ಶ್ಲೋಕ – 35
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ ।
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ॥೩೫॥
ಶ್ರೇಯಾನ್ ಸ್ವ ಧರ್ಮಃ ವಿಗುಣಃ ಪರಧರ್ಮಾತ್ ಸು ಅನುಷ್ಠಿತಾತ್
ಸ್ವಧರ್ಮೇ ನಿಧನಮ್ ಶ್ರೇಯಃ ಪರಧರ್ಮಃ ಭಯ ಆವಹಃ– ತನ್ನ ಸ್ವಭಾವಕ್ಕೆ ಪರಕೀಯವಾದ ಧರ್ಮವನ್ನು ಚೆನ್ನಾಗಿ ಆಚರಿಸುವುದಕ್ಕಿಂತಲೂ, ಅರೆಬರೆಯಾಗಿಯಾದರೂ ಸಹಜ ಧರ್ಮವನ್ನು ಆಚರಿಸುವುದು ಮಿಗಿಲು.
ಸ್ವಭಾವ ಸಹಜ ಧರ್ಮದಲ್ಲಿ ಸಾವಾದರೂ ಮೇಲು. ಪರಕೀಯ ಧರ್ಮ ಅದಕ್ಕಿಂತ ಭಯಂಕರ.
ಹಿಂದೆ ಹೇಳಿದಂತೆ ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಸ್ವಭಾವವಿರುತ್ತದೆ ಹಾಗು ಅದನ್ನು ಬದಲಿಸಲು ಬರುವುದಿಲ್ಲ. ಜೀವ ಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ, ಅದು ಸ್ವಧರ್ಮ. ಇದು ಸಹಜ ಕ್ರಿಯೆ. ನಮ್ಮ ಸಹಜ ಸ್ವಭಾವ ಯಾವುದೋ ಅದನ್ನು ನಾವು ಮಾಡಬೇಕೇ ವಿನಃ ಅನ್ಯವನ್ನಲ್ಲ. ಈ ಕಾರಣಕ್ಕಾಗಿ ತಂದೆ-ತಾಯಿ ತಮ್ಮ ಅಭಿರುಚಿಯನ್ನು ಮಕ್ಕಳ ಮೇಲೆ ಹೇರದೆ, ಮಕ್ಕಳ ನಿಜ ಸ್ವಭಾವವನ್ನು ಗುರುತಿಸಿ ಅದಕ್ಕನುಗುಣವಾಗಿ ಅವರ ಭವಿಷ್ಯವನ್ನು ರೂಪಿಸಬೇಕು. ಇಲ್ಲದಿದ್ದರೆ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ. ಮಕ್ಕಳ ಪ್ರತಿಭೆ ಅವರ ಸಹಜವಾದ ಸ್ವಭಾವದಲ್ಲಿದೆ. ಪ್ರತಿಯೊಬ್ಬನೂ ತನ್ನ ಜೀವ ಸ್ವಭಾವಕ್ಕನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಇನ್ಯಾರದ್ದೋ ಧರ್ಮವನ್ನು ಅನುಸರಿಸಿ ಅಲ್ಲ. ಇಲ್ಲಿ ಕೃಷ್ಣ ಹೇಳುತ್ತಾನೆ “ನಿನ್ನ ಸ್ವಧರ್ಮ ಆಚರಣೆಯಲ್ಲಿ ನ್ಯೂನತೆ ಇದ್ದರೂ, ಅದು ಪರಕೀಯ ಧರ್ಮವನ್ನು ಆಚರಿಸುವುದಕ್ಕಿಂತ ಶ್ರೇಷ್ಠ” ಎಂದು. ಪರ ಧರ್ಮವನ್ನು ಎಷ್ಟು ಪರಿಪೂರ್ಣವಾಗಿ ಆಚರಿಸಿದರೂ ಅದರಿಂದ ಒಳಿತಿಲ್ಲ, ಅದು ಅಸಹ್ಯ ಅಥವಾ ಭಯಂಕರ.
ಇಲ್ಲಿ ಯುದ್ಧ ಮಾಡುವುದು ಅರ್ಜುನನ ಸ್ವಭಾವ ಧರ್ಮ. ಅದನ್ನು ಬಿಟ್ಟು ಆತ ತಪಸ್ಸು ಮಾಡುವುದಕ್ಕೆ ಕಾಡಿಗೆ ಹೋಗುವುದು ಆತನ ಸ್ವಧರ್ಮಕ್ಕೆ ವಿರುದ್ಧ. ಆದುದರಿಂದ ಸ್ವಧರ್ಮ ಪಾಲನೆ ಮಾಡು, ರಾಗ ದ್ವೇಷವನ್ನು ಬಿಟ್ಟು ಹೋರಾಡು ಎನ್ನುತ್ತಿದ್ದಾನೆ ಕೃಷ್ಣ.