ಶ್ಲೋಕ – 13
ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ ।
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್ ॥೧೩॥
ಚಾತುರ್ವರ್ಣ್ಯಮ್ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ ।
ತಸ್ಯ ಕರ್ತಾರಮ್ ಅಪಿ ಮಾಮ್ ವಿದ್ಧಿ ಅಕರ್ತಾರಮ್ ಅವ್ಯಯಮ್ — ತ್ರಿಗುಣಗಳು ಮತ್ತು ಕರ್ಮಗಳ ವಿಂಗಡಣೆಯಿಂದ ನಾಲ್ಕು ವರ್ಣಗಳ ಗುಂಪನ್ನು ನಿರ್ಮಿಸಿದೆ. ಏತರಿಂದಲೂ ಬದಲಾವಣೆಗೊಳ್ಳದ ನಾನು ಅದನ್ನು ಮಾಡಿದರೂ ನಿಜವಾಗಿ ಏನನ್ನೂ ಮಾಡುವುದಿಲ್ಲವೆಂದು ತಿಳಿ. (ಬದಲಾವಣೆಗೊಳ್ಳದ ನಾನು ಅದನ್ನು ನಿರ್ಮಿಸಿದವನು ಮತ್ತು ನನ್ನನ್ನು ಯಾರೂ ನಿರ್ಮಿಸಿಲ್ಲ ಎಂದು ತಿಳಿ)
ಕೃಷ್ಣ ಹೇಳುತ್ತಾನೆ: “ನಾನು ಗುಣಕರ್ಮವಿಭಾಗಶಃ ನಾಲ್ಕು ವರ್ಣಗಳನ್ನು ಸೃಷ್ಟಿ ಮಾಡಿದೆ ಎಂದು”. ನಮಗೆ ತಿಳಿದಂತೆ ನಾಲ್ಕು ವರ್ಣಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ. ಭಗವಂತನ ಈ ನುಡಿಯನ್ನು ತಪ್ಪಾಗಿ ಅರ್ಥೈಸುವವರೇ ಹೆಚ್ಚು. ಭಗವಂತನೇ ನಾಲ್ಕು ವರ್ಣಗಳನ್ನು ಸೃಷ್ಟಿಸಿದರೆ ಈ ವರ್ಣಭೇದ ಭಾರತವನ್ನು ಬಿಟ್ಟು ಬೇರೆ ದೇಶದಲ್ಲಿ ಏಕಿಲ್ಲ ಎಂದು ಪ್ರಶ್ನಿಸುವವರಿದ್ದಾರೆ. ಮೂಲಭೂತವಾಗಿ ನೋಡಿದರೆ ಕೃಷ್ಣ ಇಲ್ಲಿ ಹೇಳಿರುವುದು ಜಾತಿಯ ಬಗ್ಗೆ ಅಲ್ಲ-ಬದಲಿಗೆ ನಾಲ್ಕು ವರ್ಣಗಳ ಬಗ್ಗೆ. ವರ್ಣ ಮತ್ತು ಜಾತಿಯನ್ನು ಸಂಕೀರ್ಣವಾಗಿ ಕೂಡಾ ಬಳಸುತ್ತಾರೆ. ಸಂಸ್ಕೃತದಲ್ಲಿ ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಒಂದು ಪದಕ್ಕೆ ಅನೇಕ ಆಯಾಮವಿರುವುದರಿಂದ ನಮಗೆ ಕೆಲವೊಮ್ಮೆ ಗೊಂದಲವಾಗುತ್ತದೆ. ಜಾತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಒಂದು ಹುಟ್ಟುಗುಣ ಸ್ವಭಾವ(ಜೀವ ಸ್ವಭಾವ-ಹುಟ್ಟುವಾಗಲೇ ಪಡೆದುಕೊಂಡು ಬಂದಿದ್ದು, ಮೂಲ ತ್ರೈಗುಣ್ಯಕ್ಕೆ ಸಂಬಂಧಪಟ್ಟಿದ್ದು) ಅದು ವರ್ಣ; ಇನ್ನೊಂದು ಯಾವ ಮನೆಯಲ್ಲಿ ಹುಟ್ಟಿದನೋ ಆ ಜಾತಿ (ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ ಹುಡುಗ ಬ್ರಾಹ್ಮಣ ಹುಡುಗ, ಕ್ಷತ್ರಿಯನ ಮನೆಯಲ್ಲಿ ಹುಟ್ಟಿದ ಹುಡುಗ ಕ್ಷತ್ರಿಯ ಹುಡುಗ). ಈ ಸೂಕ್ಷ್ಮ ಅರಿಯದಿದ್ದರೆ ಇಲ್ಲಿ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ಈ ಶ್ಲೋಕದಲ್ಲಿ ವರ್ಣ ಎಂದರೆ ಮೂಲ ಹುಟ್ಟು ಸ್ವಭಾವ.
