ಶ್ಲೋಕ – 13
ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ ।
ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್ ॥೧೩॥
ಯಜ್ಞ ಶಿಷ್ಟ ಅಶಿನಃ ಸಂತಃ ಮುಚ್ಯಂತೇ ಸರ್ವ ಕಿಲ್ಬಿಷೈಃ ।
ಭುಂಜತೇ ತೇ ತು ಅಘಮ್ ಪಾಪಾಃ ಯೇ ಪಚಂತಿ ಆತ್ಮ ಕಾರಣಾತ್- ದೇವತೆಗಳಿಗೆ ಸಲ್ಲಿಸಿ ಉಳಿದಿದ್ದನ್ನು ಉಣ್ಣುವ ಸಜ್ಜನರು ಎಲ್ಲಾ ಪಾಪಗಳಿಂದ ಪಾರಾಗುತ್ತಾರೆ. ತಮಗಾಗಿ ಅನ್ನ ಬೇಯಿಸುವವರು ತಮ್ಮ ಪಾಪವನ್ನೇ ತಾವು ತಿನ್ನುತ್ತಾರೆ.
ಯಾರು ಪಡೆದಿದ್ದನ್ನು ಭಗವದರ್ಪಣೆ ಮಾಡಿ ಅದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸುತ್ತಾರೆ, ಅವರು ಬದುಕಿನ ಎಲ್ಲಾ ಕೊಳೆಗಳಿಂದ ಬಿಡುಗಡೆಗೊಂಡು ಸ್ವಚ್ಛ ಬದುಕನ್ನು ಬಾಳುತ್ತಾರೆ. ಯಾರ ಮನೆಯಲ್ಲಿ ತಮಗೋಸ್ಕರ ಅನ್ನ ಬೇಯುತ್ತದೋ ಅವನು ತಿನ್ನುವುದು ಅನ್ನವನ್ನಲ್ಲ ಪಾಪವನ್ನು. ನಮಗೆ ಈ ಆಹಾರವನ್ನು ಕೊಟ್ಟವನು ಆ ಭಗವಂತ. ಅವನಿಗೆ ನಾವು ಮೊದಲು ಕೃತಜ್ಞತೆಯನ್ನು ತೋರಬೇಕು. ಅದನ್ನು ಬಿಟ್ಟು ಇದು ನನ್ನ ಸಂಪಾದನೆ, ನಾನ್ಯಾಕೆ ಇದನ್ನು ಇನ್ನೊಬ್ಬರಿಗೆ ಹಂಚಬೇಕು ಎನ್ನುವ ಭಾವನೆಯನ್ನು ಬೆಳೆಸಿಕೊಂಡರೆ ನಾವು ನಮ್ಮ ಪಾಪದ ಗಂಟನ್ನು ಬೆಳೆಸಿಕೊಳ್ಳುತ್ತೇವೆ. ಸೃಷ್ಟಿಯ ಉದ್ದೇಶ(Divine Will)ದಂತೆ ನೆಡೆದುಕೊಳ್ಳದೇ ಇದ್ದರೆ ನಾವು ಗಳಿಸಿದ್ದು ಸಹ ನಮಗೆ ದಕ್ಕುವುದಿಲ್ಲ.