ಶ್ಲೋಕ – 21
ನಿರಾಶೀರ್ಯತಚಿತ್ತಾತ್ಮಾತ್ಯಕ್ತಸರ್ವಪರಿಗ್ರಹಃ ।
ಶಾರೀರಂ ಕೇವಲಂ ಕರ್ಮ ಕುರ್ವನ್ ನಾSಪ್ನೋತಿ ಕಿಲ್ಬಿಷಮ್ ॥೨೧॥
ನಿರಾಶೀಃ ಯತ ಚಿತ್ತ ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ |
ಶಾರೀರಮ್ ಕೇವಲಮ್ ಕರ್ಮ ಕುರ್ವನ್ ನ ಆಪ್ನೋತಿ ಕಿಲ್ಬಿಷಮ್ — ಮನಸ್ಸು-ಚಿತ್ತಗಳನ್ನು ಹದ್ದಿನಲ್ಲಿರಿಸಿದಾಗ ಹಂಬಲ ದೂರವಾಗುತ್ತದೆ. ನಾನು-ನನ್ನದು ಎಂಬ ಭಾವ ಮರೆಯಾಗುತ್ತದೆ. ದೇಹ ಪೋಷಣೆಗಷ್ಟೆ ಕರ್ಮ ಮಾಡಿದರೂ ದೋಷ ತಟ್ಟುವುದಿಲ್ಲ.
ನಿತ್ಯತೃಪ್ತರಾಗಿರಬೇಕು ಅನ್ನುವ ಆಸೆ ಇದೆ ಆದರೆ ಅದನ್ನು ರೂಢಿಸಿಕೊಳ್ಳುವುದು ಹೇಗೆ? ಈ ಪ್ರಶ್ನೆಗೆ ಇಲ್ಲಿ ಕೃಷ್ಣ ಉತ್ತರಿಸುತ್ತಾನೆ. ಲೌಕಿಕ ಆಸೆ ಇದ್ದಾಗ ಅತೃಪ್ತಿ ತಪ್ಪಿದ್ದಲ್ಲ. ಇಲ್ಲದ್ದನ್ನು ಬಯಸಿ ಎಂದೂ ಸುಖ ಸಿಗುವುದಿಲ್ಲ. ತೃಪ್ತಿ ಇರಬೇಕಾದರೆ ಮೊದಲು ಬೇಕು ಬೇಡಗಳ ಪಟ್ಟಿಯನ್ನು ಕಡಿಮೆ ಮಾಡಬೇಕು. ಮೊದಲು ‘ಯತಚಿತ್ತನಾಗು’ ಅದರಿಂದ ನಿರಾಶಿಯಾಗು (be content with whatever you have ) ಎನ್ನುತ್ತಾನೆ ಕೃಷ್ಣ. ಮೊದಲು ನಾವು ನಮ್ಮ ಚಿತ್ತವನ್ನು ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇಲ್ಲಿ ಚಿತ್ತ ಎಂದರೆ ನಮ್ಮ ಹಿಂದಿನ ನೆನಪುಗಳು(Memory). ಹಿಂದೆ ಮೂಡಿದ ಆಸೆಗಳ ನೆನಪಿನಕೋಶ-ಚಿತ್ತ. ಚಿತ್ತದಲ್ಲಿ ಆಸೆ ನಿರಾಸೆಗಳ ಕಂತೆ ತುಂಬಿರುತ್ತದೆ. ಮೊದಲು ಹಿಂದಿನ ಆಸೆಗಳು ಮರುಕಳಿಸದಂತೆ ನೋಡಿಕೊ. ಭೂತಕಾಲವನ್ನು ಮತ್ತೆ ಕೆದುಕಬೇಡ. ಅದನ್ನು ಪೂರ್ತಿ ಬಿಟ್ಟುಬಿಡು ಹಾಗು ಮನಸ್ಸು ವರ್ತಮಾನ ಕಾಲದಲ್ಲಿ ಬೇಕು ಬೇಡಗಳೆಡೆಗೆ ಹರಿಯದಂತೆ ನಿಯಂತ್ರಣ ಮಾಡು. ಈ ರೀತಿ ನಾವು ರೂಢಿ ಮಾಡಿಕೊಂಡರೆ ಇದರಿಂದ ತೃಪ್ತರಾಗಿರಲು ಸಾಧ್ಯ.
ಹೀಗೆ ತೃಪ್ತಿಯನ್ನು ಸಾಧಿಸಿದ ನಂತರ ಅದರ ಜೊತೆಗೆ ‘ಆತ್ಮಾ ತ್ಯಕ್ತ ಸರ್ವ ಪರಿಗ್ರಹಃ’. ಇಲ್ಲಿ ಪರಿಗ್ರಹ ಎಂದರೆ ಸಂಸಾರ, ಕುಟುಂಬ, ಎಲ್ಲವನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಎಲ್ಲವುದರ ಜೊತೆಗೆ ಇದ್ದೂ ಅದರ ಮೇಲಿನ ಅತೀವ ಮೋಹ(Over attachment)ವನ್ನು ಬಿಟ್ಟುಬಿಡುವುದು. ಅಭಿಮಾನ ತ್ಯಾಗ (Detached attachment)ಮಾಡುವುದು. ಎಲ್ಲವೂ ಇರಲಿ ಆದರೆ ಅದನ್ನೇ ಹಚ್ಚಿಕೊಂಡು ಅದರಲ್ಲೇ ಮುಳುಗಬೇಡ. ಅದರೊಂದಿಗೆ ಬದುಕು- ಆದರೆ ಅಂಟಿಸಿಕೊಳ್ಳಬೇಡ. ತಾವರೆಯ ಎಲೆ ಹೇಗೆ ನೀರಿನಲ್ಲೇ ಇದ್ದು ನೀರನ್ನು ಅಂಟಿಸಿಕೊಳ್ಳುವುದಿಲ್ಲವೋ ಹಾಗೆ. ಹೀಗೆ ಇದ್ದಾಗ ನಾವು ಎಲ್ಲಾ ಮಾಡಿದರೂ ಏನೂ ಮಾಡುವುದಿಲ್ಲ. ಏಕೆಂದರೆ ಅರಿವಿನಿಂದ ಮಾಡಿದಾಗ ಕರ್ಮದ ಲೇಪವಿಲ್ಲ. ನಾವು ಅಂಟಿಸಿಕೊಳ್ಳದೆ ಬದುಕಲು ಕಲಿತರೆ ಕರ್ಮ ಕೂಡಾ ನಮಗೆ ಅಂಟುವುದಿಲ್ಲ. ಶರೀರ ನಿರ್ವಹಣೆಗೆ ಬೇಕಾದ ಕರ್ಮವನ್ನು ಮಾನಸಿಕವಾಗಿ ಅಂಟಿಸಿಕೊಳ್ಳದೆ, ಬಡಾಯಿ ಇಲ್ಲದೆ ಕರ್ಮ ನಿರ್ವಹಿಸು. ಆಗ ಕರ್ಮದ ಕೊಳೆ ನಿನಗಂಟುವುದಿಲ್ಲ ಎನ್ನುತ್ತಾನೆ ಕೃಷ್ಣ.