ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 28

ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾSಪರೇ ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ಯತಯಃ ಸಂಶಿತವ್ರತಾಃ ॥೨೮॥

ದ್ರವ್ಯ ಯಜ್ಞಾಃ ತಪಃ ಯಜ್ಞಾಃ ಯೋಗ ಯಜ್ಞಾಃ ತಥಾ ಅಪರೇ |

ಸ್ವಾಧ್ಯಾಯ ಜ್ಞಾನ ಯಜ್ಞಾಃ ಚ ಯತಯಃ ಸಂಶಿತ ವ್ರತಾಃ -ಕೆಲವರು ಸೊತ್ತುಗಳನ್ನು ಹೋಮಿಸುವವರು. ಕೆಲವರು ತಪಸ್ಸನ್ನೆ ಭಗವಂತನಲ್ಲಿ ಹೋಮಿಸುವವರು. ಕರ್ಮ ಸಾಧನೆಯೆ ಕೆಲವರ ಯಜ್ಞ. ಚುರುಕು ನಿಷ್ಠೆಯ ಪ್ರಯತ್ನಶೀಲರಾದ ಕೆಲವರಿಗೆ ವೇದಾಧ್ಯಯನ, ಭಗವಂತನ ಅರಿವೇ ಯಜ್ಞ.

ದ್ರವ್ಯಯಜ್ಞ: ಕೆಲವರು ದ್ರವ್ಯದ ಮೂಲಕ ಭಗವಂತನನ್ನು ಆರಾದನೆ ಮಾಡುತ್ತಾರೆ. ಇದು ಅಗ್ನಿ ಮುಖೇನವಿರಬಹುದು, ಧನದಾನ, ಅನ್ನದಾನ, ಕನ್ಯಾದಾನ ಇತ್ಯಾದಿ ದಾನಗಳ ಮುಖೇನ ಇರಬಹುದು. ಯೋಗ್ಯನಾದವನಿಗೆ, ಯೋಗ್ಯ ಕಾಲದಲ್ಲಿ, ಯೋಗ್ಯವಾದುದ್ದನ್ನು, ಅವರೊಳಗಿರುವ ಭಗವಂತ ಪ್ರೀತನಾಗಲಿ ಎಂದು ಕೊಡುವುದು ದ್ರವ್ಯ ಯಜ್ಞ.

ತಪೋಯಜ್ಞ: ಇದಕ್ಕೆ ಎರಡು ಮುಖ. ಒಂದು ಬಾಹ್ಯ ಇನ್ನೊಂದು ಅಂತರಂಗ. ಒಂದು ನಿರಂತರ ಧ್ಯಾನ, ಅದಕ್ಕೆ ಬಾಹ್ಯ ಪರಿಕರಗಳ ಅಗತ್ಯವಿಲ್ಲ. ಎರಡನೆಯದು ಭಗವಂತನ ಚಿಂತನೆಗೆ ಬೇಕಾದ ಆತ್ಮಸಂಯಮ(discipline)-ಇದನ್ನು ತಪಸ್ಸು ಎನ್ನುತ್ತಾರೆ. ಉದಾಹರಣೆಗೆ ಬ್ರಹ್ಮಚರ್ಯಪಾಲನೆ, ವೃತಾನುನುಷ್ಠಾನ, ಇತ್ಯಾದಿ.

ಯೋಗಯಜ್ಞ: ಅಂದರೆ ವಿಧವಿಧವಾದ ಕರ್ಮಯೋಗವನ್ನು ಭಗವಂತನ ಪ್ರೀತ್ಯರ್ಥ ಅನುಷ್ಠಾನ ಮಾಡುವುದು. ಇದು ಬಾಹ್ಯ ಕರ್ಮಗಳ ಮೂಲಕ ಭಗವಂತನ ಆರಾದನೆ. ಉದಾಹರಣೆಗೆ: ದೇವರಿಗೆ 108 ಪ್ರದಕ್ಷಿಣೆ, ಅರ್ಚನೆ , ಇತ್ಯಾದಿ. ಇದಲ್ಲದೆ ಯೋಗ ಶಾಸ್ತ್ರದಲ್ಲಿ ಹೇಳಿರುವ ಯಮನಿಯಮ ಪಾಲನೆ.

ಸ್ವಾಧ್ಯಾಯ ಜ್ಞಾನಯಜ್ಞ: ಇದು ಭಗವಂತನಿಗೆ ಅತ್ಯಂತ ಪ್ರಿಯವಾದ ಯಜ್ಞ. ಇಲ್ಲಿ ಸ್ವಾಧ್ಯಾಯ ಎನ್ನುವುದಕ್ಕೆ ಅನೇಕ ಅರ್ಥವಿದೆ. ತನಗೆ ಸಂಬಂಧಪಟ್ಟದ್ದನ್ನು, ತಾನು ಓದಬೇಕಾದ್ದನ್ನು ಓದುವುದು. ತನ್ನ ಶಾಖೆಯ ವೇದಾಧ್ಯಯನ; ಎಲ್ಲಾ ಕಡೆ ಸ್ವತಂತ್ರನಾಗಿರುವ ಸರ್ವೋತ್ತಮನಾದ ಭಗವಂತನ ಗುಣವನ್ನು ಅಧ್ಯಯನ ಮೂಲಕ ಎಲ್ಲ ಗ್ರಂಥಗಳಲ್ಲಿ ಕಂಡು ಕೊಳ್ಳುವುದು ಸ್ವಾಧ್ಯಾಯ. ಈ ಕಾಲದಲ್ಲಿ ಶಾಸ್ತ್ರದ ರಹಸ್ಯವನ್ನು ತಿಳಿದವರು ಸಿಗುವುದು ತುಂಬಾ ವಿರಳ. ಅಂತಹ ಸಂದರ್ಭದಲ್ಲಿ ಕಾಲವನ್ನು ವ್ಯರ್ಥ ಮಾಡದೆ, ಭಗವಂತ ಎಷ್ಟು ಬುದ್ಧಿ ಕೊಟ್ಟಿದ್ದಾನೋ ಅಷ್ಟನ್ನು ಬಳಸಿ ಸ್ವಂತ ಎಷ್ಟು ಸಾಧ್ಯವೋ ಅಷ್ಟನ್ನು ಅಧ್ಯಯನ ಮಾಡುವುದೂ ಸ್ವಾಧ್ಯಾಯ. ಈ ಎಲ್ಲಾ ಸ್ವಾಧ್ಯಾಯ ನಮ್ಮ ಜ್ಞಾನದ ಬೆಳವಣಿಗೆಗೆ ಪೋಷಕವಾದದ್ದು. ನಾವು ತಿಳಿಯುವುದು, ತಿಳಿದಿದ್ದನ್ನು ಇನ್ನೊಬ್ಬರಿಗೆ ಹಂಚುವುದು-ಭಗವಂತನಿಗೆ ಅತ್ಯಂತ ಪ್ರೀಯ. ಇನ್ನೊಬ್ಬರಿಗೆ ಹಂಚುವುದರಿಂದ ಹೆಚ್ಚಾಗುವ ಏಕಮೇವ ಸಂಪತ್ತು ಎಂದರೆ ಅದು ಜ್ಞಾನ. ಇದನ್ನು ಮಾಡಬೇಕಾದರೆ ನಾವು ಯತಿಗಳಾಗಬೇಕು. ಇಲ್ಲಿ ಯತಿ ಎಂದರೆ ಸನ್ಯಾಸಿ ಅಲ್ಲ. ಯತಿ ಅಂದರೆ ನಿರಂತರ ಪ್ರಯತ್ನಶೀಲ. ಸಾಧನೆ ಜೊತೆಗೆ ಹರಿತವಾದ ವೃತ ಕೂಡಾ ಅಗತ್ಯ. ಅಂದರೆ ಸ್ವಚ್ಛವಾದ ಪ್ರಾಮಾಣಿಕವಾದ ಬದುಕು. ಇದಿಲ್ಲದೆ ಮಾಡುವ ಯಾವ ಕರ್ಮ ಕೂಡಾ ಯಜ್ಞವಾಗುವುದಿಲ್ಲ.ಆಧ್ಯಾತ್ಮದ ದಾರಿಯಲ್ಲಿ ಮುಂದೆ ಸಾಗಲು ಛಲ ಅಗತ್ಯ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *