ಶ್ಲೋಕ – 29
ಪ್ರಕೃತೇರ್ಗುಣ ಸಮ್ಮಾಢಾಃ ಸಜ್ಜಂತೇ ಗುಣಕರ್ಮಸು ।
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ ॥೨೯॥
ಪ್ರಕೃತೇಃ ಗುಣ ಸಮ್ಮಾಢಾಃ ಸಜ್ಜಂತೇ ಗುಣಕರ್ಮಸು
ತಾನ್ ಅಕೃತ್ಸ್ನವಿದಃ ಮಂದಾನ್ ಕೃತ್ಸ್ನವಿತ್ ನ ವಿಚಾಲಯೇತ್–ಪ್ರಕೃತಿಯ ಅಂಗಾಂಗಗಳಾದ ಇಂದ್ರಿಯಾದಿಗಳಲ್ಲೇ ಮೈಮರೆತವರು ಇಂದ್ರಿಯಾದಿಗಳ ಕ್ರಿಯೆಯಲ್ಲೆ ಅಂಟಿಕೊಳ್ಳುತ್ತಾರೆ. ಪೂರ್ತಿ ನಿಜವನ್ನರಿಯದ ಅಂಥ ಮಂದಿಯನ್ನು ಪೂರ್ತಿ ಅರಿತವರು ಗೊಂದಲಗೆಡಿಸಬಾರದು.
ಪ್ರಕೃತಿಯ ಗುಣಭೂತವಾಗಿರುವ ಇಂದ್ರಿಯ ಸುಖದಲ್ಲಿ ಮುಳುಗಿದವರು, ಮೂಲ ಪ್ರಕೃತಿಯ ತ್ರಿಗುಣದ ಮೋಹಕ್ಕೊಳಗಾಗಿ, ಸತ್ಯವನ್ನರಿಯದೆ, ಜೀವ ಸ್ವಭಾವದ ಗುಣ ಮೋಹದಲ್ಲಿದ್ದು, ತಾನು ಭಗವಂತನ ಗುಣದ ಅಧೀನ ಎನ್ನುವ ಎಚ್ಚರ ಇಲ್ಲದೆ ಇರುವವರನ್ನು ಕೃಷ್ಣ ‘ಪ್ರಕೃತೇರ್ಗುಣ ಸಮ್ಮಾಢಾಃ’ ಎಂದು ಕರೆದಿದ್ದಾನೆ. ಇಂತವರು ಭಗವಂತನ ಗುಣ ಕರ್ಮವನ್ನು ತಮ್ಮದೇ ಎಂದು ಭ್ರಮಿಸಿಕೊಂಡು, ‘ನಾನೇ ಎಲ್ಲಾ ನನ್ನಿಂದಲೇ ಎಲ್ಲ’ ಎಂದು ಬದುಕುತ್ತಿರುತ್ತಾರೆ. ಇಂತವರಿಗೆ ಸತ್ಯವನ್ನು ಅಥವಾ ಪೂರ್ಣವನ್ನು ಅರಿಯುವ ಯೋಗ್ಯತೆ ಇರುವುದಿಲ್ಲ. ಅಂಥವರನ್ನು ‘ಪೂರ್ಣವನ್ನು ಅರಿತವರು’ ಗೊಂದಲಗೆಡಿಸಲು ಹೋಗಬಾರದು. ಅವರಲ್ಲಿ ಸತ್ಯವನ್ನು ತಿಳಿಯುವ ಯೋಗ್ಯತೆ ಇದ್ದರೆ ಅವರು ಆ ಸ್ಥಿತಿಯಿಂದಾಚೆಗೆ ಬರುತ್ತಾರೆ. ಇಲ್ಲದ ಯೋಗ್ಯತೆಯನ್ನು ಯಾರೂ ಅವರಲ್ಲಿ ತುಂಬಿಸಲಾರರು, ಇದ್ದ ಯೋಗ್ಯತೆಯನ್ನು ಯಾರೊಬ್ಬರೂ ಕಸಿಯಲಾರರು. ಯಾರಿಗೆ ಸತ್ಯವನ್ನು ತಿಳಿಯುವ ಅಪೇಕ್ಷೆ ಇದೆ ಅವರೊಂದಿಗೆ ಸೇರಿ ಅವರ ಸಹವಾಸ ಮಾಡಿ ಅವರಿಂದ ಕಲಿಯಬಹುದು ಅಥವಾ ಅವರಿಗೆ ತಿಳಿಹೇಳಬಹುದು.