ಶ್ಲೋಕ – 37
ಭಗವಾನುವಾಚ
ಕಾಮ ಏಷ ಕ್ರೋಧ ಏಷ ರಜೋಗುಣಸಮುದ್ಭವಃ।
ಮಹಾಶನೋ ಮಹಾಪಾಪ್ಮಾ ವಿದ್ಧ್ಯೇನಮಿಹ ವೈರಿಣಮ್ ॥೩೭॥
ಭಗವಾನುವಾಚ-ಭಗವಂತ ಹೇಳಿದನು : ಕಾಮಃ ಏಷಃ ಕ್ರೋಧಃ ಏಷಃ ರಜಃ ಗುಣ ಸಮುದ್ಭವಃ
ಮಹಾ ಅಶನಃ ಮಹಾಪಾಪ್ಮಾ ವಿದ್ಧಿ ಏನಮ್ ಇಹ ವೈರಿಣಮ್–ಪಾಪವನ್ನು ಪ್ರೇರೇಪಿಸುವ ಶಕ್ತಿ ಕಾಮ (ಕಾಮದ ಅಭಿಮಾನಿಯಾದ ಕಾಲನೇಮಿ) ಇದರದೇ ರೂಪಾಂತರ ಸಿಟ್ಟು. ರಜೋಗುಣದಿಂದ ಇದರ ಹುಟ್ಟು. ಇದು ತಿಂದಷ್ಟೂ ತಣಿಯದ ಹೊಟ್ಟೆಬಾಕ. ಮಹಾಪಾತಕಗಳ ತವರು. ಇದನ್ನು ಈ ಸಾಧನಾ ಪಥದಲ್ಲಿ ಹಗೆಯೆಂದು ತಿಳಿ.
ಎಲ್ಲವುದಕ್ಕೂ ಮೂಲಕಾರಣ ನಮ್ಮೊಳಗಿರುವ ಬಯಕೆ. ಯಾವುದೋ ಒಂದು ಬಯಕೆ ನಮ್ಮನ್ನು ಕಾಡುತ್ತಿರುತ್ತದೆ, ಆ ಬಯಕೆಯನ್ನು ತಪ್ಪು ಮಾಡುವ ಮುಖೇನ ಈಡೇರಿಸಿಕೊಳ್ಳಬಹುದು ಎನ್ನುವ ಪ್ರೇರಣೆ (temptation) ನಮ್ಮಲ್ಲಿರುತ್ತದೆ. ಇದನ್ನು ಮಾಡಿಸುವವನು ಕಾಮದ ಅಭಿಮಾನಿಯಾದ ದುಷ್ಟ ಶಕ್ತಿ ‘ಕಾಲನೇಮಿ’; ನಮ್ಮೊಳಗೆ ಕಾಲನೇಮಿ ಬಂದು ಕೂತರೆ ನಮಗರಿವಿಲ್ಲದಂತೆ ನಾವು ತಪ್ಪು ಮಾಡುತ್ತೇವೆ. ಮೂಲಭೂತವಾಗಿ ನೋಡಿದರೆ ಮನುಷ್ಯ ತಪ್ಪು ಮಾಡುವುದಕ್ಕೆ ಎರಡು ಸಂಗತಿಗಳು ಕಾರಣ. ಒಂದು ಅಪೇಕ್ಷೆಗಳು ಹಾಗು ಅಪೇಕ್ಷೆ ಈಡೇರದೆ ಇದ್ದಾಗ ಕೋಪ. ಸಿಟ್ಟಿನ ಬರದಲ್ಲಿ ಮನುಷ್ಯ ಎಷ್ಟು ತಪ್ಪು ಮಾಡುತ್ತಾನೆ ಎಂದು ಹೇಳುವುದೂ ಕಷ್ಟ. ತಪ್ಪು ಮಾಡಿ ಕೊನೆಗೆ ಪಶ್ಚಾತಾಪ ಪಡುತ್ತೇವೆ. ಈ ಕ್ರೋಧ ಎನ್ನುವುದಕ್ಕೆ ಮೂಲ ಕಾಮ. ಕಾಮವಿಲ್ಲದೆ ಕ್ರೋಧವಿಲ್ಲ. ಎಲ್ಲಾ ಕ್ರೋಧದ ಹಿಂದೆ ಅರ್ಥಹೀನ ಕಾಮವಿರುತ್ತದೆ.
