ಶ್ಲೋಕ – 20
ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ[S]ನಿರಾಶ್ರಯಃ ।
ಕರ್ಮಣ್ಯಭಿಪ್ರವೃತ್ತೋSಪಿ ನೈವ ಕಿಂಚಿತ್ ಕರೋತಿ ಸಃ ॥೨೦॥
ತ್ಯಕ್ತ್ವಾ ಕರ್ಮ ಫಲ ಅಸಂಗಮ್ ನಿತ್ಯ ತೃಪ್ತಃ [ಅ]ನಿರಾಶ್ರಯಃ
ಕರ್ಮಣಿ ಅಭಿಪ್ರವೃತ್ತಃ ಅಪಿ ನ ಏವ ಕಿಂಚಿತ್ ಕರೋತಿ ಸಃ — ಕರ್ಮಫಲದಲ್ಲಿ ನೇಹವನ್ನು ತೊರೆದು, ತಾನು ಎಂದೂ ಇತರ ಬಯಕೆಯೂ ಇಲ್ಲದ, ಯಾರಿಗೂ ತಲೆಬಾಗದ ಭಗವಂತನ ಪಡಿಯಚ್ಚು ಎಂದು ತಿಳಿದವನು[ಭಗವಂತನ ಆಸರೆಯಲ್ಲಿದ್ದು ಸದಾ ನೆಮ್ಮದಿಯಿಂದಿರುವವನು] ಕರ್ಮದಲ್ಲಿ ತೊಡಗಿದರೂ ವಾಸ್ತವವಾಗಿ ಏನನ್ನೂ ಮಾಡುವುದಿಲ್ಲ.
ಕೆಲವರಿಗೆ ಅದು ಬೇಕು, ಇದು ಬೇಕು ಎನ್ನುವ ಆಸೆ ಇರುವುದಿಲ್ಲ. ಆದರೆ ಬಂದಾಗ ಖುಷಿಯಾಗುತ್ತದೆ. ಕರ್ಮ ಫಲದಲ್ಲಿ ಅತಿಯಾದ ಸ್ನೇಹ ಒಳ್ಳೆಯದಲ್ಲ. ಭಗವಂತ ಪ್ರೇರಣೆ ಮಾಡಿದ ಬಂತು. ಅದನ್ನು ಸದ್ವಿನಿಯೋಗ ಮಾಡುವುದು ಹೇಗೆ ಎನ್ನುವುದನ್ನು ಯೋಚಿಸು; ಉಬ್ಬಬೇಡ. ಬರಬೇಕು ಎಂದು ನಿರೀಕ್ಷಿಸಬೇಡ, ನಿರೀಕ್ಷಿಸದೆ ಬಂದಾಗ ಹಾರಾಡಬೇಡ. ಫಲದ ಬಗ್ಗೆ ಅತಿಯಾದ ಮಮತೆ ಒಳ್ಳೆಯದಲ್ಲ. ಇದೊಂದೆ ಮನುಷ್ಯ ಹಾಯಾಗಿ ನೆಮ್ಮದಿಯಿಂದ ಬದುಕಲು ಇರುವ ವಿಧಾನ. ಇದು ಇಲ್ಲದಿದ್ದರೆ ಹತಾಶೆ (Disappointment) ಕಟ್ಟಿಟ್ಟ ಬುತ್ತಿ!
