ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 25

ದೈವಮೇವಾಪರೇ ಯಜ್ಞಂ ಯೋಗಿನಃ ಪರ್ಯುಪಾಸತೇ ।
ಬ್ರಹ್ಮಾಗ್ನಾವಪರೇ ಯಜ್ಞಂ ಯಜ್ಞೇನೈವೋಪಜುಹ್ವತಿ ॥೨೫॥

ದೈವಮ್ ಏವ ಅಪರೇ ಯಜ್ಞಮ್ ಯೋಗಿನಃ ಪರ್ಯುಪಾಸತೇ |

ಬ್ರಹ್ಮ ಅಗ್ನೌ ಅಪರೇ ಯಜ್ಞಮ್ ಯಜ್ಞೇನ ಏವ ಉಪಜುಹ್ವತಿ-ಕೆಲವು ಸಾಧಕರು ಭಗವದುಪಾಸನೆಯೆಂಬ ಮಾನಸ ಯಜ್ಞವನ್ನು ಆಚರಿಸುತ್ತಾರೆ.[ಭಗವಂತನನ್ನೇ ಯಜ್ಞ ರೂಪನೆಂದು ಪೂಜಿಸುತ್ತಾರೆ.] ಕೆಲವರು ಬೆಂಕಿಯ ರೂಪದ ಭಗವಂತನಲ್ಲಿ ಹೋಮಿಸುವ ಮೂಲಕ ಬಾಹ್ಯ ಯಜ್ಞದಿಂದ ಯಜ್ಞ ನಾಮಕ ಭಗವಂತನನ್ನು ಪೂಜಿಸುತ್ತಾರೆ.[ಯಜ್ಞನಾಮಕ ಭಗವಂತನಿಂದಲೆ ಬಾಹ್ಯ ಯಜ್ಞವನ್ನು ಆಚರಿಸುತ್ತಾರೆ].

ಭಗವಂತನ ಉಪಾಸನೆಯ ಮಾರ್ಗದಲ್ಲಿ ಸಾಗುವ ಕೆಲವು ಯೋಗಿಗಳು(ಸಾಧಕರು) ದೈವವನ್ನೇ ಯಜ್ಞವಾಗಿ ಉಪಾಸನೆ ಮಾಡುತ್ತಾರೆ. ಅಂದರೆ ನಿರಂತರ ಅಂತರಂಗದಲ್ಲಿ ಭಗವಂತನ ಉಪಾಸನೆಯೇ ಅವರ ಯಜ್ಞ. ಇದಕ್ಕೆ ಯಾವ ಬಾಹ್ಯ ಪರಿಕರ ಬೇಡ. ಇದು ಧ್ಯಾನ ರೂಪ ಯಜ್ಞ. ಈ ರೀತಿ ಬಾಹ್ಯ ಪರಿಕರಗಳಿಲ್ಲದೆ ಮಾಡುವ ಯಜ್ಞ ಅತ್ಯಂತ ಶ್ರೇಷ್ಠ ಯಜ್ಞ. ಇದು ಸಾಮಾನ್ಯವಾಗಿ ಅತ್ಯಂತ ಎತ್ತರಕ್ಕೇರಿದ ಸಾಧಕರು ಮಾಡಬಲ್ಲ ಯಜ್ಞ. ಎಲ್ಲಾ ಬಾಹ್ಯ ಪರಿಕರಗಳನ್ನು ಬಿಟ್ಟು ಮಾನಸ ಪರಿಗ್ರಹದಿಂದ ಮಾಡತಕ್ಕ ಜ್ಞಾನಪ್ರಧಾನವಾದ ಯಜ್ಞವಿದು.

ಇನ್ನೊಂದು ಪ್ರಕಾರದ ಯಜ್ಞ ಅಗ್ನಿ ಮುಖದಲ್ಲಿ ಮಾಡತಕ್ಕ ಕರ್ಮ ಪ್ರಧಾನವಾದ ಯಜ್ಞ. ಇದನ್ನು ಸಾಮಾನ್ಯ ಮಾನವರು ಅನುಸರಿಸುತ್ತಾರೆ. ಭಗವಂತನ ಸನ್ನಿಧಾನವಿರುವ ಅಗ್ನಿಯ ಮುಖದಲ್ಲಿ ಭಗವಂತನಿಗೆ ಅರ್ಪಣೆ ಮಾಡುವ ಆರಾಧನೆ. ಇದು ಬಾಹ್ಯ ಯಜ್ಞ. ಇದು ಬಹಳ ಮುಖ್ಯವಾದದ್ದು. ವೇದದಲ್ಲಿ ಭಗವಂತನ ಆರಾದನೆಗೆ ಅತ್ಯಂತ ಮುಖ್ಯವಾದ ಪ್ರತೀಕ ಅಗ್ನಿ ಎನ್ನುತ್ತಾರೆ. ಅಗ್ನಿ ಎಂದೂ ಅಪವಿತ್ರವಲ್ಲ. ಅಗ್ನಿ ಸ್ಪರ್ಶದಿಂದ ಅಪವಿತ್ರ ಕೂಡಾ ಪವಿತ್ರವಾಗುತ್ತದೆ. ನಮಗೆ ಭಗವಂತನಿಗೆ ಏನನ್ನಾದರೂ ತಿನ್ನಿಸಬೇಕು ಎನ್ನುವ ಅಭಿಲಾಷೆ ಇದ್ದರೆ ಅದನ್ನು ಕೇವಲ ಅಗ್ನಿ ಮುಖೇನ ಮಾಡಬಹುದು. ನಮ್ಮ ಕಣ್ಣ ಮುಂದೆ ಇರುವ ಎಲ್ಲಾ ಪ್ರತೀಕಗಳಲ್ಲಿ ಅಗ್ನಿ ಅತ್ಯಂತ ಶ್ರೇಷ್ಠ ಎನ್ನುವುದು ವೇದ ಕಾಲದ ಋಷಿಗಳ ತೀರ್ಮಾನ. ಸುಡುವ ಅಗ್ನಿಯಲ್ಲಿ ಅಗ್ನಿದೇವ, ಅವನೊಳಗೆ ಪ್ರಾಣ, ಪ್ರಾಣನೊಳಗೆ ಭಗವಂತ. ಈ ಅನುಸಂಧಾನದಲ್ಲಿ ಯಜ್ಞ. ಯಜ್ಞ ನಾಮಕ ಭಗವಂತನನ್ನು, ಯಜ್ಞದಿಂದ, ಜ್ಞಾನ ಭಕ್ತಿ ವೈರಾಗ್ಯದಿಂದ ಕೂಡಿದ ಉತ್ಕೃಷ್ಟವಾದ ಆಹ್ವಾನದಿಂದ ಆರಾದನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *