ಶ್ಲೋಕ – 36
ಅರ್ಜುನ ಉವಾಚ ।
ಅಥ ಕೇನ ಪ್ರಯುಕ್ತೋsಯಂ ಪಾಪಂ ಚರತಿ ಪೂರುಷಃ ।
ಅನಿಚ್ಛನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ ॥೩೬॥
ಅರ್ಜುನ ಉವಾಚ-ಅರ್ಜುನ ಕೇಳಿದನು : ಅಥ ಕೇನ ಪ್ರಯುಕ್ತಃ ಅಯಮ್ ಪಾಪಮ್ ಚರತಿ ಪೂರುಷಃ
ಅನಿಚ್ಛನ್ ಅಪಿ ವಾರ್ಷ್ಣೇಯ ಬಲಾತ್ ಇವ ನಿಯೋಜಿತಃ-ಓ ವಾರ್ಷ್ಣೇಯ, ಮನುಷ್ಯ ಪಾಪ ಮಾಡುತ್ತಾನೆ. ತನಗೆ ಇಷ್ಟವಿರದಿದ್ದರೂ ಯಾರೋ ಬಲವಂತದಿಂದ ಮಾಡಿಸಿದಂತೆ! ಇದು ಯಾರ ಪ್ರೇರಣೆ?
ಕೃಷ್ಣನ ಉಪದೇಶವನ್ನು ಕೇಳಿದ ಮೇಲೆ ಅರ್ಜುನ ನಮ್ಮ-ನಿಮ್ಮೆಲ್ಲರಿಗೆ ಬರುವಂಥಹ ಒಂದು ಬಹಳ ಮುಖ್ಯವಾದ ಪ್ರಶ್ನೆಯನ್ನು ಹಾಕುತ್ತಾನೆ. “ಪಾಪ ಪುಣ್ಯದ ಅರಿವಿದ್ದೂ, ಮಾಡಬಾರದ ಕೆಲಸ ಎಂದು ತಿಳಿದಿದ್ದೂ, ಮನುಷ್ಯ ಕೆಲವೊಮ್ಮೆ ತಪ್ಪು ಮಾಡುತ್ತಾನೆ-ಇದು ಏಕೆ? ನಮಗೆ ಸರಿ-ತಪ್ಪಿನ ಅರಿವಿದ್ದೂ ಏಕೆ ತಪ್ಪನ್ನು ಮಾಡುತ್ತೇವೆ? ಮಾಡಬಾರದು ಅನಿಸಿದ್ದನ್ನು ಮಾಡುವಂತೆ ಪ್ರೇರೇಪಿಸುವ ಶಕ್ತಿ ಯಾವುದು? ನಾವು ಬೇಡವೆಂದರೂ ನಮ್ಮ ಕೈಯಲ್ಲಿ ಮಾಡಿಸುವ ಶಕ್ತಿ ಯಾವುದು?” ಇದು ಅರ್ಜುನನ ಪ್ರಶ್ನೆ. ಇಲ್ಲಿ ‘ಪೂರುಷ’ ಎನ್ನುವ ಪದ ಬಳಕೆಯಾಗಿದೆ. ಒಬ್ಬ ಅಪರೋಕ್ಷ ಜ್ಞಾನಿ ಕೂಡಾ ಈ ಮೇಲಿನ ತಪ್ಪನ್ನು ಮಾಡುತ್ತಾನೆ ಎನ್ನುವ ಅರ್ಥದಲ್ಲಿ ಈ ಪದ ಇಲ್ಲಿ ಬಳಕೆಯಾಗಿದೆ. ಮಹಾಭಾರತದಲ್ಲಿ ನೋಡಿದಾಗ ನಮಗೆ ಇದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ಭೀಷ್ಮ-ದ್ರೋಣಾಚಾರ್ಯರು ಆ ಕಾಲದ ಮಹಾ ಜ್ಞಾನಿಗಳು. ಆದರೆ ಯಾವುದೋ ಕಾರಣದಿಂದ, ತಪ್ಪು ಎಂದು ತಿಳಿದಿದ್ದರೂ ಸಹ ದುರ್ಯೋಧನನ ಕಡೆ ಯುದ್ಧಕ್ಕೆ ನಿಂತರು. ಈ ರೀತಿ ಏಕೆ? ಯಾವ ದುಷ್ಟ ಶಕ್ತಿ (ಸೈತಾನ) ನಮ್ಮೊಳಗಿದ್ದು ಈ ಕೆಲಸವನ್ನು ಮಾಡಿಸುತ್ತದೆ? ಎನ್ನುವ ಮೂಲಭೂತವಾದ ಪ್ರಶ್ನೆಯನ್ನು ಅರ್ಜುನ ಕೃಷ್ಣನ ಮುಂದಿರಿಸುತ್ತಾನೆ.
ಇಲ್ಲಿ ಅರ್ಜುನ ಕೃಷ್ಣನನ್ನು ‘ವಾರ್ಷ್ಣೇಯ’ ಎಂದು ಸಂಬೋಧಿಸಿದ್ದಾನೆ. ‘ವೃಷ್ಣಿ’ ಅನ್ನುವುದು ವೈದಿಕ ಪದ. ‘ವೃಷ್ಣಿ’ ಅಂದರೆ ಬಯಸಿದ ಬಯಕೆಗಳನ್ನು ಈಡೇರಿಸುವವ. ಬಯಸಿದ ಬಯಕೆಗಳನ್ನು ಈಡೇರಿಸುವವರಿಗೆ, ಹಾಗು ಎಲ್ಲರಿಗೂ ಆಶ್ರಯದಾತ ‘ವಾರ್ಷ್ಣೇಯ’. “ಬಯಸಿದ ಬಯಕೆಗಳನ್ನು ಈಡೇರಿಸುವವರನ್ನು ಒದಗಿಸಿಕೊಡುವವ ಮತ್ತು ಎಲ್ಲಾ ಬಯಕೆಗಳನ್ನು ಈಡೇರಿಸುವ ಮಹಾಶಕ್ತಿಯಾಗಿ ನಿಂತಿರುವ ನೀನು, ಇಷ್ಟವಿರದಿದ್ದರೂ ನಮ್ಮಿಂದ ಬಲವಂತವಾಗಿ ಕೆಲಸ ಮಾಡಿಸುವ ಶಕ್ತಿ ಯಾವುದು ಎನ್ನುವುದನ್ನು ತಿಳಿಸು” ಎನ್ನುವ ಭಾವ ಈ ಸಂಬೋಧನೆಯಲ್ಲಿದೆ.