ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 03

ಶ್ಲೋಕ – 05

ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ ।
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥೫॥

ನ ಹಿ ಕಶ್ಚಿತ್ ಕ್ಷಣಮ್ ಅಪಿ ಜಾತು ತಿಷ್ಠತಿ ಅಕರ್ಮ ಕೃತ್ ಕಾರ್ಯತೇ ಹಿ ಅವಶಃ ಕರ್ಮ ಸರ್ವಃ ಪ್ರಕೃತಿಜೈಃ ಗುಣೈಃ–ಯಾವನೂ ಒಂದು ಕ್ಷಣ ಕೂಡಾ ಏನೂ ಮಾಡದೆ ತೆಪ್ಪಗಿರುವುದು ಸಾಧ್ಯವಿಲ್ಲ. ಪ್ರತಿಯೊಬ್ಬನೂ ಪ್ರಕೃತಿಯ ಗುಣಗಳಿಂದ ಅರಿವಿಲ್ಲದೆಯೇ (ಭಗವಂತನ ಅಧೀನವಾಗಿ) ಕರ್ಮ ಮಾಡುತ್ತಾನೆ.

ಕರ್ಮತ್ಯಾಗದಿಂದ ಸಿದ್ಧಿ ಸಿಗದು. ಅಷ್ಟೇ ಅಲ್ಲ, ಕರ್ಮ ತ್ಯಾಗ ಮಾಡುವುದು ಸಾಧ್ಯವಿಲ್ಲ! ನಮ್ಮ ಅನ್ನಮಯ ಮತ್ತು ಪ್ರಾಣಮಯ ಕೋಶ ನಿರಂತರ ಕಾರ್ಯ ನಿರ್ವಹಿಸುತ್ತಿರುತ್ತವೆ. ಬದುಕಿರುವಾಗ ನಿಷ್ಕ್ರೀಯರಾಗಿರುವುದು ಅಸಾಧ್ಯ. ಯಾವ ಕಾಲದಲ್ಲೂ ಕೂಡಾ ಒಂದು ಕ್ಷಣ ನಿಷ್ಕ್ರೀಯನಾಗಿ ಇರುವುದು ಸಾಧ್ಯವಿಲ್ಲ. “ಕಾರ್ಯತೇ ಹಿ ಅವಶಃ”-ದೇಹದ ಒಳಗಿರುವ ಜೀವ ದೇಹದ ಮೂಲಕ ಮನಸ್ಸಿನ ಮೂಲಕ, ಮಾತಿನ ಮೂಲಕ-ಕೆಲಸ ಮಾಡಿಸಲ್ಪಡುತ್ತದೆ. ಅದು ನಮ್ಮ ಸ್ವಾಧೀನದಲ್ಲಿರುವುದಿಲ್ಲ, ಅದು ಭಗವಂತನ ವಶ.

ಇಡೀ ವಿಶ್ವವೇ ಪ್ರಕೃತಿಯಿಂದ ಸೃಷ್ಠಿಯಾಗಿದೆ. ಅದರ ಮೂಲ ದ್ರವ್ಯ ಸತ್ವ-ರಜಸ್ಸು-ತಮಸ್ಸು. ಜೀವಕ್ಕೆ ಅದರದ್ದೇ ಆದ ಸ್ವಭಾವವಿರುತ್ತದೆ, ಅದಕ್ಕನುಗುಣವಾಗಿ ಪ್ರಕೃತಿಯ ಈ ತ್ರಿಗುಣಗಳ ಪ್ರಭಾವ ನಮ್ಮ ಮೇಲಾಗುತ್ತಿರುತ್ತದೆ. ಆದ್ದರಿಂದ ನಿಷ್ಕ್ರೀಯತೆ ಎನ್ನುವುದು ಅರ್ಥ ಶೂನ್ಯ. ನಾವು ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಕರ್ತವ್ಯ ಶೀಲರಾಗಬೇಕು. ಅದರೊಂದಿಗೆ ಮಾನಸಿಕವಾಗಿ ಐಹಿಕ ಪ್ರಪಂಚದಿಂದ ಆಚೆಗಿನ ಸತ್ಯದ ಕಡೆ ನಮ್ಮ ಮನಸ್ಸು ಜಾಗೃತವಾಗಿರಬೇಕು. ಈ ಎಚ್ಚರದಿಂದ ಎಲ್ಲಾ ಕರ್ತವ್ಯ ಕರ್ಮಗಳನ್ನು ಮಾಡಬೇಕು. ನಿಷ್ಕ್ರೀಯತೆ ವೇದಾಂತವಲ್ಲ-ಕರ್ತವ್ಯಚ್ಯುತಿ ಅಧ್ಯಾತ್ಮವಲ್ಲ. ಭಗವಂತನ ಪ್ರಜ್ಞೆಯೊಂದಿಗೆ ನಿನ್ನ ಪಾಲಿನ ಕರ್ಮ ನೀನು ಮಾಡು. ಹೀಗೆ ಮಾಡಿದಾಗ ಕರ್ಮ ಮತ್ತು ಜ್ಞಾನ ಮಾರ್ಗಗಳು ಒಂದಕ್ಕೊಂದು ಪೂರಕವಾಗುತ್ತವೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *