ಶ್ಲೋಕ – 14
ನ ಮಾಮ್ ಕರ್ಮಾಣಿ ಲಿಂಪಂತಿ ನ ಮೇ ಕರ್ಮ ಫಲೇ ಸ್ಪೃಹಾ ।
ಇತಿ ಮಾಂ ಯೋSಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ ॥೧೪॥
ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ
ಇತಿ ಮಾಮ್ ಯಃ ಅಭಿಜಾನಾತಿ ಕರ್ಮಭಿಃ ನ ಸಃ ಬಧ್ಯತೇ-ಕರ್ಮಗಳು ನನ್ನನ್ನು ಅಂಟುವುದಿಲ್ಲ. ನನಗೆ ಕರ್ಮಫಲದ ಬಯಕೆಯಿಲ್ಲ. ಹೀಗೆಂದು ನನ್ನನ್ನು ತಿಳಿದವನು ಕರ್ಮದ ಸೆರೆಯಲ್ಲಿ ಸಿಕ್ಕಿ ಬೀಳನು.
ಭಗವಂತ ಅವರವರ ಸ್ವಭಾವಕ್ಕೆ ತಕ್ಕಂತೆ, ಅವರವರ ಕರ್ಮಕ್ಕೆ ತಕ್ಕಂತೆ (ಗುಣಕರ್ಮ ವಿಭಾಗಶಃ) ಪ್ರಪಂಚವೆಂಬ ತೋಟವನ್ನು ನಿರ್ಮಿಸಿ, ನಾಲ್ಕು ವರ್ಣದ ಮೋಕ್ಷಯೋಗ್ಯ ಮಾನವರ ಸೃಷ್ಟಿಯನ್ನು ಈ ಭೂಮಿ ಮೇಲೆ ಮಾಡಿದ. “ಇದರಿಂದ ನನಗೆ ಯಾವ ಕರ್ಮವೂ ಅಂಟುವುದಿಲ್ಲ” ಎನ್ನುತ್ತಾನೆ ಕೃಷ್ಣ. ಕರ್ಮ ಅಂಟುವುದು ‘ಇದು ನನ್ನದು’, ‘ನಾನು ಮಾಡಿದ್ದು’ ಎನ್ನುವ ಅಭಿಮಾನವಿದ್ದಾಗ ಮಾತ್ರ. ಭಗವಂತನಿಗೆ ಕರ್ಮದ ಅಂಟು ಅಥವಾ ನಂಟು ಇಲ್ಲ. ಕರ್ಮ ಫಲದ ಅಭಿಮಾನವಿಲ್ಲ. ಆತನಿಗೆ ಕರ್ಮದ ಪರಿಶ್ರಮ, ಆಯಾಸ ಪೂರ್ವಕ ಕರ್ತೃತ್ವ, ಫಲದ ಬಯಕೆ ಇಲ್ಲ. ಈ ಸತ್ಯವನ್ನು ಅರಿತವ, ಅರಿತು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡವ, ಕರ್ಮ ಬಂಧನದಲ್ಲಿ ಸಿಕ್ಕಿಬೀಳನು.