ವರ್ಣ ಅಂದರೆ ಬಣ್ಣ. ಒಬ್ಬ ಮನುಷ್ಯನ ಬಣ್ಣ ಅಂದರೆ ಏನು ? “ಆತನ ಬಣ್ಣ ಬಯಲಾಯಿತು” ಎಂದು ಸಾಮಾನ್ಯವಾಗಿ ನಾವು ಹೇಳುವುದಿದೆ. ಒಬ್ಬನ ಬಣ್ಣ ಬಯಲಾಗುವುದು ಎಂದರೆ ಆತನ ನಿಜ ವ್ಯಕ್ತಿತ್ವ ಬಯಲಾಗುವುದು. ಇಲ್ಲಿ ಬಣ್ಣ ಎಂದು ಹೇಳಲು ಇನ್ನೊಂದು ಕಾರಣವಿದೆ. ನಮ್ಮ ಸ್ವಭಾವಕ್ಕೆ ಬಣ್ಣವಿದೆ [ಇದು ನಮ್ಮ ಕಣ್ಣಿಗೆ ಕಾಣದ ಬಣ್ಣ]. ಸಾತ್ವಿಕ-ಬಿಳಿ; ರಾಜಸ-ಕೆಂಪು; ತಾಮಸ-ಕಪ್ಪು. ಹೀಗೆ ಬಣ್ಣ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಸ್ವಭಾವ ನಮ್ಮೊಳಗಿನ ಒಂದು ಶಕ್ತಿ. ನಮ್ಮ ಭಾವನೆಗನುಗುಣವಾಗಿ ನಮ್ಮ ದೇಹ ಬಣ್ಣದ ಕಿರಣಗಳನ್ನು ಹೊರಹೊಮ್ಮುತ್ತದೆ[ಇದು ಸಾಮಾನ್ಯ ಮನುಷ್ಯನ ಕಣ್ಣಿಗೆ ಕಾಣದು]. ತುಂಬಾ ಕೋಪ ಬಂದಾಗ ಮೈಯಿಂದ ಕೆಂಪು ಕಿರಣ; ಮನಸ್ಸು ಪ್ರಸನ್ನವಾಗಿದ್ದಾಗ ಹಸಿರು ಕಿರಣ; ಜ್ಞಾನದ ಆಳ ತಿಳಿದ ಜ್ಞಾನಿಯ ಮೈಯಿಂದ ನೀಲ ಕಿರಣ. ಹೀಗೆ ಬಣ್ಣ ನಮ್ಮ ಒಳಗಿನ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಈ ಕಾರಣಕ್ಕಾಗಿ ಜ್ಞಾನಾನಂದಮಯನಾದ ಭಗವಂತ ನೀಲಮೇಘಶ್ಯಾಮ.