ಮನುಷ್ಯ ಹೀಗಾಗಬೇಕು-ಹಾಗಾಗಬೇಕು ಎಂದು ಕನಸುಗಳ ಸರಮಾಲೆಯನ್ನು ಕಟ್ಟುತ್ತಾ ಹೋಗುತ್ತಾನೆ. ಬಯಸಿದ್ದರಲ್ಲಿ ಎಲ್ಲವೂ ಕೈಗೂಡುವುದಿಲ್ಲ. ಆಗ ಹತಾಶೆ, ದುಗುಡ, ಉದ್ವೇಗ(Tension). ಅದರಿಂದ ಮಾನಸಿಕ ವ್ಯಾಕುಲತೆ (Depression). ಇನ್ನು ಅಕಾಲದಲ್ಲಿ ಸಂಪತ್ತು ಬಂದಾಗ ಹಾರಾಟ-ಅದರಿಂದ ಜೀವನ ನಾಶ! ಈ ಕಾರಣದಿಂದ ಬಂತು ಎಂದಾಗಲಿ, ಬರಲಿಲ್ಲ ಎಂದಾಗಲಿ, ಬರಬೇಕು ಎಂದಾಗಲಿ ತಲೆ ಕೆಡಿಸಿಕೊಳ್ಳಬೇಡ. ಸ್ವಚ್ಛವಾದ ಯೋಚನೆಯಿಂದ ಕರ್ತವ್ಯದಲ್ಲಿ ತೊಡಗು. ಎಂಥಹ ಪರಿಸ್ಥಿತಿಯಲ್ಲೂ ಸಂಯಮ ಇರಲಿ. ಈ ರೀತಿ ನಿನ್ನ ಮನಸ್ಸನ್ನು ತರಬೇತಿಗೊಳಿಸು ಎಂದಿದ್ದಾನೆ ಕೃಷ್ಣ. ಇದು ಕೃಷ್ಣನ ಮನಃಶಾಸ್ತ್ರ.
ಜೀವ ಭಗವಂತನ ಪ್ರತಿಬಿಂಬ. ಅದಕ್ಕೆ ಸ್ವಾತಂತ್ರ್ಯವಿಲ್ಲ. ಬಿಂಬ ಮಾಡಿಸಿದಂತೆ ಪ್ರತಿಬಿಂಬ. ಭಗವಂತ ನಿತ್ಯ ತೃಪ್ತ, ಆತನಿಗೆ ಅತೃಪ್ತಿ ಇಲ್ಲ. ಹಾಗೇ ನಾವೂ ಅತೃಪ್ತಿ ಇಲ್ಲದೆ ಇರುವುದನ್ನು ಕಲಿತುಕೊಳ್ಳಬೇಕು. ಯಾವುದೋ ಒಂದು ಆಸೆ ಈಡೇರಿಸಿಕೊಳ್ಳುವುದಕ್ಕಾಗಿ ಎಷ್ಟೋ ಜನರ ಹಿಂದೆ ಬಾಲ ಅಲ್ಲಾಡಿಸಿಕೊಂಡು ಸ್ವಾರ್ಥ ಮನಸ್ಸಿನಿಂದ ಬದುಕುವುದು ಜೀವನವಲ್ಲ. ಯಾರ ಆಶ್ರಯವೂ ಇಲ್ಲದಿರುವ ಭಗವಂತನ ಪ್ರತಿಬಿಂಬವಾದ ನಿನಗೆ ಅತೃಪ್ತಿಯ ಬದುಕೇಕೆ? ಭಗವಂತನಂತೆ ನಿರಾಶ್ರಯನಾಗು. ನಿನಗೆ ಸದಾ ಭಗವಂತನ ಆಶ್ರಯವಿದೆ ಎನ್ನುವ ಸತ್ಯವನ್ನು ಅರಿತು ಬಾಳು. ಹೀಗೆ ಬದುಕುವ ಮಾನವ ಕರ್ಮದಲ್ಲಿ ತೊಡಗಿದ್ದರೂ ಕೂಡಾ ಏನನ್ನೂ ಮಾಡುವುದಿಲ್ಲ. ಏಕೆಂದರೆ ಭಗವಂತ ಎಲ್ಲವುದಕ್ಕಿಂತ ಮೇಲಿದ್ದಾನೆ ಎನ್ನುವ ಮರ್ಮವನ್ನು ಆತ ಅರಿತಿರುತ್ತಾನೆ. ಇದಕ್ಕೆ ಇನ್ನೂ ಹೆಚ್ಚಿನ ವಿವರಣೆಯನ್ನು ಮುಂದಿನ ಶ್ಲೋಕಗಳಲ್ಲಿ ಕಾಣಬಹುದು.