಲಾ ಕಾರಣದಿಂದ ಜ್ಞಾನ ರಹಸ್ಯ ವಿಷಯ. ಹಿಂದೆ ಯೋಗ ಸಿದ್ಧಿಯಿಂದ ಮಾಯವಾಗುವ ವಿದ್ಯೆ ಜ್ಞಾನಿಗಳಿಗೆ ತಿಳಿದಿತ್ತು. ಇಂತಹ ಅಮೂಲ್ಯ ವಿದ್ಯೆಯ ದುರುಪಯೋಗ ಅತೀ ಸುಲಭ. ಆ ಕಾರಣಕ್ಕಾಗಿ ಅದನ್ನು ರಹಸ್ಯವಾಗಿಟ್ಟರು. ಪ್ರಾಣಿ ಭಾಷೆಯನ್ನೂ ಅರ್ಥ ಮಾಡಿಕೊಳ್ಳುವ ವಿದ್ಯೆ ನಮ್ಮಲ್ಲಿತ್ತು. ಇದನ್ನೂ ಕೂಡಾ ರಹಸ್ಯವಾಗಿಟ್ಟರು. ಹೀಗೆ ಜ್ಞಾನದಿಂದ ದುರುಪಯೋಗವಾಗುವ ಸಾಧ್ಯತೆ ಇದ್ದಾಗ ಅದನ್ನು ರಹಸ್ಯವಾಗಿಡಬೇಕು. ಇಂಥ ರಹಸ್ಯವಾದ ವಿಷಯವನ್ನು ನಾನು ‘ನಿನ್ನನ್ನು ಆಯ್ಕೆ ಮಾಡಿ ಹೇಳುತ್ತಿದ್ದೇನೆ’ ಎಂದಿದ್ದಾನೆ ಕೃಷ್ಣ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *