ಶ್ಲೋಕ – 71
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ ।
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ ॥೭೧॥
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾನ್ ಚರತಿ ನಿಸ್ಪೃಹಃ ನಿರ್ಮಮಃ ನಿರಹಂಕಾರಃ ಸಃ ಶಾಂತಿಮ್ ಅಧಿಗಚ್ಛತಿ–ಯಾರು ಎಲ್ಲ ವಿಷಯಗಳನ್ನು ಮನಸೋಲದೆ, ಕೆಟ್ಟ ಆಸೆಗೆ ಬಲಿ ಬೀಳದೆ, ನಾನು ನನ್ನದು ಎಂಬ ಹಮ್ಮು ತೊರೆದು ಅನುಭವಿಸುತ್ತಾನೆ-ಅವನು ಮುಕ್ತಿ ಪಡೆಯುತ್ತಾನೆ.
ಯಾರು ಭೋಗದ ಬಯಕೆಯನ್ನು ಬಿಟ್ಟು ಬಂದದ್ದನ್ನು ಸಂತೋಷವಾಗಿ ಅನುಭವಿಸುತ್ತಾರೆ, ಅವನು ನಿಜವಾದ ಸಾಧಕನೆನೆಸುತ್ತಾನೆ. ಸೀಮಿತವಾದ ಆಹಾರ, ನಿದ್ದೆ ಮತ್ತು ಮೈಥುನವನ್ನು ಅಭ್ಯಾಸ ಮಾಡಿಕೊಂಡು, ನಿರ್ಭಯವಾಗಿ ಸಂಪೂರ್ಣ ಭಗವಂತನ ರಕ್ಷಾ ಕವಚದ ಜ್ಞಾನದಲ್ಲಿದ್ದು, ಆಸೆ ಆಕಾಂಕ್ಷೆಗಳಿಗೆ ಬಲಿ ಬೀಳದೆ, ಯಾವುದೇ ಏರು-ಪೇರುಗಳಿಗೆ ವಿಚಲಿತನಾಗದೆ ಬದುಕುತ್ತಾನೆ. ಅವನು ನಿಜವಾದ ‘ಮನುಷ್ಯ’ನೆನಿಸುತ್ತಾನೆ. ಇಂತವನಿಗೆ ನಾನು-ನನ್ನದು ಎನ್ನುವ ಅಹಮ್ ಎಂದೂ ಇರುವುದಿಲ್ಲ ಹಾಗು ಆತ ಮುಕ್ತಿಯನ್ನು ಪಡೆಯುತ್ತಾನೆ.
ಇತಿ ಪ್ರಥಮೋsಧ್ಯಾಯಃ
ಎರಡನೇ ಅಧ್ಯಾಯ ಮುಗಿಯಿತು.