ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 03

ಶ್ಲೋಕ – 21

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ ।
ಸ ಯತ್ ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥೨೧॥

ಯತ್ ಯತ್ ಆಚರತಿ ಶ್ರೇಷ್ಠಃ ತತ್ ತತ್ ಏವ ಇತರಃ ಜನಃ ಸಃ ಯತ್ ಪ್ರಮಾಣಮ್ ಕುರುತೇ ಲೋಕಃ ತತ್ ಅನುವರ್ತತೇ–ಮುಂದಾಳು ಏನೇನು ಮಾಡುತ್ತಾನೆ ಉಳಿದ ಮಂದಿ ಅದೇ ದಾರಿ ಹಿಡಿಯುತ್ತಾರೆ. ಅವನು ಯಾವುದನ್ನು ಆಧಾರವಾಗಿ ಬಳಸುತ್ತಾನೆ ಜನತೆ ಅದನ್ನೇ ಬೆನ್ನು ಹತ್ತುತ್ತದೆ.

ಸಮಾಜದಲ್ಲಿ ಹಿರಿಯನೆನಿಸಿದವ(ಶ್ರೇಷ್ಠ), ವಯಸ್ಸಿನಲ್ಲಿ, ಆಚರಣೆಯಲ್ಲಿ, ಜ್ಞಾನದಲ್ಲಿ ಸಮಾಜಕ್ಕೆ ಮಾರ್ಗದರ್ಶನ ಮಾಡಬಲ್ಲ, ಎತ್ತರದಲ್ಲಿರುವ ವ್ಯಕ್ತಿ ಯಾವ ದಾರಿಯಲ್ಲಿ ಸಾಗುತ್ತಾನೋ, ಉಳಿದವರೂ ಅದೇ ಹಾದಿಯಲ್ಲಿ ಸಾಗುತ್ತಾರೆ. ಇಲ್ಲಿ ಅರ್ಜುನ ಸಮಾಜದ ಮುಖಂಡ. ಆತ ಏನು ಮಾಡುತ್ತಾನೋ ಅದನ್ನೇ ಸಮಾಜ ಹಿಂಬಾಲಿಸುತ್ತದೆ. ಏಕೆಂದರೆ ಸಾಮಾನ್ಯ ಜನರಿಗೆ ಶಾಸ್ತ್ರ ಇತ್ಯಾದಿ ತಿಳಿಯುವುದಿಲ್ಲ. ಅವರು ಕೇವಲ ಆದರ್ಶ ವ್ಯಕ್ತಿಗಳೆನಿಸಿದವರನ್ನು ಹಿಂಬಾಲಿಸುತ್ತಾರೆ. ನಾಯಕನಾದವನು ಯಾವುದನ್ನು ಪ್ರಮಾಣವಾಗಿರಿಸಿಕೊಂಡು ಮಾಡುತ್ತಾನೋ ಅದನ್ನೇ ಸಾಮಾನ್ಯ ಜನರು ಅನುಸರಿಸುತ್ತಾರೆ.

ಈ ಶ್ಲೋಕದಲ್ಲಿ ಕೃಷ್ಣ ಕೊಟ್ಟಿರುವ ಸಂದೇಶವನ್ನು ನಾವು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಒಂದು ಸಂಸ್ಥೆಯನ್ನು ನಡೆಸುವ ಮುಖ್ಯಸ್ತನ ನಡವಳಿಕೆ, ಆಚರಣೆ, ಸರಿದಾರಿಯಲ್ಲಿ ಇಲ್ಲದಿದ್ದರೆ, ಆ ಸಂಸ್ಥೆ ಅದೋಗತಿಯನ್ನು ಕಾಣುತ್ತದೆ. ದುಷ್ಟ ಶಕ್ತಿಗಳು ಎದ್ದು ನಿಲ್ಲುತ್ತವೆ. ಏಕೆಂದರೆ ಮುಖಂಡ ಎನಿಸಿದವ ಏನನ್ನು ಅನುಸರಿಸುತ್ತಾನೋ ಅದನ್ನೇ ಪ್ರಮಾಣವಾಗಿ ಆತನ ಕೆಳಗಿರುವ ಜನರು ತಮಗರಿವಿಲ್ಲದಂತೆ ಅನುಸರಿಸಲಾರಂಭಿಸುತ್ತಾರೆ. ಈ ಕಾರಣದಿಂದ ಒಬ್ಬ ಮುಖಂಡ ಎಷ್ಟು ಎಚ್ಚರದಿಂದಿದ್ದರೂ ಸಾಲದು. ಒಂದು ದೇಶವನ್ನು ನಡೆಸುವ ಮುಖ್ಯಸ್ಥ ಬ್ರಷ್ಟಾಚಾರಿಯಾಗಿದ್ದಲ್ಲಿ ಇಡೀ ದೇಶ ಬ್ರಷ್ಟಾಚಾರದ ಹಾದಿಯನ್ನು ತುಳಿಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾನವರು ಒಳ್ಳೆಯದನ್ನು ಅನುಸರಿಸುವುದಕ್ಕಿಂತ ಹೆಚ್ಚಾಗಿ ಹಾಗು ವೇಗವಾಗಿ ಕೆಟ್ಟದನ್ನು ಅನುಸರಿಸುವುದು ಹೆಚ್ಚು. ಉದಾಹರಣೆಗೆ ಒಬ್ಬ ಉತ್ತಮ ಅಧ್ಯಾಪಕ ಧೂಮಪಾನ ಮಾಡುವ ಹವ್ಯಾಸದವನಾಗಿದ್ದರೆ, ಆತನ ವಿದ್ಯಾರ್ಥಿಗಳು ಆತನಲ್ಲಿರುವ ಜ್ಞಾನಕ್ಕಿಂತ ಮಿಗಿಲಾಗಿ ಆತನ ದುರಾಭ್ಯಾಸವನ್ನು ಪ್ರಮಾಣವಾಗಿರಿಸಿಕೊಂಡು ಕೆಟ್ಟ ದಾರಿ ಹಿಡಿಯುವ ಸಾಧ್ಯತೆ ಹೆಚ್ಚು. ಇದು ಹಿರಿಯವರೆನಿಸಿದವರು ತಪ್ಪು ದಾರಿ ತುಳಿದಾಗ ಸಮಾಜದ ಮೇಲಾಗುವ ದುಷ್ಟರಿಣಾಮ. ಇದು ತುಂಬಾ ಅಪಾಯಕಾರಿ ಹಾಗು ಇದರ ಅರಿವು ನಮಗಿರಬೇಕು.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *