ಶ್ಲೋಕ – 19
ತಸ್ಮಾದಸಕ್ತಃ ಸತತಂ ಕಾರ್ಯಂ ಕರ್ಮ ಸಮಾಚರ ।
ಅಸಕ್ತೋ ಹ್ಯಾಚರನ್ ಕರ್ಮ ಪರಮಾಪ್ನೋತಿ ಪೂರುಷಃ ॥೧೯॥
ತಸ್ಮಾತ್ ಅಸಕ್ತಃ ಸತತಂ ಕಾರ್ಯಮ್ ಕರ್ಮ ಸಮಾಚರ । ಅಸಕ್ತಃ ಹಿ ಆಚರನ್ ಕರ್ಮ ಪರಮ್ ಆಪ್ನೋತಿ ಪೂರುಷಃ –ಆದ್ದರಿಂದ ಫಲದ ನಂಟು ತೊರೆದು ಸದಾ ಕರ್ತವ್ಯ ಕರ್ಮವನ್ನು ಮಾಡುತ್ತಿರು. ನಂಟು ತೊರೆದು ಕರ್ತವ್ಯದಲ್ಲಿ ತೊಡಗುವುದರಿಂದಲೇ ಸಾಧಕ ಭಗವಂತನನ್ನು ಸೇರುವುದು ಸಾಧ್ಯ.
ಈ ಎಲ್ಲಾ ಕಾರಣದಿಂದ ನಾವು ನಮ್ಮ ಕರ್ತವ್ಯ ಕರ್ಮವನ್ನು ಮಾಡಬೇಕು. “ಎಲ್ಲವನ್ನು ಮಾಡು ಆದರೆ ಯಾವುದನ್ನೂ ಅಂಟಿಸಿಕೊಳ್ಳದೇ ಮಾಡು. ಏನು ಮಾಡಬೇಕೋ ಅದನ್ನು ಫಲದ ಬಗ್ಗೆ ಯೋಚಿಸದೆ(ಅಧಿಕಾರ ಸಾಧಿಸದೇ) ಮಾಡು. ಹೀಗೆ ಕರ್ಮ ಮಾಡಿದರೆ ಅದು ನಿನ್ನನ್ನು ಭಗವಂತನಡೆಗೆ ಕೊಂಡೊಯ್ಯುತ್ತದೆ. ಅದು ಎಂದೂ ನಿನ್ನನ್ನು ಮತ್ತೆ ಕರ್ಮ ಬಂಧನಕ್ಕೆ ತಳ್ಳುವುದಿಲ್ಲ. ಈ ರೀತಿ ಮಾಡುವುದರಿಂದ ಭಗವಂತನನ್ನು ಸೇರುವುದು ಸಾಧ್ಯ ಹೊರತು ಕರ್ಮ ತ್ಯಾಗದಿಂದಲ್ಲ “ಎನ್ನುತ್ತಾನೆ ಕೃಷ್ಣ.
ಇಲ್ಲಿ “ಪೂರುಷಃ” ಎನ್ನುವ ಪದ ಬಳಕೆಯಾಗಿದೆ. ಪುರದಲ್ಲಿ(ಪೂರ್ಣವಾದ ಶರೀರದಲ್ಲಿ) ಇರುವವ ಪುರುಷ. ಪುರವನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸುವ ಸಾಧಕ-ಪೂರುಷಃ. ಸಾಧನಾ ಶರೀರದಲ್ಲಿದ್ದು ಸಾಧನೆಯಲ್ಲಿ ತೊಡಗಿರುವ ಜೀವ ಪೂರುಷಃ.
ಈ ರೀತಿ ಕರ್ಮ ಸಿದ್ಧಾಂತವನ್ನು ವಿವರಿಸಿದ ಕೃಷ್ಣ ಅದಕ್ಕೆ ಪೂರಕವಾದ ನಿದರ್ಶನವನ್ನು ಮುಂದಿನ ಶ್ಲೋಕದಲ್ಲಿ ಕೊಡುತ್ತಾನೆ.