ಶ್ಲೋಕ – 68
ತಸ್ಮಾದ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೬೮॥
ತಸ್ಮಾತ್ ