ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 03

ಶ್ಲೋಕ – 28

ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ ।
ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ ॥೨೮॥

ತತ್ತ್ವವಿತ್ ತು ಮಹಾಬಾಹೋ ಗುಣ ಕರ್ಮ ವಿಭಾಗಯೋಃ

ಗುಣಾಃ ಗುಣೇಷು ವರ್ತಂತೇ ಇತಿ ಮತ್ವಾ ನ ಸಜ್ಜತೇ- ಓ ಮಹಾವೀರ, ಇಂದ್ರಿಯಾದಿಗಳ(ಜೀವ ಸ್ವಭಾವದ ಗುಣಗಳ) ಮತ್ತು ಕ್ರಿಯೆಗಳ ಪ್ರಭೇದಗಳ ನಿಜವನ್ನರಿತವನು, ಇಂದ್ರಿಯಗಳ ವಿಷಯಗಳಲ್ಲಿ ಚರಿಸುತ್ತವೆ ಎಂದರಿತು ಅವುಗಳನ್ನು ಅಂಟಿಸಿಕೊಳ್ಳುವುದಿಲ್ಲ.

ತತ್ವವನ್ನು ಅರಿತ ಅಥವಾ ಯಥಾರ್ಥವನ್ನು ಅರಿತ ತತ್ವವಾದಿ-ಗುಣಕರ್ಮ, ಇಂದ್ರಿಯ ಮತ್ತು ಅದರಲ್ಲಿನ ಕ್ರಿಯಾಭೇದವನ್ನು ತಿಳಿದಿರಬೇಕು. ಮೂಲಭೂತವಾಗಿ ಇಂದ್ರಿಯಗಳಲ್ಲಿ ಸಾತ್ವಿಕ, ರಾಜಸ ಮತ್ತು ತಾಮಸವೆಂಬ ತ್ರೈಗುಣ್ಯಗಳಿಂದ ಕರ್ಮ ನಡೆಯುತ್ತಿರುತ್ತದೆ. ಇದು ನಾವು ಹಿಂದೆ ಅಂಟಿಸಿಕೊಂಡು ಬಂದುದರ ಪ್ರಭಾವವಿರಬಹುದು. ಇದರಿಂದ ಆಗುವ ಕರ್ಮವನ್ನು ನಾವು ತಟಸ್ಥರಾಗಿ ನೋಡುತ್ತಿರಬೇಕು. ಈ ವಿಷಯ ಮನೋಶಾಸ್ತ್ರಕ್ಕೆ ಸಂಬಂಧಪಟ್ಟಿದ್ದು. ನಾವೇ ಮಾಡುವ ಕ್ರಿಯೆಯನ್ನು ನಾವೇ ತಟಸ್ಥರಾಗಿ ವಿಶ್ಲೇಷಿಸುವುದು! ನನ್ನ ಮೇಲೆ ತ್ರೈಗುಣ್ಯದ ಯಾವ ಗುಣ ಪ್ರಭಾವಬೀರುತ್ತಿದೆ ಎನ್ನುವುದನ್ನು ಸ್ವಯಂ ವಿಶ್ಲೇಷಣೆ(Self analysis) ಮಾಡಿ, ಗುಣಕರ್ಮ ವಿಭಾಗ ತತ್ವವನ್ನು ತಿಳಿದುಕೊಂಡಾಗ, ತ್ರೈಗುಣ್ಯದ ಪ್ರಭಾವದ ಅರಿವಾಗುತ್ತದೆ. ಆಗ ನಮಗೆ ಅದರಲ್ಲಿ ಒಡೆತನವಿಲ್ಲ ಎನ್ನುವ ಸತ್ಯ ತಿಳಿಯುತ್ತದೆ.ಇಂದ್ರಿಯಗಳು- ಅದರ ಮೇಲೆ ಪ್ರಕೃತಿಯ ತ್ರೈಗುಣ್ಯ-ಅದರ ಮೇಲೆ ಜೀವ ಸ್ವಭಾವ-ಅದರ ಮೇಲೆ ಭಗವಂತನ ಜ್ಞಾನಾನಂದ- ಇವೆಲ್ಲವೂ ಕರ್ಮವಾಗಿ ಇಂದ್ರಿಯದ ಮೂಲಕ ಅಭಿವ್ಯಕ್ತವಾಗುತ್ತಿರುತ್ತದೆ. ಜಡದಲ್ಲಿ ಬರಿಯ ಕೃತಿ(Action), ಜೀವನಲ್ಲಿ ಇಚ್ಛೆ ಮತ್ತು ಕೃತಿ (Intentional Action) ಹಾಗು ಭಗವಂತನಲ್ಲಿ ಸ್ವತಂತ್ರ ಇಚ್ಛಾಕೃತಿ(Independent Intentional Action)-ಇದು ಕರ್ಮಭೇದ. ಹೀಗೆ ಗುಣಭೇದ ಮತ್ತು ಕರ್ಮಭೇದವನ್ನು ಅರಿತವನು ‘ತತ್ವವಿತ್ತು’. ಈ ತತ್ವ ಅರ್ಥವಾದರೆ “ನಾನು ಮಾಡಿದೆ” ಎನ್ನುವ ಅಹಂಕಾರ ಎಂದೂ ನಮ್ಮನ್ನು ಕಾಡುವುದಿಲ್ಲ.

ಈ ಮೇಲಿನ ವಿಷಯವನ್ನು ಉದಾಹರಣೆಯೊಂದಿಗೆ ನೋಡುವುದಾದರೆ-ಸ್ವಾರಸ್ಯವಾಗಿ, ವಿಷಯಗರ್ಭಿತವಾಗಿ ಮಾತನಾಡುವ ಒಬ್ಬ ಮಾತುಗಾರನನ್ನು ನೋಡಿ: ಆತ ಹೀಗೆ ಮಾತನಾಡಬೇಕಾದರೆ ಕೇವಲ ಬಾಯಿ ಇದ್ದರೆ ಸಾಲದು, ಬಾಯಿಯಲ್ಲಿ ಶಬ್ದ ಬರಬೇಕು. ಕೇವಲ ಶಬ್ದವಲ್ಲ-ಯಾವ ಮಾತನಾಡಬೇಕೋ ಅದಕ್ಕನುಗುಣವಾದ ಶಬ್ದ ಬರಬೇಕು. ಆ ಶಬ್ದ ಬರಬೇಕಾದರೆ ಮಾತಿಗೆ ಒಂದು ಭಾವ ಬೇಕು. ಭಾವ ಅನ್ನುವುದು ಮನಸ್ಸಿನಲ್ಲಿ ಹೊಳೆಯಬೇಕು. ಹೊಳೆದ ಭಾವಕ್ಕೆ ತಕ್ಕಂತೆ ಶಬ್ದ ಬರಬೇಕು. ಆ ಶಬ್ದ ಬಾಯಿಯಲ್ಲಿ ಸ್ಫುಟವಾಗಿ ಹೊರ ಹೊಮ್ಮಬೇಕು. ಭಾವನೆಯಿಂದ ಶಬ್ದ ಹುಟ್ಟಬೇಕಾದರೆ ಮಾಧ್ಯಮವಾಗಿ ಆಕಾಶ ಮತ್ತು ಗಾಳಿ ಅಗತ್ಯ. ಈ ಎಲ್ಲಾ ಕ್ರಿಯೆ ಸುಸೂತ್ರವಾಗಿ ನಡೆದರೆ ಮಾತ್ರ ಆತ ಚನ್ನಾಗಿ ಮಾತನಾಡಬಲ್ಲ. ಮನಸ್ಸಿನಲ್ಲಿ ಭಾವ ಮತ್ತು ಶಬ್ದವನ್ನು ಹೊಳೆಸುವವನು ಯಾರು? ಒಂದು ವೇಳೆ ಹೇಳಬೇಕು ಅನ್ನುವ ವಿಷಯಕ್ಕೆ ಅನುಗುಣವಾದ ಶಬ್ದ ಹೊಳೆಯದೆ ಇದ್ದರೆ? ನಮ್ಮ ಮೆದುಳಿನಲ್ಲಿ ಯಾವುದೋ ಒಂದು ಗುಂಡಿ ಆ ಕ್ಷಣದಲ್ಲಿ ಕೆಲಸ ಮಾಡದೆ ಇದ್ದರೆ? ಇಲ್ಲಿ ನಮ್ಮ ಕೈವಾಡ ಏನಿದೆ? ಇದು ತಿಳಿದಾಗ ಅಹಂಕಾರ ಬಾರದು. ಈ ಅರಿವಿದ್ದಾಗ ಎಲ್ಲರೊಡನೆ ಎಲ್ಲರಂತೆ ಇದ್ದು ಅಂಟಿಸಿಕೊಳ್ಳದೆ ಇರಲು ಸಾಧ್ಯ.

ಇಂದ್ರಿಯಗಳಲ್ಲಿ ಸತ್ವ-ರಜೋ-ತಮೋ ಗುಣಗಳು ಜೀವ ಸ್ವಭಾವಕ್ಕನುಗುಣವಾಗಿ ಕೆಲಸ ಮಾಡುತ್ತವೆ. ಭಗವಂತನ ಜ್ಞಾನಾನಂದ ಸ್ವರೂಪ- ಜೀವನ ಜ್ಞಾನೇಂದ್ರಿಯ ಗುಣಗಳನ್ನು ನಿಯಂತ್ರಿಸುತ್ತವೆ. ಇದನ್ನು ತಿಳಿದಾಗ ನಾನು-ನನ್ನದು ಎನ್ನುವುದು ಹೊರಟು ಹೋಗುತ್ತದೆ. ವಿಶ್ವವೆಂಬ ಈ ಮಹಾ ಸಾಗರದಲ್ಲಿ ನಾನೊಂದು ಮರಳಿನ ಕಣ ಎನ್ನುವ ನಿಜ ತಿಳಿಯುತ್ತದೆ. ವಿಶ್ವದ ವಿಶ್ವತೋಮುಖವಾದ ಅಸ್ತಿತ್ವ ಗುರುತಿಸಿದವ “ನಾನು ಮಾಡಿದೆ” ಎಂದು ಎಂದೂ ಹೇಳುವುದಿಲ್ಲ ಹಾಗು ಯಾವುದನ್ನೂ ಅಂಟಿಸಿಕೊಳ್ಳು(Attachment)ವುದಿಲ್ಲ.

ಈ ಶ್ಲೋಕದಲ್ಲಿ ಕೃಷ್ಣ ಅರ್ಜುನನನ್ನು ‘ಮಹಾಬಾಹೋ’ ಎಂದು ಸಂಬೋಧಿಸಿದ್ದಾನೆ. ಮೇಲ್ನೋಟದಲ್ಲಿ ಮಹಾಬಾಹು ಎಂದರೆ ವೀರ, ಹೋರಾಟಗಾರ. ಬಲಿಷ್ಠ ತೊಳಿನವನಾದ ನೀನು ಹೇಡಿಯಾಗದೆ ಹೋರಾಡು ಎನ್ನುವುದು ಇಲ್ಲಿ ಕಾಣುವ ಭಾವ. ಆದರೆ ಅದರಿಂದಾಚೆಗೆ ಇನ್ನೂ ಅನೇಕ ಅರ್ಥವಿದೆ. ‘ಮಹತ್ ವಹತೀತಿ ಮಹಾಬಾಹು’ ಅಂದರೆ ದೊಡ್ದದ್ದನ್ನು ಹೊತ್ತುಕೊಂಡವ. ಜಗತ್ತಿನ ಮೂಲಭೂತವಾದ ಸತ್ಯವನ್ನು ಹೃದಯದಲ್ಲಿ ಹೊತ್ತವ ಎಂದರ್ಥ. “ಜಗತ್ತಿನ ಮಹತ್ತಾದ ಸಂಗತಿಯನ್ನು ಗ್ರಹಿಸಬಲ್ಲ ಅರಿವಿನ ಮಹಾತೋಳಿನಿಂದ ದಿಗಂತದಾಚೆಗಿನ ಸತ್ಯ(ಭಗವಂತ)ವನ್ನು ಹಿಡಿ” ಎನ್ನುವುದು ಈ ಸಂಬೋಧನೆ ಹಿಂದಿರುವ ಇನ್ನೊಂದು ಭಾವ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *