ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 22

ಯದೃಚ್ಛಾಲಾಭಸಂತುಷ್ಟೋ ದ್ವಂದ್ವಾತೀತೋ ವಿಮತ್ಸರಃ ।
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾSಪಿ ನ ನಿಬದ್ಧ್ಯತೇ ॥೨೨॥

ಯದೃಚ್ಛಾ ಲಾಭ ಸಂತುಷ್ಟಃ ದ್ವಂದ್ವ ಅತೀತಃ ವಿಮತ್ಸರಃ |

ಸಮಃ ಸಿದ್ಧೌ ಅಸಿದ್ಧೌ ಚ ಕೃತ್ವಾ ಅಪಿ ನ ನಿಬಧ್ಯತೇ — ತಾನಾಗಿಯೇ ಸಿಕ್ಕಿದ್ದರಲ್ಲಿ ಸಂತಸಪಡುವವನು, ಬದುಕಿನ ಇಬ್ಬಂದಿತನವನ್ನು ಮೀರಿನಿಂತವನು, ಹೆರವರ ಏಳಿಗೆಗೆ ಕಿಚ್ಚುಪಡದವನು, ಗಳಿಕೆಯನ್ನೂ ಕಲಿಕೆಯನ್ನೂ ಒಂದೇ ಬಗೆಯಿಂದ ಕಾಣುವವನು ಕರ್ಮ ಮಾಡಿದರೂ ಅದರ ಸೆರೆಗೆ ಸಿಕ್ಕುವುದಿಲ್ಲ.

ನಮ್ಮ ಮನಸ್ಸು ನಮ್ಮ ಹಿಡಿತದಲ್ಲಿ ಬಂದಾಗ ಕಾಣುವ ಮುಖ್ಯ ಲಕ್ಷಣದ ಬಗ್ಗೆ ಇಲ್ಲಿ ವಿವರಣೆ ಇದೆ. ತೃಪ್ತಿಯನ್ನು ಸಾಧಿಸಿದವನಿಗೆ ಏನಾದರೂ ಸಿಕ್ಕಿದರೆ ಅದರಲ್ಲೇ ಸಂತೋಷವಾಗಿರುತ್ತಾನೆ. ಸಿಕ್ಕಿದ್ದು ಸಾಲದೆಂದಾಗಲಿ, ಇನ್ನೇನೋ ಸಿಗಲಿ ಎಂದಾಗಲಿ ಆತನ ಮನಸ್ಸು ಬಯಸುವುದಿಲ್ಲ. ಏಕೆಂದರೆ ನಮಗೆ ಏನೇ ಸಿಕ್ಕಿದರೂ ಅದು ಭಗವಂತನ ಇಚ್ಛೆಯಿಂದ ಸಿಕ್ಕಿರುವುದು. ಉದಾಹರಣೆಗೆ ಉದ್ಯೋಗ. ಪ್ರತಿಭೆ ಇದ್ದವರಿಗೆಲ್ಲಾ ಉದ್ಯೋಗ ಸಿಗುವುದಿಲ್ಲ. ಉದ್ಯೋಗ ಸಿಗುವುದು, ಅದರಿಂದ ಸಂಬಳ ಸಿಗುವುದು- ಎಲ್ಲವೂ ಭಗವಂತನ ಇಚ್ಛೆಯಂತೆ. ಆದ್ದರಿಂದ ಎಲ್ಲವೂ ಭಗವಂತನ ಸಂಕಲ್ಪ ಎಂದು ತಿಳಿದು ನಿಸ್ವಾರ್ಥ ಕರ್ಮದಲ್ಲಿ ತೊಡಗಿದಾಗ ಮನಸ್ಸು ನಿರ್ಮಲವಾಗುತ್ತದೆ. ಈ ಸ್ಥಿತಿಯಲ್ಲಿ ಅಹಂಕಾರ ಎಂದೂ ಹತ್ತಿರ ಸುಳಿಯುವುದಿಲ್ಲ. ಬಡತನವಾಗಲಿ, ಸಿರಿತನವಾಗಲಿ, ನಾವು ಹುಟ್ಟುವ ಮನೆಯಾಗಲಿ, ಯಾವುದೂ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆ ಈಶ್ವರ ಇಚ್ಛೆ. ಇದನ್ನು ತಿಳಿದು ಬದುಕುವುದು ಯತಚಿತ್ತಾತ್ಮನ ಗುರುತು.

ಇನ್ನು ಎರಡನೆ ಲಕ್ಷಣ ‘ದ್ವಂದ್ವಾತೀತ ಜೀವನ’. ನಮ್ಮ ಜೀವನ ಎಂದರೆ ದ್ವಂದ್ವ. ಹಗಲು-ರಾತ್ರಿ, ಲಾಭ-ನಷ್ಟ, ಸೋಲು-ಗೆಲುವು, ಹುಟ್ಟು-ಸಾವು ಹೀಗೆ ಎಲ್ಲವೂ ದ್ವಂದ್ವ. ನಾವು ಈ ದ್ವಂದ್ವದ ನಡುವೆಯೇ ಬದುಕಬೇಕು. ಹಗಲು-ರಾತ್ರಿಗೆ ನಾವು ಹೇಗೆ ಹೊಂದಿಕೊಂಡು ಬದುಕುತ್ತೇವೆ ಹಾಗೆ ‘ಇತರ ದ್ವಂದ್ವದ ಆಘಾತಕ್ಕೆ ಒಳಗಾಗದೆ ಬದುಕಲು ಕಲಿ’ ಎನ್ನುತ್ತಾನೆ ಕೃಷ್ಣ. ಸಿಗದಿದ್ದಾಗ ದುಃಖವಿಲ್ಲ, ಸಿಕ್ಕಾಗ ಹಾರಾಟವಿಲ್ಲ. ಎರಡೂ ಸ್ಥಿತಿಯಲ್ಲಿ ಏಕರೂಪವಾದ ಮನಃಸ್ಥಿತಿಯನ್ನು ಗಳಿಸುವುದು ದ್ವಂದ್ವಾತೀತ ಜೀವನ.

ದ್ವಂದ್ವಾತೀತನಾಗಿ ಬದುಕುವಾಗ ಒಂದು ಸಮಸ್ಯೆ ಎದುರಾಗುತ್ತದೆ. ಇದ್ದದ್ದು ಸಾಕು ಎಂದು ಬದುಕುತ್ತಿರುವಾಗ ನಮ್ಮ ಜೊತೆಗಿನ ಇನ್ನೊಬ್ಬ ಹೆಚ್ಚು ಗಳಿಸಲಾರಂಬಿಸಿದರೆ, ಅದನ್ನು ನೋಡಿ ನಮಗೆ ಕಿಚ್ಚು ಹುಟ್ಟಿಕೊಳ್ಳುತ್ತದೆ. ನಮ್ಮ ಕೆಳಗಿನ ಮಟ್ಟದವರು, ನಮ್ಮ ಪಕ್ಕದ ಮನೆಯವರು ಯಾವುದೋ ಕಾರಣಕ್ಕೆ ಶ್ರೀಮಂತರಾದರೆ ನಮಗೆ ಸಂಕಟ! ಇಲ್ಲಿ ಕೃಷ್ಣ ಹೇಳುತ್ತಾನೆ “ಇನ್ನೊಬ್ಬರನ್ನು ಕಂಡು ಎಂದೂ ಕಿಚ್ಚು ಪಡಬೇಡ” ಎಂದು. ಯಾರ್ಯಾರಿಗೆ ಎಷ್ಟೆಷ್ಟು ಸಿಗಬೇಕೋ ಅಷ್ಟಷ್ಟೇ ಸಿಗುವುದು. ನಾವು ಎಷ್ಟು ಕೌಶಲ್ಯ(expertise)ರಾದರೂ ಕೂಡಾ ಭಗವಂತ ಅನುಗ್ರಹಿಸದೇ ಇದ್ದರೆ ನಾವು ಮೇಲಕ್ಕೇಳಲು ಸಾಧ್ಯವಿಲ್ಲ. ಈ ಎಚ್ಚರವೇ “ಯದೃಚ್ಛಾ ಲಾಭ ಸಂತುಷ್ಟಃ”

ಇನ್ನು ಸಿದ್ಧಿ ಅಸಿದ್ಧಿಗಳು. ಉದಾಹರಣೆಗೆ ಧ್ಯಾನ(Meditation): ಧ್ಯಾನದಲ್ಲಿ ಏಕಾಗ್ರತೆ ಪಡೆಯಲು ಆಗದೆ ಇನ್ನೇನೋ ಕಾಣಿಸಿದರೆ ಏನು ಕಾಣಿಸಿತೋ ಅದರಲ್ಲೇ ಭಗವಂತನನ್ನು ಕಾಣು. ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡ. ಏಕಾಗ್ರತೆ ಸಾಧ್ಯವಾದರೆ ಭ್ರಮೆಗೊಳಗಾಗಬೇಡ. ಏಕೆಂದರೆ ಸಿದ್ಧಿ-ಅಸಿದ್ಧಿಗಳು ನಮ್ಮ ಕೈಯಲ್ಲಿಲ್ಲ. ಅಸಿದ್ಧಿಯೂ ಸಿದ್ಧಿಯ ಮೆಟ್ಟಿಲು. ಇಂತಹ ಮಾನಸಿಕ ಸಮತೋಲನ ಲೌಕಿಕ ಮತ್ತು ಅಧ್ಯಾತ್ಮಿಕ ಜೀವನದಲ್ಲಿ ಅತಿಮುಖ್ಯ. ಇಂತಹ ಸ್ಥಿತಿಯಲ್ಲಿ ಕರ್ಮ ಎಂದೂ ಬಂಧಕವಾಗುವುದಿಲ್ಲ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *