ಶ್ಲೋಕ – 19
ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ ।
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ ॥೧೯॥
ಯಸ್ಯ ಸರ್ವೇ ಸಮಾರಂಭಾಃ ಕಾಮ ಸಂಕಲ್ಪವರ್ಜಿತಾಃ
ಜ್ಞಾನ ಅಗ್ನಿ ದಗ್ಧ ಕರ್ಮಾಣಮ್ ತಮ್ ಆಹುಃ ಪಂಡಿತಮ್ ಬುಧಾಃ — ಮಾಡುವ ಬಯಕೆ, ಪಡೆಯುವ ಬಯಕೆಗಳನ್ನು ತೊರೆದು ಎಲ್ಲ ಕರ್ಮಗಳಲ್ಲು ತೊಡಗುವವನು ಅರಿವಿನ ಬೆಂಕಿಯಿಂದ ಕರ್ಮಗಳನ್ನು ಸುಟ್ಟವನು. ಬಲ್ಲವರು ಅಂಥವನನ್ನು ಪಂಡಿತ ಎನ್ನುತ್ತಾರೆ.
ನಮ್ಮ ಜೀವನದ ತೊಡಗುವಿಕೆಯ ಹಿಂದೆ ಒಂದು ಕಾಮನೆ,ಸಂಕಲ್ಪ ಇರುತ್ತದೆ. ನಾನು ಸುಖ ಪಡಬೇಕು, ನನ್ನ ಮನೆಮಂದಿಯನ್ನು ಸುಖವಾಗಿಡಬೇಕು ಎನ್ನುವ ಕಾಮನೆ. ಇದಕ್ಕಾಗಿ ಇನ್ನೇನೋ ವಿಧಾನವನ್ನು ಅನುಸರಿಸುತ್ತೇವೆ. ಇದು ಪ್ರತಿಯೊಂದು ಕ್ರಿಯೆಯ ಹಿಂದೆ ಮನುಷ್ಯನನ್ನು ಕಾಡುವ ಸಮಸ್ಯೆ. ತನ್ನ ಬಯಕೆಯ ಈಡೇರಿಕೆಗಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ. ಯಾರಿಗೆ ತನ್ನ ತೊಡಗುವಿಕೆಯಲ್ಲಿ ಬಯಕೆಗಳ ಸ್ಪರ್ಶ ಇಲ್ಲವೋ ಅವನು ಪಂಡಿತ. ಒಬ್ಬ ಪಂಡಿತನ ಪಾಂಡಿತ್ಯವನ್ನು ಅವನ ನುಡಿಯಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು.
ನಿನ್ನ ಜೀವನದಲ್ಲಿ ಹೀಗೇ ಆಗಬೇಕು, ಹೀಗೇ ಮಾಡಬೇಕು, ಅದರಿಂದ ಇಂತದ್ದು ನನಗೆ ಸಿಗಬೇಕು ಅನ್ನುವ ಬಯಕೆ, ಆಸೆಗಳನ್ನು ಬಿಟ್ಟು ನಿರಾಳವಾಗಿ ಕರ್ತವ್ಯ ಮಾಡು. ಭಗವಂತ ಏನು ಕೊಟ್ಟ ಅದನ್ನು ಪ್ರಸಾದವಾಗಿ ಸ್ವೀಕರಿಸು. ಏನು ಬಂತೋ ಅದರಲ್ಲಿ ತೃಪ್ತಿಪಡುವುದನ್ನು ಕಲಿ. ಇಲ್ಲವಲ್ಲಾ ಎಂದು ಸಂಕಟ ಪಡಬೇಡ. ಇದು ‘ಕಾಮಸಂಕಲ್ಪವರ್ಜ್ಯ’. [ಏನೂ ಬೇಡ ಎಂದು ಬಯಸುವುದಲ್ಲ, ಇಂತದ್ದೇ ಬೇಕು ಎಂದು ಬಯಸದೇ ಇರುವುದು ಕಾಮಸಂಕಲ್ಪವರ್ಜ್ಯ]. ಏನು ಬಂತೋ ಬರಲಿ, ನೀನು ಪ್ರಯತ್ನಶೀಲನಾಗು. ಬಂದಿದ್ದರಲ್ಲಿ ಸಂತೋಷದಿಂದ ಬದುಕು. ಇಂತಹ ಅರಿವಿನಿಂದ ಮಾಡಿದ ಕರ್ಮ ಸ್ವಚ್ಛವಾಗಿರುತ್ತದೆ. ಇದು ಕರ್ಮದ ಕೊಳೆ ಅರಿವಿನ ಬೆಂಕಿಯಿಂದ ಸ್ವಚ್ಚವಾಗುವಿಕೆ. ಇಂತಹ ನಡೆ ಉಳ್ಳವನು ಪಂಡಿತ ಎನಿಸುತ್ತಾನೆ. ಇಂತವರನ್ನು ಜ್ಞಾನಿಗಳು ‘ಜ್ಞಾನಿಗಳೆಂದು’ ಗುರುತಿಸುತ್ತಾರೆ. ಮನುಷ್ಯ ಏನನ್ನು ಹೇಳುತ್ತಾನೆ ಅದು ಮುಖ್ಯವಲ್ಲ, ಏನನ್ನು ರೂಢಿಸಿಕೊಳ್ಳುತ್ತಾನೆ ಅದು ಮುಖ್ಯ. ಮನಸ್ಸಿನ ತುಂಬ ಆಸೆಗಳನ್ನು ತುಂಬಿಕೊಂಡು ಯಾವುದ್ಯಾವುದೋ ಆಸೆಯ ಬೆನ್ನುಹತ್ತಿ ಸೋಗು ಹಾಕಿಕೊಂಡು ಬದುಕುವವನು ಎಂದೂ ಎತ್ತರಕ್ಕೇರಲಾರ.