ಮೇಲಿನ ವಿವರವನ್ನು ತಿಳಿದಾಗ ಸ್ಪಷ್ಟವಾಗಿ ನಮಗೆ ಅರ್ಥವಾಗುವುದು ಒಂದು ವಿಚಾರ. ಜಾತಿ- ಹುಟ್ಟಿದ ಮನೆಗೆ ಮತ್ತು ತಂದೆ-ತಾಯಿಯನ್ನು ಅವಲಂಬಿಸಿ ಬರುವುದು. ವರ್ಣ ಎನ್ನುವುದು ನಮ್ಮ ಅಂತರಂಗ ಪ್ರಪಂಚ-ನಮ್ಮ ಮೂಲ ಸ್ವಭಾವ. ಈ ವರ್ಣವನ್ನು ಪ್ರಪಂಚದ ಮೂಲೆ ಮೂಲೆಯಲ್ಲೂ ಕಾಣಬಹುದು. ಭಾರತದಲ್ಲಿ ಶಾಸ್ತ್ರಕಾರರು ಇದನ್ನು ಗುರುತಿಸಿ ಅದಕ್ಕೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎನ್ನುವ ಹೆಸರು ಕೊಟ್ಟರು ಅಷ್ಟೆ. ಜಾತಿ ಜನ್ಮತಃ ಆದರೆ ವರ್ಣಗಳನ್ನು ಗುಣಕರ್ಮದಿಂದ ವಿಭಾಗಿಸಿರುವುದು. ಬ್ರಾಹ್ಮಣರ ಮನೆಯಲ್ಲಿ ಹುಟ್ಟುವ ಹುಡುಗ ಬ್ರಾಹ್ಮಣ ಜಾತಿಯ ಹುಡುಗ. ಆದರೆ ಆತ ಸ್ವಭಾವತಃ ಕ್ಷತ್ರಿಯನಾಗಿರಲೂಬಹುದು; ಒಂದೇ ಮನೆಯಲ್ಲಿ ನಾಲ್ಕು ವರ್ಣದ ಮಕ್ಕಳು ಹುಟ್ಟಲೂಬಹುದು. ಬೆಸ್ತರ ಹುಡುಗಿಯಲ್ಲಿ ಹುಟ್ಟಿದ ವೇದವ್ಯಾಸರು ಮಹಾಬ್ರಾಹ್ಮಣ. ಇದು ವರ್ಣವನ್ನು ಅವಲಂಬಿಸಿ ಬಂದದ್ದು. ಅದೇ ವೇದವ್ಯಾಸರ ಮಗ, ಶ್ರೇಷ್ಠ ಜ್ಞಾನಿ-ವಿದುರ ‘ಕ್ಷತ್ತಾ'(ಕೆಲಸದವಳ ಮಗ). ಇದು ಸಾಮಾಜಿಕ ರಾಜಕೀಯದಿಂದ ಬಂದಿದ್ದು! ಜೀವಸ್ವಭಾವ ಮತ್ತು ಕರ್ಮಕ್ಕನುಗುಣವಾಗಿ ಭಗವಂತ ಒಂದು ವರ್ಣವನ್ನು ಜೀವಕ್ಕೆ ಹುಟ್ಟುವಾಗಲೇ ಕೊಟ್ಟಿರುತ್ತಾನೆ.
