ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 29

ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇSಪಾನಂ ತಥಾSಪರೇ ।
ಪ್ರಾಣಾಪಾನಗತೀ ರುದ್ಧ್ವಾ ಪ್ರಾಣಾಯಾಮಪರಾಯಣಾಃ ॥೨೯॥

ಅಪಾನೇ ಜುಹ್ವತಿ ಪ್ರಾಣಮ್ ಪ್ರಾಣೇ ಅಪಾನಮ್ ತಥಾ ಅಪರೇ ।

ಪ್ರಾಣ ಅಪಾನ ಗತೀ ರುದ್ಧ್ವಾ ಪ್ರಾಣಾಯಾಮ ಪರಾಯಣಾಃ -ಮತ್ತೆ ಕೆಲವರು ಪ್ರಾಣಾಯಾಮದ ಸಾಧಕರು. ಪ್ರಾಣಾಪಾನಗಳ ನಡೆಯನ್ನು ತಡೆಹಿಡಿದು ಅಪಾನದಲ್ಲಿ ಪ್ರಾಣವನ್ನು ಹೋಮಿಸುತ್ತಾರೆ. ಪ್ರಾಣದಲ್ಲಿ ಅಪಾನವನ್ನು.

ಯೋಗದಲ್ಲಿ ವಿಶಿಷ್ಟವಾದ ಸಾಧನೆ ಪ್ರಾಣಯಾಮ. ಕೆಲವರಿಗೆ ಪ್ರಾಣಾಯಾಮವೇ ಬದುಕಿನಲ್ಲಿ ಒಂದು ಸಾಧನೆ. ಪ್ರಾಣಾಪಾನಗಳನ್ನು ಭಗವಂತನಲ್ಲಿ ಯಜ್ಞ ರೂಪವಾಗಿ ಅರ್ಪಿಸಿ, ಪ್ರಾಣಾಯಾಮದಿಂದ ಭಗಂತನ ಉಪಾಸನೆ-ಅಪಾನದಲ್ಲಿ ಪ್ರಾಣವನ್ನು ಹೋಮಿಸುವುದು. ಇದು ಕುಂಭಕಕ್ಕೆ ಸಂಬಂಧಪಟ್ಟಿದ್ದು. ದೇಹದ ಒಳಗಿನಿಂದ ಶ್ವಾಸವನ್ನು ಹೊರಬಿಡುವುದು ‘ರೇಚಕ’; ಆಮ್ಲಜನಕಯುಕ್ತ ಶುದ್ಧ ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದು ‘ಪೂರಕ’. ನಮ್ಮ ಹೃದಯ ಕಲಶದಲ್ಲಿ ಪ್ರಾಣಶಕ್ತಿಯನ್ನು ಹಿಡಿದಿಡುವುದು-‘ಕುಂಭಕ’. ಇದು ಬಹಳ ಪರಿಣಾಮಕಾರಿ. ಇದರಿಂದ ಏಕಾಗ್ರತೆ, ಆರೋಗ್ಯ, ಆಯಸ್ಸು ಹೆಚ್ಚುತ್ತದೆ. ಸಾಮಾನ್ಯವಾಗಿ ಒಬ್ಬ ಮನುಷ್ಯನ ಆಯಸ್ಸು ಆತನ ಉಸಿರಾಟದ ಮೇಲೆ ನಿರ್ಧಾರವಾಗಿರುತ್ತದೆ. ಸಹಜ ಉಸಿರಾಟ ಎಂದರೆ ನಾಲ್ಕು ಸೆಕೆಂಡಿಗೆ ಒಂದು ಉಸಿರಾಟ(ರೇಚಕ ಮತ್ತು ಪೂರಕ). ಒಬ್ಬ ಮನುಷ್ಯ ನೂರು ವರ್ಷ ಬದುಕುತ್ತಾನೆ ಎಂದರೆ ಆತನ ಆಯಸ್ಸು ‘೭೭ ಕೋಟಿ, ೭೬ ಲಕ್ಷ ಉಸಿರು’. ಒಂದು ವೇಳೆ ನಾಲ್ಕು ಸೆಕೆಂಡಿಗೆ ಬದಲಾಗಿ ೮ ಸೆಕೆಂಡಿಗೊಮ್ಮೆ ಉಸಿರಾಟ ಮಾಡಿದರೆ ಆತ ೨೦೦ ವರ್ಷ ಬದುಕಬಹುದು. ಇದನ್ನು ಹಿಂದೆ ಕೆಲವು ಸಾಧಕರು ಪ್ರಾಣಾಯಾಮದಿಂದ ಸಾಧಿಸುತ್ತಿದ್ದರು. ಇಂದೂ ಕೂಡಾ ಹಿಮಾಲಯದಲ್ಲಿ ನೂರಾರು ವರ್ಷ ವಯಸ್ಸಾಗಿರುವ ಆರೋಗ್ಯಪೂರ್ಣ ಸಾಧಕರಿದ್ದಾರೆ ಎಂದು ಪರಮಹಂಸ ಯೋಗನಂದರು(Autobiography of Yogi) ಮತ್ತು ಸ್ವಾಮಿರಾಮ್(Living with Himalayan Masters) ತಮ್ಮ ಸ್ವಂತ ಅನುಭವದಿಂದ ಹೇಳಿದ್ದಾರೆ.

