ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 26

ಶ್ರೋತ್ರಾದೀನೀಂದ್ರಿಯಾಣ್ಯನ್ಯೇ ಸಂಯಮಾಗ್ನಿಷು ಜುಹ್ವತಿ ।
ಶಬ್ದಾದೀನ್ ವಿಷಯಾನನ್ಯ ಇಂದ್ರಿಯಾಗ್ನಿಷು ಜುಹ್ವತಿ ॥೨೬॥

ಶ್ರೋತ್ರಾ ಆದೀನಿ ಇಂದ್ರಿಯಾಣಿ ಅನ್ಯೇ ಸಂಯಮ ಅಗ್ನಿಷು ಜುಹ್ವತಿ |

ಶಬ್ದ ಆದೀನ್ ವಿಷಯಾನ್ ಅನ್ಯ ಇಂದ್ರಿಯ ಅಗ್ನಿಷು ಜುಹ್ವತಿ-ಕೆಲವರು ಕಿವಿ ಮೊದಲಾದ ಇಂದ್ರಿಯಗಳನ್ನು ಅಂಕೆಯ ಬೆಂಕಿಯಲ್ಲಿ ಹೋಮಿಸುತ್ತಾರೆ. ಕೆಲವರು ಶಬ್ದ ಮೊದಲಾದ ವಿಷಯಗಳನ್ನು ಇಂದ್ರಿಯಗಳ ಬೆಂಕಿಯಲ್ಲಿ ಹೋಮಿಸುತ್ತಾರೆ.

ಒಬ್ಬ ಸಾಧಕನಲ್ಲಿರಬೇಕಾದ ವಿಶಿಷ್ಟ ಸಾಧನೆ ಕೂಡಾ ಒಂದು ಯಜ್ಞ.ಇಂದ್ರಿಯವೆಂಬ ಹವಿಸ್ಸನ್ನು ‘ನಿಗ್ರಹ’ ಎನ್ನುವ ಬೆಂಕಿಯಲ್ಲಿ ಆಹುತಿಗೊಳಿಸುವುದು ಒಂದು ಯಜ್ಞ. ಕೆಟ್ಟದ್ದನ್ನು ಕೇಳುವುದಿಲ್ಲ, ಕೆಟ್ಟದ್ದನ್ನು ಆಡುವುದಿಲ್ಲ. ಕೆಟ್ಟದ್ದನ್ನು ನೋಡುವುದಿಲ್ಲ, ಹೀಗೆ ಇಂದ್ರಿಯ ಸಂಯಮದಿಂದ ಇಂದ್ರಿಯ ಚಾಪಲವನ್ನು ಹೋಮಿಸು. ಇದು ಇಂದ್ರಿಯ ಚಾಪಲವನ್ನು ಗೆಲ್ಲುವ ಪ್ರಕ್ರಿಯೆ. ಸಂಯಮ ಎನ್ನುವ ಅಗ್ನಿಯಲ್ಲಿ ಇಂದ್ರಿಯ ಚಾಪಲವೆಂಬ ಹವಿಸ್ಸನ್ನು ಹೋಮಿಸಿ, ಭಗವಂತನನ್ನು ಆರಾದಿಸುವುದು. ಭಗವಂತ ಪ್ರಸನ್ನನಾಗಲಿ, ಅದರ ಮೂಲಕ ನನ್ನನ್ನು ಸಾಧನೆಯ ದಾರಿಯಲ್ಲಿ ಮುನ್ನೆಡೆಸಲಿ ಎನ್ನುವ ಅನುಸಂಧಾನದಲ್ಲಿ ಮಾಡುವ ಯಜ್ಞವಿದು.

ಇನ್ನು ಒಳ್ಳೆಯ ಸಂಗತಿಗಳನ್ನು ಇಂದ್ರಿಯಗಳಲ್ಲಿ ಹೋಮಿಸುವುದೂ ಒಂದು ಯಜ್ಞ. ಕಿವಿ ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಗುಣಗಾನವೆಂಬ ಹವಿಸ್ಸನ್ನು ಹಾಕುವುದು, ಕಣ್ಣು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನ ಪ್ರತೀಕ ಎನ್ನುವ ಹವಿಸ್ಸನ್ನು ಹಾಕುವುದು, ಮೂಗು ಎನ್ನುವ ಅಗ್ನಿ ಕುಂಡದಲ್ಲಿ ಭಗವಂತನಿಗೆ ಅರ್ಪಿತವಾದ ತುಳಸಿ, ಗಂಧ ರೂಪದ ಹವಿಸ್ಸನ್ನು ಹಾಕುವುದು. ಹೀಗೆ ಇಂದ್ರಿಯ ವಿಷಯಗಳನ್ನು ಸ್ವೀಕರಿಸುವುದೂ ಒಂದು ಯಜ್ಞವಾಗುತ್ತದೆ. ಇಂದ್ರಿಯ ನಿಗ್ರಹದಂತೆ ಇಂದ್ರಿಯ ಗ್ರಹಣ ಕೂಡಾ ಒಂದು ಯಜ್ಞ. ಭಗವಂತನ ಚಿಂತನೆಗೆ ಪೂರಕವಾದ ವಿಷಯವನ್ನು ಗ್ರಹಣ ಮಾಡು ಮತ್ತು ಅಲ್ಲದ ವಿಷಯವನ್ನು ತ್ಯಾಗ ಮಾಡು-ಇದು ಸಾಧನೆಯ ಹಾದಿಯಲ್ಲಿ ಪ್ರಮುಖ ಹೆಜ್ಜೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *