ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 04

ಶ್ಲೋಕ – 12

ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ ॥೧೨॥

ಕಾಂಕ್ಷಂತಃ ಕರ್ಮಣಾಮ್ ಸಿದ್ಧಿಮ್ ಯಜಂತೇ ಇಹ ದೇವತಾಃ ।

ಕ್ಷಿಪ್ರಮ್ ಹಿ ಮಾನುಷೇ ಲೋಕೇ ಸಿದ್ಧಿಃ ಭವತಿ ಕರ್ಮಜಾ -ಕರ್ಮಗಳ ಮೂಲಕ ಫಲವನ್ನು ಬಯಸುವವರು ಇಲ್ಲಿ ದೇವತೆಗಳನ್ನು ಪೂಜಿಸುತ್ತಾರೆ. ಈ ಭೂಮಿಯಲ್ಲಿ ಕರ್ಮದಿಂದ ಫಲ ಸಿದ್ಧಿ ಒಡನೆ ಕೈಗೂಡುತ್ತದೆಯಲ್ಲವೇ ?

ನಮ್ಮಲ್ಲಿ ಕೆಲವರು ದೇವತೆಗಳಿಗು ಮತ್ತು ಭಗವಂತನಿಗು ವ್ಯತ್ಯಾಸ ತಿಳಿಯದೆ, ದೇವತಗಳನ್ನೇ ಭಗವಂತನೆಂದು ಪೂಜಿಸುತ್ತಾರೆ. ಇದು ದೇವತೆಗಳ ಬಗ್ಗೆ ನಮ್ಮಲ್ಲಿರುವ ಒಂದು ತಪ್ಪು ಕಲ್ಪನೆ. ದೇವರು ಅನೇಕ ಅಲ್ಲ ಆತ ಒಬ್ಬನೆ; ಆದರೆ ಭಗವಂತನ ಅಧೀನವಾಗಿರುವ ದೇವತೆಗಳು ಅನೇಕ. ನಾವು ತಕ್ಷಣ ಫಲ ಪಡೆಯುವ ಅಪೇಕ್ಷೆಯಿಂದ ಭಗವಂತನನ್ನು ಮರೆತು ದೇವತೆಗಳ ಸಮೂಹವನ್ನು ಪೂಜಿಸುವ ಸಂಪ್ರದಾಯವನ್ನು ಬೆಳೆಸಿಕೊಂಡುಬಿಟ್ಟಿದ್ದೇವೆ. ಈ ರೀತಿ ಮಾಡುವುದರಿಂದ ಫಲ ಸಿಗಬಹುದು- ಆದರೆ ಅದು ಅಲ್ಪಕಾಲದ್ದು. ಐಹಿಕ ಸುಖವನ್ನು ಬಯಸಿ ವಿವಿಧ ದೇವತೆಗಳನ್ನು ವಿವಿಧ ಫಲಕ್ಕಾಗಿ ಪೂಜಿಸುವುದು ನಮ್ಮನ್ನು ಶಾಶ್ವತವಾದ ಮೋಕ್ಷ ಮಾರ್ಗದತ್ತ ಕೊಂಡೊಯ್ಯಲಾರದು. ಇಂದ್ರಿಯ ಭೋಗಕ್ಕಾಗಿ ಮಾಡುವ ಪೂಜೆ- ಪೂಜೆ ಎನಿಸಲಾರದು. ದೇವತೆಗಳು ಮೋಕ್ಷ ಮಾರ್ಗದಲ್ಲಿ ನಮಗೆ ಸಹಾಯ ಮಾಡಬಲ್ಲರು, ಆದರೆ ಸರ್ವಶಕ್ತ ಭಗವಂತನ ಎಚ್ಚರ ಬಹಳ ಮುಖ್ಯ.

ಭಗವಂತನನ್ನು ಯಾವ ರೂಪದಲ್ಲೇ ಪೂಜಿಸದರೂ ಐಹಿಕ ಭೋಗಕ್ಕಾಗಿ ಪೂಜಿಸದೆ, ಆ ಸರ್ವಾಂತರ್ಯಾಮಿ ಭಗವಂತನನ್ನು ಸೇರುವ ಅನುಸಂಧಾನದಿಂದ ಪೂಜಿಸುವುದು ಅಧ್ಯಾತ್ಮ ಸಾಧನೆಯಲ್ಲಿ ಅತಿ ಮುಖ್ಯ ವಿಚಾರ. ನೀನು ನಿನ್ನ ದೇವರನ್ನು ಕೃಷ್ಣ ಎಂದರೂ ಸರಿ, ಅಲ್ಲಾಹು ಎಂದರೂ ಸರಿ. ಆದರೆ ನಮ್ಮೆಲ್ಲರನ್ನು ಕಾಪಾಡಿ ಪೋಷಿಸುವ ಶಕ್ತಿ ಒಂದೇ ಎನ್ನುವ ನಿಜ ತಿಳಿದಿರಲಿ. ಭಗವಂತನನ್ನು ವಿವಿಧ ರೂಪದಲ್ಲಿ ಪೂಜಿಸಬಹುದು. ಆದರೆ ವಿವಿಧ ಭೋಗಕ್ಕಾಗಿ ವಿವಿಧ ದೇವತೆಗಳನ್ನು ದೇವರೆಂದು ಪೂಜಿಸುವುದು ಅಧ್ಯಾತ್ಮ ಸಾಧನೆಯಾಗಲಾರದು. ದೇವತೆಗಳ ಮುಖೇನ ಅಥವಾ ದೇವತೆಗಳಲ್ಲಿ ಭಗವಂತನನ್ನು ಕಾಣುವುದು ತಪ್ಪಲ್ಲ. ಏಕೆಂದರೆ ಭಗವಂತ ಸರ್ವಾಂತರ್ಯಾಮಿ, ಆತನಿರದ ಸ್ಥಳವಿಲ್ಲ. ಇದನ್ನು ಬಿಟ್ಟು ದೇವತೆಗಳನ್ನೇ ಭಗವಂತ ಎಂದು ಪೂಜಿಸಿದರೆ ಅದನ್ನು ದೇವತೆಗಳೂ ಮೆಚ್ಚಲಾರರು.

ತನ್ನ ಅವತಾರದ ಉದ್ದೇಶ ಮತ್ತು ರಹಸ್ಯವನ್ನು ತಿಳಿಹೇಳಿದ ಕೃಷ್ಣ, ಅಂತಹ ಜ್ಞಾನದಿಂದ ಸಿದ್ಧಿ ಪಡೆದ ಉದಾಹರಣೆ ನೀಡಿದ. ಬಹುದೇವತಾ ವಾದವನ್ನು ತೊಡೆದು ಹಾಕಿ ದೇವರು ಒಬ್ಬನೇ, ದೇವತೆಗಳು ಹಲವು ಎನ್ನುವುದನ್ನು ಸ್ಪಷ್ಟಪಡಿಸಿದ ಹಾಗು ಉಪಾಸನೆ ಹೇಗಿರಬೇಕು ಎನ್ನುವುದನ್ನೂ ಸ್ಪಷ್ಟವಾಗಿ ಹೇಳಿದ. ಈ ಸಂದರ್ಭದಲ್ಲಿ ನಮಗೆ ಒಂದು ಪ್ರಶ್ನೆ ಮೂಡಬಹುದು. ಮನುಕುಲದ ಸೃಷ್ಟಿ ಈ ಭೂಮಿಯ ಮೇಲೆ ಭಗವಂತನಿಂದಾಯಿತು. ಆದರೆ ಒಬ್ಬ ಮಾನವ ಇನ್ನೊಬ್ಬನಂತಿಲ್ಲ. ಸ್ವಭಾವ ವೈವಿಧ್ಯತೆಯ ಮೂಲವೇನು? ಭಗವಂತ ಒಬ್ಬಬ್ಬರನ್ನು ಒಂದೊಂದು ರೀತಿ ಏಕೆ ಸೃಷ್ಟಿ ಮಾಡಿದ್ದಾನೆ? ಈ ಪ್ರಶ್ನೆಗೆ ಮುಂದಿನ ಶ್ಲೋಕದಲ್ಲಿ ಕೃಷ್ಣ ಉತ್ತರಿಸುತ್ತಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *