ಶ್ಲೋಕ – 7
ಕಾರ್ಪಣ್ಯದೋಷೋಪಹತಸ್ವಭಾವಃ ಪೃಚ್ಛಾಮಿ ತ್ವಾ ಧರ್ಮಸಂಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ ಶಿಷ್ಯಸ್ತೇSಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ॥೭॥
ಕಾರ್ಪಣ್ಯ ದೋಷ ಉಪಹತ ಸ್ವಭಾವಃ ಪೃಚ್ಛಾಮಿ ತ್ವಾಮ್ ಧರ್ಮ ಸಮ್ಮೂಢ ಚೇತಾಃ ಯತ್ ಶ್ರೇಯಃ ಸ್ಯಾತ್ ನಿಶ್ಚಿತಮ್ ಬ್ರೂಹಿ ತತ್ ಮೇ ಶಿಷ್ಯಃ ತೇ ಅಹಮ್ ಶಾಧಿ ಮಾಮ್ ತ್ವಾಮ್ ಪ್ರಪನ್ನಮ್- -ದೌರ್ಬಲ್ಯದ ದೋಷದಿಂದ ನನ್ನ ಸಹಜ ಬೀರಕ್ಕೆ ಮಂಕು ಕವಿದಿದೆ. ಧರ್ಮದ ಬಗೆಗೆ ಬಗೆಗಾಣದವನಾಗಿ ನಿನ್ನನ್ನು ಕೇಳುತ್ತಿದ್ದೇನೆ; ಹೇಳು ನನಗಿದನ್ನು: ಯಾವುದು ನಿಖರವಾದ ಒಳಿತಿನ ದಾರಿ? ನಾನು ನಿನ್ನ ಶಿಷ್ಯ. ನಿನಗೆ ಶರಣು ಬಂದ ನನಗೆ ದಾರಿ ತೋರು.
ನನಗೆ ಕಾರ್ಪಣ್ಯ ದೋಷ ಬಂದಿದೆ. ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡಲಾರದ ದಯನೀಯ ಸ್ಥಿತಿಯಲ್ಲಿದ್ದೇನೆ. ಧರ್ಮದ ಬಗ್ಗೆ ನನ್ನ ಚಿಂತನಶಕ್ತಿ ಗೊಂದಲದ ಗೂಡಾಗಿದೆ. ಯುದ್ಧ ಬೇಕೋ ಬೇಡವೋ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ಯಾವುದು ನನಗೆ ಹಿತ ಎಂದು ತಿಳಿಯದಾಗಿದೆ. ನಾನು ನಿನ್ನ ಶಿಷ್ಯನಾಗಿ ನಿನ್ನಲ್ಲಿ ಶರಣಾಗಿದ್ದೇನೆ. ನನಗೆ ಮಾರ್ಗದರ್ಶನ ಮಾಡು ಎಂದು ಅರ್ಜುನ ಕೃಷ್ಣನಲ್ಲಿ ಕೇಳಿಕೊಳ್ಳುತ್ತಾನೆ. ಇಲ್ಲಿಯ ತನಕ ಭಗವಂತನ ಮುಂದೆ ಪಂಡಿತನಂತೆ ಮಾತನಾಡಿದ ಅರ್ಜುನ, ಈಗ ಭಗವಂತನಲ್ಲಿ ಶರಣಾಗತಿಯನ್ನು ಬೇಡುತ್ತಿರುವುದು ಇಲ್ಲಿ ಸ್ಪಷ್ಟ.