ಶ್ಲೋಕ – 06
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಚರನ್ ।
ಇಂದ್ರಿಯಾರ್ಥಾನ್ ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ ॥೬॥
ಕರ್ಮೇಂದ್ರಿಯಾಣಿ ಸಂಯಮ್ಯ ಯಃ ಆಸ್ತೇ ಮನಸಾ ಚರನ್ ಇಂದ್ರಿಯ ಅರ್ಥಾನ್ ವಿಮೂಢ ಆತ್ಮಾ ಮಿಥ್ಯಾ ಆಚಾರಃ ಸಃ ಉಚ್ಯತೇ- ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ ಡಂಭಾಚಾರಿ ಎನಿಸುತ್ತಾನೆ.
ಈ ಶ್ಲೋಕದಲ್ಲಿ ಕೃಷ್ಣ ಒಂದು ಮುಖ್ಯವಾದ ವಿಚಾರವನ್ನು ಹೇಳಿದ್ದಾನೆ. ಸಾಮಾನ್ಯವಾಗಿ ಇಂದಿನ ಪ್ರಪಂಚದಲ್ಲಿ ಹೊರಗಿನ ವೇಷಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುತ್ತಿರುವುದನ್ನು ನಾವು ಕಾಣುತ್ತೇವೆ. ಮನಸ್ಸಿನಲ್ಲಿ ಎಲ್ಲಾ ಆಸೆ ಇಟ್ಟುಕೊಂಡು, ಯಾವುದೋ ಭಯದಿಂದ ಹೊರ ನೋಟಕ್ಕೆ ಸದಾಚಾರಸಂಪನ್ನರಂತೆ ಬದುಕುವವರಿದ್ದಾರೆ. ಕೃಷ್ಣ ಇದನ್ನು ಕಪಟ ಧಾರ್ಮಿಕತೆ ಎನ್ನುತ್ತಾನೆ. ನಾವು ಮೊದಲು ನಮ್ಮ ಆತ್ಮ ಸಾಕ್ಷಿಗೆ ವಂಚನೆ ಮಾಡದೆ ಬದುಕಬೇಕು. ಹೊರಗಿನ ಆಚಾರಕ್ಕಿಂತ ಮೊದಲು ಒಳಗಿನ ಆಚಾರಶುದ್ಧಿ ಮುಖ್ಯ. ಇದಿಲ್ಲದಿದ್ದರೆ ಎಂದೂ ಉದ್ಧಾರವಿಲ್ಲ. ಕರ್ಮೇಂದ್ರಿಯಗಳನ್ನು ಅದುಮಿಟ್ಟು, ಮನಸಿನಿಂದಲೇ ಇಂದ್ರಿಯ ವಿಷಯಗಳ ಕನಸು ಕಾಣುವ ತಿಳಿಗೇಡಿ ಡಂಭಾಚಾರಿ ಎನಿಸುತ್ತಾನೆ ಎಂದಿದ್ದಾನೆ ಕೃಷ್ಣ.