ಮನುಷ್ಯನಲ್ಲಿರುವ ರಜೋಗುಣ ರಾಗ-ದ್ವೇಷವನ್ನು ಬೆಳೆಸುತ್ತದೆ. ಅದಕ್ಕೆ ಎಷ್ಟು ಆಹಾರ ಹಾಕಿದರೂ ಹೊಟ್ಟೆ ತುಂಬುವುದಿಲ್ಲ! ಇದಕ್ಕೆ ಉತ್ತಮ ಉದಾಹರಣೆ ಎಂದರೆ ಒಬ್ಬ ಕೆಲಸಕ್ಕಾಗಿ ಅಲೆದಾಡುತ್ತಿರುತ್ತಾನೆ, ಆಗ ಆತನಿಗೆ ಹೊಟ್ಟೆ ಪಾಡಿಗೆ ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಅಭಿಪ್ರಾಯವಿರುತ್ತದೆ. ಒಮ್ಮೆ ಕೆಲಸ ಸಿಕ್ಕಿತು, ಆತನ ಬಯಕೆ ಹೆಚ್ಚು ಸಂಬಳ ಪಡೆಯುವತ್ತ ಹರಿಯುತ್ತದೆ. ಹೆಚ್ಚು ಸಿಕ್ಕಿದಾಗ ಮತ್ತಷ್ಟರಾಸೆ, ಹೀಗೆ ಇದು ಬೆಳೆದುಕೊಂಡು ಹೋಗುತ್ತದೆ. ಎಂದೂ ತೃಪ್ತಿ ಇರುವುದೇ ಇಲ್ಲ.
ಹೀಗೆ ನಾವು ತಪ್ಪು ಮಾಡುವುದನ್ನು ಒಗ್ಗಿಸಿಕೊಂಡರೆ ಅದು ‘ಮಹಾಶನ’ ವಾಗುತ್ತದೆ. ಅದಕ್ಕೆ ಎಷ್ಟು ಔತಣ ಹಾಕಿದರೂ ಮತ್ತೆ ಬೇಕು ಅನ್ನುತ್ತದೆ. ಎಲ್ಲಿಯವರೆಗೆ ಅಂದರೆ ಅದು ನಮ್ಮಿಂದ ಮಾಡಬಾರದ ಕೆಲಸವನ್ನು ಮಾಡಿಸುತ್ತದೆ. ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಛಲಕ್ಕೆ ಬಿದ್ದವ ಬ್ರಹ್ಮಹತ್ಯಗೂ ಹೇಸುವುದಿಲ್ಲ ಎನ್ನುತ್ತದೆ ಶಾಸ್ತ್ರ! ಆದ್ದರಿಂದ ನಮ್ಮ ಮೊದಲ ಶತ್ರು ರಾಗ-ದ್ವೇಷ. ಅದರ ಬಗ್ಗೆ ಎಚ್ಚರವಹಿಸಬೇಕು. ಅದು ನಿನ್ನೊಳಗಿದ್ದು ನಿನ್ನನ್ನು ಆಳದಿರಲಿ. ಇದನ್ನೇ ಕುರಾನಿನಲ್ಲಿ ಹೀಗೆ ಹೇಳಿದ್ದಾರೆ “Drive them out from where you have been driven out”. ರಾಗ ದ್ವೇಷಗಳು ನಮ್ಮ ವ್ಯಕ್ತಿತ್ವವನ್ನು ಸೂರೆ ಮಾಡಿ ತಾವು ಆಳುತ್ತಿದ್ದಾವಲ್ಲ, ಅವನ್ನು ಹೊರಗೋಡಿಸು, ನೀನು ನೀನಾಗಿ ಬದುಕು.