ಶ್ಲೋಕ – 39
ಆವೃತಂ ಜ್ಞಾನಮೇತೇನ ಜ್ಞಾನಿನೋ ನಿತ್ಯವೈರಿಣಾ ।
ಕಾಮರೂಪೇಣ ಕೌಂತೇಯ ದುಷ್ಪೂರೇಣಾನಲೇನ ಚ ॥೩೯॥
ಆವೃತಮ್ ಜ್ಞಾನಮ್ ಏತೇನ ಜ್ಞಾನಿನಃ ನಿತ್ಯವೈರಿಣಾ
ಕಾಮ ರೂಪೇಣ ಕೌಂತೇಯ ದುಷ್ಪೂರೇಣ ಅನಲೇನ ಚ-ಓ ಕೌಂತೇಯ, ಬೆಂಕಿಯಂತೆ ಕಬಳಿಸಿದಷ್ಟೂ ತೃಪ್ತಿಯಿಲ್ಲದೆ, ಕೊನೆಯಿಲ್ಲದ ಈ ಕಾಮವೆಂಬುದು ಸಾಧಕನ ಚಿರಶತ್ರು. ಇದು ಬಲ್ಲವರ ತಿಳಿವನ್ನೂ ಕವಿದು ಮಂಕಾಗಿಸುತ್ತದೆ.
ಈ ರಜೋಗುಣದ ಪರದೆ- ಜ್ಞಾನ ಬಂದವನಿಗೆ ಇದ್ದ ಜ್ಞಾನ ಉಪಯೋಗವಾಗದಂತೆ, ಜ್ಞಾನವಿಲ್ಲದವನಿಗೆ ಜ್ಞಾನ ಬರದಂತೆ-ತಡೆಗೋಡೆಯಾಗಿ ನಿಲ್ಲುತ್ತದೆ. ರಾಗ-ದ್ವೇಷ ನಮ್ಮ ಕಡು ವೈರಿ. ಅದು ಎಷ್ಟು ಭಯಂಕರ ಎಂದರೆ ಅದನ್ನು ‘ಬಯಕೆಯ ಬೆಂಕಿ’ ಎನ್ನಬಹುದು. ಅದಕ್ಕೆ ಎಷ್ಟು ಬಡಿಸಿದರೂ ಅದು ಸಾಕು ಎನ್ನದು. ಕುಂತಿಯಂತಹ ಮಹಾ ತಾಯಿಯ ಮಗನಾದ ನೀನು ಈ ಕಾಮ(ಬಯಕೆ, Attachment) ಎನ್ನುವ ಜ್ಞಾನ ವಿರೋಧಿ ಶತ್ರುವನ್ನು ತಿಳಿ ಎನ್ನುತ್ತಾನೆ ಕೃಷ್ಣ.
ಇಲ್ಲಿ ನಮಗೆ ನಮ್ಮ ನಿಜ ವೈರಿ ನಮ್ಮ ಕಾಮ ಅಥವಾ ಬಯಕೆ, ಅಥವಾ ರಾಗ-ದ್ವೇಷ ಎಂದು ತಿಳಿಯಿತು. ಹಾಗಿದ್ದರೆ ಈ ವೈರಿಯ ನೆಲೆ ಯಾವುದು? ಇದನ್ನು ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸಿದ್ದಾನೆ.