ಶ್ಲೋಕ – 69
ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ।
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೇಃ ॥೬೯॥
ಯಾ ನಿಶಾ ಸರ್ವ ಭೂತಾನಾಂ ತಸ್ಯಾಮ್ ಜಾಗರ್ತಿ ಸಂಯಮೀ ಯಸ್ಯಾಮ್ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತಃ ಮುನೇಃ — ಯಾವುದು ಎಲ್ಲಾ ಜೀವಿಗಳಿಗೆ ಕತ್ತಲ ಕಗ್ಗಂಟೋ ಅಂಥಲ್ಲಿ ಇಂದ್ರಿಯಗಳನ್ನು ಗೆದ್ದ ಯೋಗಿ ಎಚ್ಚರವಿರುತ್ತಾನೆ. ಎಲ್ಲಾ ಜೀವಿಗಳು ಏಲ್ಲಿ ಎಚ್ಚರವಿರುವರೋ-ಅದು ಬಲ್ಲ ಚಿಂತಕನಿಗೆ ನಟ್ಟಿರುಳು.
ಸಾಮಾನ್ಯ ಮನುಷ್ಯನಿಗೆ ಯಾವುದು ಹಗಲೋ ಅದು ಸತ್ಯದ ಸಾಕ್ಷಾತ್ಕಾರವಾದವನಿಗೆ ರಾತ್ರಿ. ಜಗತ್ತಿನ ಎಲ್ಲಾ ಜೀವ ಜಾತಕ್ಕೆ ಯಾವುದು ರಾತ್ರಿಯೋ ಅದು ಸಾಧಕನಿಗೆ ಹಗಲು. ಅಂದರೆ ನಿಜವಾದ ಸಾಧಕ ನಮ್ಮ ರಾತ್ರಿಯಲ್ಲಿ ಎಚ್ಚರವಿರುತ್ತಾನೆ, ಹಾಗು ಲೌಕಿಕ ವ್ಯವಹಾರವೆಂಬ ನಮ್ಮ ಹಗಲು ಅವನಿಗೆ ರಾತ್ರಿ. ಲೌಕಿಕ ಪ್ರಪಂಚದಲ್ಲಿ ಅವನಿಗೆ ಪ್ರವೃತ್ತಿಯೇ ಇರುವುದಿಲ್ಲ. ಆತ ನಮಗೆ ಒಬ್ಬ ಮುಗ್ಧನಂತೆ, ಮಗುವಂತೆ ಕಾಣಬಹುದು. ಆತನ ಜ್ಞಾನದ ಬಗ್ಗೆ ಅರಿವಿಲ್ಲದವನಿಗೆ ಆತನೊಬ್ಬ ಹುಚ್ಚನಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಆತ ಲೌಕಿಕ ಪ್ರಪಂಚದೊಂದಿಗಿದ್ದು, ಅದರೊಂದಿಗೆ ಬೆರೆಯದೆ ತನ್ನ ಅಂತರಂಗದ ಆನಂದವನ್ನು ಸದಾ ಸವಿಯುತ್ತಿರುತ್ತಾನೆ. ಒಬ್ಬ ಜ್ಞಾನಿ ಭಗವಂತನನ್ನು ಕಂಡಾಗ ಆತನಿಗೆ ಉಳಿದಿದ್ದೆಲ್ಲಾ ಕತ್ತಲು. ಅದ್ಭುತವಾದ ಸಂಗತಿಯನ್ನು ಕಂಡ ವಿಸ್ಮಯದಲ್ಲಿ ತದೇಕಚಿತ್ತನಾಗಿ ಅದನ್ನೇ ನೋಡುತ್ತಿರುತ್ತಾನೆ. ಭಗವಂತನನ್ನು ಕಾಣಬೇಕಾದರೆ ನಾವು ಸದಾ ಶಾಸ್ತ್ರದ ಶ್ರವಣ ಮಾಡಬೇಕು. ಕೇವಲ ಶ್ರವಣ ಮಾಡಿದರೆ ಸಾಲದು, ಶ್ರವಣದ ನಂತರ ಮನನ-ನಿದಿಧ್ಯಾಸನ ಅತಿ ಮುಖ್ಯ. ಇದನ್ನೇ “ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ” ಎಂದಿದ್ದಾರೆ. ಮನನ ಶೀಲನಾದವ ‘ಮುನಿ’ ; ಅವನೇ ‘ಪಶ್ಯ’ ಅಂದರೆ ಭಗವಂತನನ್ನು ಕಾಣಬಲ್ಲವ ಅಥವಾ ಕಂಡವ.
ಇಂದಿನ ಸಮಾಜದಲ್ಲಿ ಸತ್ಯದ ಸಾಕ್ಷಾತ್ಕಾರನಾದವನನ್ನು ಗುರುತಿಸುವುದು ಬಹಳ ಕಷ್ಟ. ಸಿದ್ಧ ಪುರುಷರೆಲ್ಲಾ ಸತ್ಯವನ್ನು ಕಂಡವರಲ್ಲ! ಪವಾಡ ಮಾಡುವವರು ಭಗವಂತನನ್ನು ಕಂಡವರು ಎಂದು ಹೇಳಲಾಗುವುದಿಲ್ಲ. ಏಕೆಂದರೆ ನಿಜವಾದ ಸಾಧಕ ಸಾಮಾನ್ಯವಾಗಿ ಪವಾಡ ಮಾಡುವುದಿಲ್ಲ. ತೀರಾ ಅನಿವಾರ್ಯವಾದಾಗ ಮಾತ್ರ ಆತ ಪ್ರಪಂಚದ ಒಳಿತಿಗಾಗಿ ಪವಾಡ ಮಾಡಬಹುದು. ನಿರಂತರ ಸತ್ಯದ ಬಗ್ಗೆ ಅನ್ವೇಷಣೆ ಮಾಡಿ, ಸಿದ್ಧಿ ಗಳಿಸಿದರೆ ಮಾತ್ರ ಸ್ಥಿತಪ್ರಜ್ಞರಾಗಲು ಸಾಧ್ಯ.