ಶ್ಲೋಕ – 04
ನ ಕರ್ಮಣಾಮನಾರಂಭಾನ್ನೈಷ್ಕರ್ಮ್ಯಂ ಪುರುಷೋsಶ್ನುತೇ ।
ನಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ ॥೪॥
ನ ಕರ್ಮಣಾಮ್ ಅನಾರಂಭಾತ್ ನೈಷ್ಕರ್ಮ್ಯಂ ಪುರುಷಃ ಅಶ್ನುತೇ ನ ಚ ಸಂನ್ಯಸನಾತ್ ಏವ ಸಿದ್ಧಿಮ್ ಸಮಧಿಗಚ್ಛತಿ–ಕರ್ಮಗಳಲ್ಲಿ ತೊಡಗದೆ ಇರುವುದರಿಂದ ಸಾಧಕ ಕರ್ಮಗಳಿಂದ ಬಿಡುಗಡೆ ಹೊಂದುವುದಿಲ್ಲ. ಕರ್ಮ ಫಲವನ್ನು ತೊರೆದ ಮಾತ್ರಕ್ಕೆ ಸಿದ್ಧಿ ಪಡೆಯುವುದಿಲ್ಲ.
ಶಾಸ್ತ್ರಗಳಲ್ಲಿ ಹೇಳುವಂತೆ ‘ಕರ್ಮ ಬಂಧನದ ದಾರಿ ಹಾಗು ಜ್ಞಾನ ಬಿಡುಗಡೆಯ ದಾರಿ’. ಆದರೆ ಕೃಷ್ಣ ಹೇಳಿದ -ಮೋಕ್ಷಕ್ಕೆ ಜ್ಞಾನಪ್ರದವಾದ ಮತ್ತು ಕರ್ಮಪ್ರದವಾದ ಎರಡು ಮಾರ್ಗಗಳಿವೆ ಎಂದು. ಇಲ್ಲಿ ಅದರ ವಿವರಣೆ ಕೊಡುತ್ತಾನೆ ಕೃಷ್ಣ. “ಮೋಕ್ಷ ನಿಷ್ಕರ್ಮದಿಂದ ಪಡೆಯುವಂತದ್ದು-ಕರ್ಮ ಬಂಧಕ” ಅನ್ನುವುದಾದರೆ, ಒಂದು ಶರೀರದಲ್ಲಿ ಜೀವ ಏನೂ ಕರ್ಮ ಮಾಡದೆ ಇರಲು ಸಾಧ್ಯವೇ ಇಲ್ಲ. ದೇಹ ಬಂದ ಮೇಲೆ ಕರ್ಮ ಕ್ರಿಯೆ ನಡೆದೇ ನಡೆಯುತ್ತದೆ. ಕರ್ಮ ಮಾಡುವುದನ್ನು ಬಿಟ್ಟ ತಕ್ಷಣ ಮೋಕ್ಷ ದೊರೆಯದು. ಮೂಲತಃ ಕರ್ಮವನ್ನು ತೊರೆಯುವುದೂ ಸಾಧ್ಯವಿಲ್ಲ. ಜ್ಞಾನಕ್ಕೆ ಪೂರಕವಲ್ಲದ ಯಾಂತ್ರಿಕ ಕರ್ಮ ಬಂಧಕ. ಜ್ಞಾನಕ್ಕೆ ಪೂರಕವಾದ ಕರ್ಮ ಎಂದೂ ಬಂಧಕವಲ್ಲ. ಕರ್ಮದ ಫಲವನ್ನು ಬಯಸದೇ ಇದ್ದ ತಕ್ಷಣ ಯಾವ ಸಿದ್ಧಿಯೂ ಆಗದು. ಕೇವಲ ಕರ್ಮತ್ಯಾಗ ಮಾಡುವುದರಿಂದ ಎಂದೂ ಸಿದ್ಧಿ ಪಡೆಯಲು ಸಾಧ್ಯವಿಲ್ಲ.