ಶ್ಲೋಕ – 11
ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ ।
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ ॥೧೧॥
ಯೇ ಯಥಾ ಮಾಮ್ ಪ್ರಪದ್ಯಂತೇ ತಾನ್ ತಥಾ ಏವ ಭಜಾಮಿ ಅಹಮ್ ।
ಮಮ ವರ್ತ್ಮಾ ಅನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ -ಯಾರು ಹೇಗೆ ನನ್ನನು ಸೇವಿಸುತ್ತಾರೆ ಅವರನ್ನು ಹಾಗೆಯೇ ನಾನು ಅನುಗ್ರಹಿಸುತ್ತೇನೆ. ಓ ಪಾರ್ಥ, ಮನುಷ್ಯರು ಯಾವ ದಾರಿಯಲ್ಲಿ ಸಾಗಿದರೂ ಕಡೆಗೆ ನನ್ನೆಡೆಗೆಯೇ ಬರುತ್ತಾರೆ.
ದೇವರ ಉಪಾಸನೆಗೆ ಸರಿಯಾದ ದಾರಿ ಯಾವುದು? ಒಬ್ಬಬ್ಬರು ಒಂದೊಂದು ರೀತಿ ಉಪಾಸನೆ ಮಾಡುತ್ತಾರೆ. ಅದರಿಂದ ಗೊಂದಲ, ಆವೇಶ. ಯಾರು ಯಾವ ರೀತಿ ಉಪಾಸನೆ ಮಾಡುತ್ತಾರೋ ಭಗವಂತ ಹಾಗೆಯೇ ಅನುಗ್ರಹಿಸುತ್ತಾನೆ. ನಾವು ಯಾವ ರೂಪದಿಂದ ಉಪಾಸನೆ ಮಾಡಿದರೂ ಅದು ವಿಶ್ವರೂಪನಾದ ಭಗವಂತನನ್ನು ಸೇರುತ್ತದೆ. ಅದಕ್ಕಾಗಿ ನಾವು ನಮ್ಮ ಪೂಜೆಯನ್ನು ಭಗವಂತನ ವಿಶೇಷ ವಿಭೂತಿ ಇರುವ ತುಳಸಿ, ಅಶ್ವತ್ಥವೃಕ್ಷ, ಗೋವು ಇತ್ಯಾದಿ ರೂಪದಲ್ಲಿ ಪೂಜಿಸುತ್ತೇವೆ. ಆದರೆ ಇಲ್ಲಿ ಒಂದು ಎಚ್ಚರ ಅಗತ್ಯ. ತುಳಸಿ ಗಿಡವನ್ನೇ ಭಗವಂತನೆಂದು ನಂಬಿ ಪೂಜಿಸದೇ, ತುಳಸಿಯಲ್ಲಿ ಭಗವಂತನ ವಿಶೇಷ ವಿಭೂತಿ ಅಡಗಿದೆ ಎಂದು ಪೂಜಿಸುವುದು ಮುಖ್ಯ. ಹೀಗೆ ನಮ್ಮ ಪ್ರತಿಯೊಂದು ಕ್ರಿಯೆಯಲ್ಲಿ ನಮಗೆ ಭಗವಂತನ ಎಚ್ಚರ ಮತ್ತು ಜ್ಞಾನ ಅಗತ್ಯ.ಯಾವ ಹೆಸರಿನಿಂದ ಭಗವಂತನನ್ನು ಕರೆದರೂ ಅದು ಸರ್ವಶಬ್ದ ವಾಚ್ಯ ಭಗವಂತನ ನಾಮ ಎನ್ನುವ ಎಚ್ಚರ ಅಗತ್ಯ. ಏಲ್ಲಿ ಕುಳಿತು ಪೂರ್ಣ ಅರ್ಪಣಾಭಾವದಿಂದ ಭಗವಂತನನ್ನು ನೆನೆದರೂ ಅದು ವಿಶ್ವರೂಪಿ ವಿಶ್ವಂಭರನನ್ನು ಸೇರುತ್ತದೆ. ಆತ ಸದಾ ನಮ್ಮ ರಕ್ಷಣೆ ಮಾಡುತ್ತಾನೆ.