ವರ್ಣ ಇಲ್ಲದೆ ಸಮಾಜ ಸುಗಮವಾಗಿ ನಡೆಯದು. ಪುರುಷಸೂಕ್ತದಲ್ಲಿ ಈ ನಾಲ್ಕು ವರ್ಣಗಳನ್ನು ಆಯಾ ವರ್ಣದ ಕರ್ಮಕ್ಕನುಗುಣವಾಗಿ ದೇಹದ ನಾಲ್ಕು ಭಾಗವಾಗಿ ಈ ರೀತಿ ವಿವರಿಸಿದ್ದಾರೆ:
ಬ್ರಾಹ್ಮಣೋಸ್ಯ ಮುಖಮಾಸೀತ್ | ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ | ಪದ್ಭ್ಯಾಗಮ್ ಶೂದ್ರೋ ಅಜಾಯತ
ದೇಹಕ್ಕೆ ಪಂಚಾಗವಾಗಿರುವ ಹಾಗು ಪೂಜೆಯಲ್ಲಿ ಶ್ರೇಷ್ಠ ಎನಿಸಿದ ಪಾದವನ್ನು ಶೂದ್ರನಿಗೆ ಹೋಲಿಸಿದರು. ಇದು ದೇಹದ ಅಡಿಪಾಯ. ಶೂದ್ರ ಎಂದರೆ ದುಃಖದಲ್ಲಿ ಕರಗಿದವ ಎಂದರ್ಥ. ಈತನಲ್ಲಿ ಅರೆಸೊತ್ತಿಗೆ ಇರುವುದಿಲ್ಲ. ಆದರೆ ಇನ್ನೊಬ್ಬರ ಸೇವೆ ಮಾಡುವ ಸೇವಾ ಗುಣ ಮಹತ್ವವಾಗಿರುತ್ತದೆ (Service Quality). ಈ ಗುಣ ಇಲ್ಲದವ ಮನುಷ್ಯನೇ ಅಲ್ಲ. ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಾಗಿದೆಯೋ(majority) ನಾವು ಆ ವರ್ಣಕ್ಕೆ ಸೇರುತ್ತೇವೆ. ಶೂದ್ರ ಸ್ವಭಾವ ಎಷ್ಟು ಮುಖ್ಯ ಎಂದರೆ ಈ ಸ್ವಭಾವ ಇಲ್ಲದೆ ಬೇರೆ ಸ್ವಭಾವಕ್ಕೆ ಬೆಲೆ ಇಲ್ಲ. ಯಾವಾಗಲೂ ನಾವು ಮಾಡುವ ಕರ್ಮವನ್ನು ಸೇವಾ ಮನೋವೃತ್ತಿಯಿಂದ ಮಾಡಬೇಕು. ಬ್ರಾಹ್ಮಣನಾದವನು ಸಮಾಜ ಸೇವೆಯ ಭಾವನೆಯಿಂದ ಜ್ಞಾನದಾನ ಮಾಡಬೇಕು. ಇಲ್ಲದಿದ್ದರೆ ಅದು ಜ್ಞಾನದಾನವೆನಿಸುವುದಿಲ್ಲ.
ವೈಶ್ಯನನ್ನು ದೇಹದ ಸೊಂಟದ ಭಾಗಕ್ಕೆ ಹೋಲಿಸಿದರು. ಕಾರಣ ಈತನ ಸ್ವಭಾವ ವ್ಯಾಪಾರ ಮತ್ತು ವಾಣಿಜ್ಯ(Production). ಸಾಮಾನ್ಯವಾಗಿ ಹಿಂದಿನ ಕಾಲದ ಜೀವನ ಪದ್ದತಿಯಂತೆ ವೈಶ್ಯರು ಒಂದು ಊರಿನಿಂದ ಇನ್ನೊಂದು ಊರಿಗೆ ಸಂಚರಿಸುತ್ತಾ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದರು. ಆದ್ದರಿಂದ ಅವರನ್ನು ಸೊಂಟಕ್ಕೆ ಹೋಲಿಸಿದ್ದಾರೆ.
ಕ್ಷತ್ರಿಯರ ಸ್ವಭಾವ ತಮ್ಮ ತೋಳ್ಬಲದಿಂದ ಸಮಾಜದ ರಕ್ಷಣೆ ಮಾಡುವುದು ಮತ್ತು ಆಡಳಿತ (Protection and Administration) ನೆಡೆಸುವುದಾದ್ದರಿಂದ ಅವರನ್ನು ತೋಳಿಗೆ ಹೋಲಿಸಿದ್ದಾರೆ.
ಇನ್ನು ಬ್ರಾಹ್ಮಣ ಸ್ವಭಾವ; ಇವರ ಮೂಲಕರ್ಮ ಜ್ಞಾನದ ಮಾರ್ಗದರ್ಶನ(Wisdom). ಅದಕ್ಕಾಗಿ ಇವರನ್ನು ತಲೆಗೆ ಹೋಲಿಸಿದರು. ಸ್ವಭಾವತಃ ಬ್ರಾಹ್ಮಣ ಎನಿಸಿದವನು ಸದಾ ಭಗವಂತನ ಚಿಂತನೆ, ಇಂದ್ರಿಯ ನಿಗ್ರಹ, ಸುಳ್ಳು ಹೇಳದ, ಮುಖವಾಡ ಇಲ್ಲದ ಬದುಕು, ಸದಾ ಅಂತರಂಗ ಬಹಿರಂಗ ಶುದ್ಧಿ- ಈ ಮೂಲ ಗುಣಗಳನ್ನು ಹೊಂದಿರುತ್ತಾನೆ.
ಹೀಗೆ ಈ ನಾಲ್ಕು ವರ್ಣಗಳು ಸೇರಿದರೆ ಮಾತ್ರ ಒಂದು ಪರಿಪೂರ್ಣ ಸಮಾಜ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಮೇಲು-ಕೀಳು ಎನ್ನುವ ಭಾವನೆ ಸಲ್ಲ. ಎಲ್ಲರೂ ಮೋಕ್ಷ ಯೋಗ್ಯ ಜೀವರೆ. ಇದು ಆಧ್ಯಾತ್ಮಿಕ ವರ್ಗೀಕರಣ ಮತ್ತು ವ್ಯವಸ್ಥೆ. ‘ಇದನ್ನು ಅನಾದಿನಿತ್ಯವಾದ ಜೀವದ ಮೂಲ ಸ್ವಭಾವಕ್ಕನುಗುಣವಾಗಿ ಮತ್ತು ಕರ್ಮಕ್ಕನುಗುಣವಾಗಿ ನಾನು ಈ ಭೂಮಿ ಮೇಲೆ ಸೃಷ್ಟಿಸಿದೆ’ ಎಂದಿದ್ದಾನೆ ಕೃಷ್ಣ.
ಇಲ್ಲಿ ನಾವು ತಿಳಿಯಬೇಕಾದ ಒಂದು ಮೂಲಭೂತ ಅಂಶವೇನೆಂದರೆ- ಜೀವವನ್ನು ಭಗವಂತ ಸೃಷ್ಟಿಸಿಲ್ಲ. ಜೀವ ಮತ್ತು ಜೀವಸ್ವಭಾವ ಅನಾದಿನಿತ್ಯ. ಜೀವದ ಸ್ವಭಾವಕ್ಕನುಗುಣವಾಗಿ ಅದಕ್ಕೆ ಬೇಕಾದ ದೇಹ, ಶಕ್ತಿ, ಪ್ರಪಂಚದ ನಿರ್ಮಾಣ ಮಾಡಿ, ಅದಕ್ಕೊಂದು ಅಸ್ಥಿತ್ವ ಕೊಟ್ಟು, ಜೀವಸ್ವಭಾವದ ವಿಕಾಸಕ್ಕೊಸ್ಕರ ಜೀವವನ್ನು ಬಿತ್ತಿ ಬೆಳೆಸುವವ ಭಗವಂತ. ಇಂತಹ ಭಗವಂತ ಎಲ್ಲರ ಕರ್ತಾರ, ಆತನಿಗೆ ಇನ್ನೊಬ್ಬ ಕರ್ತಾರನಿಲ್ಲ. ಆತ ಎಲ್ಲವುದರ ಕಾರಣ ಆದರೆ ಆತನಿಗೆ ಕಾರಣವಾದ ಇನ್ನೊಂದು ವಸ್ತು ಇಲ್ಲ. “ಬದಲಾವಣೆಗೊಳ್ಳದ ನಾನು ಅದನ್ನು ನಿರ್ಮಿಸಿದವನು ಮತ್ತು ನನ್ನನ್ನು ಯಾರೂ ನಿರ್ಮಿಸಿಲ್ಲ ಎಂದು ತಿಳಿ” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.