ಶ್ಲೋಕ – 15
ಏವಂ ಜ್ಞಾತ್ವಾ ಕೃತಂ ಕರ್ಮ ಪೂರ್ವೈರಪಿ ಮುಮುಕ್ಷುಭಿಃ ।
ಕುರು ಕರ್ಮೈವ ತಸ್ಮಾತ್ ತ್ವಂ ಪೂರ್ವೈಃ ಪೂರ್ವತರಂ ಕೃತಮ್ ॥೧೫॥
ಏವಮ್ ಜ್ಞಾತ್ವಾ ಕೃತಮ್ ಕರ್ಮ ಪೂರ್ವೈಃ ಅಪಿ ಮುಮುಕ್ಷುಭಿಃ
ಕುರು ಕರ್ಮ ಏವ ತಸ್ಮಾತ್ ತ್ವಮ್ ಪೂರ್ವೈಃ ಪೂರ್ವ ತರಮ್ ಕೃತಮ್-ಬಿಡುಗಡೆ ಬಯಸಿದ ಹಿಂದಿನವರು ಕೂಡಾ ಹೀಗೆ ‘ತಿಳಿದು’ ಕರ್ಮ ಮಾಡಿದರು. ಅದರಿಂದ ಹಿಂದಿನಿಂದಲು ಇದ್ದು ಹಿರಿಯರು ಮಾಡಿಕೊಂಡು ಬಂದ ಕರ್ಮವನ್ನೇ ನೀನು ಮಾಡು.
ಕರ್ಮದ ಬಂಧನದಿಂದ ಬಿಡಿಸಿಕೊಳ್ಳಲು ‘ನಿಷ್ಕ್ರೀಯತೆ’ ಸುಲಭೋಪಾಯ ಎಂದು ಕೆಲವರು ಯೋಚಿಸಬಹುದು. ಕೃಷ್ಣ ನಿಷ್ಕ್ರೀಯತೆಯನ್ನು ಉಗ್ರವಾಗಿ ವಿರೋಧಿಸುತ್ತಾನೆ. ‘ನೂರು ವರುಷ ಬದುಕು ಆದರೆ ಕರ್ತವ್ಯಕರ್ಮ ಮಾಡಿಕೊಂಡು ಬದುಕು. ನಿಷ್ಕ್ರೀಯನಾಗಿ ಬದುಕಬೇಡ’. ಇದು ಕೃಷ್ಣನ ಸಿದ್ಧಾಂತ. ಕರ್ಮ ಮಾಡುವುದು ಎಂದರೆ ಎನನ್ನಾದರೂ ಮಾಡುವುದಲ್ಲ. ನಮ್ಮ ಜೀವಸ್ವಭಾವ(ವರ್ಣ)ಕ್ಕೆ ತಕ್ಕಂತೆ ಕರ್ಮ ನಡೆಯುತ್ತಿರಬೇಕು. ಮಾಡುವ ಕರ್ಮವನ್ನು ಜ್ಞಾನಪೂರ್ವಕವಾಗಿ ತಿಳಿದು ಅಭಿಮಾನ-ಅಹಂಕಾರ-ಫಲಾಪೇಕ್ಷೆ ಇಲ್ಲದೆ ಮಾಡಬೇಕು. “ನಿನ್ನ ಹಿಂದಿನ ರಾಜರ್ಷಿಗಳು, ಋಷಿ-ಮುನಿಗಳು ಮಾಡಿದ್ದೂ ಇದನ್ನೇ. ಕರ್ಮಯೋಗ ಮತ್ತು ಜ್ಞಾನಯೋಗವೆಂಬ ಉಭಯ ಯೋಗವಿಲ್ಲದೆ ಭಗವಂತನ ಸಂಯೋಗವಿಲ್ಲ” ಎನ್ನುತ್ತಾನೆ ಕೃಷ್ಣ.