ಪ್ರಾಣಾಯಾಮದಿಂದ ಪ್ರಾಣಶಕ್ತಿ ವೃದ್ಧಿಗೊಳ್ಳುತ್ತದೆ. ಇದರಿಂದ ಇನ್ನೊಬ್ಬರ ರೋಗವನ್ನು ಕೂಡಾ ಗುಣಪಡಿಸಬಹುದು. ಇದನ್ನು ಸ್ಪರ್ಶ ಅಥವಾ Touch Heal ಎನ್ನುತ್ತಾರೆ. ಕೇವಲ ಹಸ್ತ ಸ್ಪರ್ಶದಿಂದ ಭಯ, ರೋಗ, ದುಃಖ, ಹುಚ್ಚು, ಕುರುಡುತನ ಎಲ್ಲವನ್ನೂ ಗುಣ ಪಡಿಸಬಹುದು. ಈ ಕಾರಣಕ್ಕಾಗಿ ಒಬ್ಬರು ಇನ್ನೊಬ್ಬರಿಗೆ ಆಶೀರ್ವಾದ ಮಾಡುವಾಗ ತಲೆ ಮೇಲೆ ಕೈ ಇಟ್ಟು ಮಾಡುತ್ತಾರೆ. ಇದರಿಂದ ಪ್ರಾಣ ಶಕ್ತಿ ದೊಡ್ಡವರಿಂದ ಚಿಕ್ಕವರಿಗೆ ಹರಿಯುತ್ತದೆ. ಹೀಗೆ ಪ್ರಣಾಯಾಮದಲ್ಲಿ ಅನೇಕ ಸಾಧನೆ ಸಾಧ್ಯ. ಮುಖ್ಯವಾಗಿ ಇದರಿಂದ ಮನಸ್ಸು ದೇವರಲ್ಲಿ ನೆಲೆಗೊಳ್ಳುತ್ತದೆ. ಕೃಷ್ಣ ಇದನ್ನು ಯಜ್ಞ ಎನ್ನುತ್ತಾನೆ.

ಮೇಲಿನಿಂದ ಕೆಳಕ್ಕೆ ಹರಿಯುವ ಶಕ್ತಿ ಅಪಾನ, ಊರ್ಧ್ವ ಮುಖವಾಗಿ ಮೂಲಾದಾರದಿಂದ ಸಹಸ್ರಾರದತ್ತ ಹರಿಯುವ ಶಕ್ತಿ ಪ್ರಾಣ. ಈ ಎರಡು ಶಕ್ತಿಗಳನ್ನು ಹೃದಯದಲ್ಲಿ ಸ್ಥಗಿತ ಮಾಡುವುದು ಕುಂಭಕ. ಪೂರ್ಣವಾಗಿ ಒಳಗಿನ ಗಾಳಿಯನ್ನು ತನ್ನ ಬಲ ಮೂಗಿನ ಹೊರಳೆಯಿಂದ ಹೊರ ಹಾಕಿ, ತನ್ನ ಎಡ ಮೂಗಿನ ಹೊರಳೆಯಿಂದ ಶುದ್ಧ ಗಾಳಿಯನ್ನು ಇನ್ನು ಒಳಗೆ ಹೋಗುವುದಿಲ್ಲ ಅನ್ನುವಷ್ಟು ಪ್ರಮಾಣದಲ್ಲಿ ತೆಗೆದುಕೊಂಡು, ಪ್ರಾಣಶಕ್ತಿ ಮೇಲಕ್ಕೆ ಹೋಗದಂತೆ, ಅಪಾನ ಕೆಳಗೆ ಹೋಗದಂತೆ ಶಕ್ತಿಯನ್ನು ಹೃದಯದಲ್ಲಿ ಸ್ಥಗಿತ ಗೊಳಿಸುವುದು- ಕುಂಭಕ. ಇದು ಪ್ರಾಣಾಯಾಮ ಪರಾಯಣರು ಮಾಡುವ ಯಜ್ಞ. ಭಗವಂತ ಪ್ರಸನ್ನನಾಗಿ ನನಗೆ ಏಕಾಗ್ರತೆಯನ್ನು ಕೊಟ್ಟು, ನನ್ನ ಸಾಧನೆಯನ್ನು ಮುಂದುವರಿಸಲು ಸಹಕರಿಸಲಿ ಎನ್ನುವ ಅನುಸಂಧಾನದಿಂದ ಮಾಡುವ ಉಸಿರಾಟದ ಯಜ್ಞ. [ಗುರುವಿನ ಮಾರ್ಗದರ್ಶನವಿಲ್ಲದೆ ಪ್ರಾಣಾಯಾಮವನ್ನು ಪ್ರಯತ್ನಿಸಬಾರದು]

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *