ಶ್ಲೋಕ – 38
ಧೂಮೇನಾsವ್ರಿಯತೇ ವಹ್ನಿರ್ಯಥಾssದರ್ಶೋ ಮಲೇನ ಚ ।
ಯಥೋಲ್ಬೇನಾsವೃತೋ ಗರ್ಭಸ್ತಥಾ ತೇನೇದಮಾವೃತಮ್ ॥೩೮॥
ಧೂಮೇನ ಅವ್ರಿಯತೇ ವಹ್ನಿಃ ಯಥಾ ಆದರ್ಶಃ ಮಲೇನ ಚ
ಯಥಾ ಉಲ್ಬೇನ ಆವೃತಃ ಗರ್ಭಃ ತಥಾ ತೇನ ಇದಮ್ ಆವೃತಮ್ -ಹೊಗೆಯಿಂದ ಬೆಂಕಿ ಕವಿದಂತೆ (ಭಗವಂತ), ಕೊಳೆಯಿಂದ ಕನ್ನಡಿ ಕವಿದಂತೆ(ಮನಸ್ಸು), ಗರ್ಭ ಕೋಶದಿಂದ ಭ್ರೂಣ ಕವಿದಂತೆ(ಜೀವ), ಕಾಮದಿಂದ ಈ ಎಲ್ಲಾ ಕವಿದುಕೊಂಡಿದೆ.[ಹೊಗೆ ಬೆಂಕಿಯನ್ನು ಕವಿದಂತೆ ಕಾಮ ಸಜ್ಜನರನ್ನು ಕವಿಯುತ್ತದೆ. ಕೊಳೆ ಕನ್ನಡಿಯನ್ನು ಕೆಡಿಸಿದಂತೆ ಮಧ್ಯಮರನ್ನು. ಗರ್ಭಕೋಶ ಭ್ರೂಣವನ್ನು ಮುಚ್ಚಿದಂತೆ ದುರ್ಜನರನ್ನು]
ರಾಗ ದ್ವೇಷಗಳು ಹೇಗೆ ನಮ್ಮ ಕಣ್ಣನ್ನು ಕಟ್ಟುತ್ತವೆ ಎನ್ನುವುದಕ್ಕೆ ಒಂದು ಸುಂದರ ವಿವರಣೆಯನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ. ಎಲ್ಲವನ್ನು ಬೆಳಗುತ್ತಿರುವ ಬೆಂಕಿ, ಅದು ತಾನೂ ಬೆಳಗುತ್ತದೆ ಹಾಗು ಎಲ್ಲವನ್ನೂ ಬೆಳಗಿಸುತ್ತದೆ. ಈ ಬೆಂಕಿಗೆ ಹೊಗೆ ತುಂಬಿದಾಗ ಅದು ಕಾಣುವುದಿಲ್ಲ ಹಾಗು ಬೆಳಗುವುದಿಲ್ಲ. ಭಗವಂತ ಬೆಂಕಿಯಂತೆ. ನಮ್ಮ ರಜೋ ಗುಣ ಹೊಗೆಯಂತೆ. ನಮಗೂ ಭಗವಂತನಿಗು ನಡುವೆ ರಜೋಗುಣದ ಪರದೆ ಬೆಂಕಿಯನ್ನು ಸುತ್ತಿದ ಹೊಗೆಯಂತೆ. ಇದು ಸಾತ್ವಿಕ ಮನುಷ್ಯನಿಗೆ ಕೃಷ್ಣ ಕೊಟ್ಟ ದೃಷ್ಟಾಂತ. ಇನ್ನು ರಾಜಸರಿಗೆ ಕೃಷ್ಣ ಕೊಡುವ ದೃಷ್ಟಾಂತ ಮಸಿ ಬಳಿದ ಕನ್ನಡಿ. ಮನಸ್ಸು ಎನ್ನುವ ಕನ್ನಡಿಗೆ ರಜೋಗುಣ ಎನ್ನುವ ಕೊಳೆ ಬಳಿದಂತೆ ಎನ್ನುತ್ತಾನೆ ಕೃಷ್ಣ. ತಾಮಸರಿಗೆ ಕೃಷ್ಣನ ದೃಷ್ಟಾಂತ ಗರ್ಭಚೀಲದಲ್ಲಿರುವ ಭ್ರೂಣ. ಎಲ್ಲವೂ ಕತ್ತಲು. ಕಣ್ಣು ತೆರೆದರೂ ಕಾಣದು, ಜೀವಜಾತವೆನ್ನುವ ಮರಿಯನ್ನು ರಜೋಗುಣ ಎನ್ನುವ ಮೊಟ್ಟೆಯಲ್ಲಿಟ್ಟಂತೆ.
ಹೀಗೆ ಬೆಂಕಿಗೆ ಹೊಗೆಯಂತೆ-ಭಗವಂತನಿಗೆ ಆವರಣ ಈ ರಜೋ ಗುಣ; ಕನ್ನಡಿಗೆ ಹಚ್ಚಿದ ಮಸಿಯಂತೆ- ಅಂತಃಕಾರಣಕ್ಕೆ ಆವರಣ ಈ ರಜೋಗುಣ. ಅಂತಃಕರಣ ಕೆಲಸ ಮಾಡದೆ ಇದ್ದಾಗ ಭಗವಂತ ಕಾಣುವುದಿಲ್ಲ ಆಗ- ಜೀವಕ್ಕೆ ‘ಭ್ರೂಣದಂತೆ’ ಎಲ್ಲವೂ ಕತ್ತಲು. ಎಲ್ಲವೂ ಇದ್ದೂ ಏನೂ ಉಪಯೋಗವಿಲ್ಲದೆ ವ್ಯರ್ಥವಾಗುತ್ತದೆ.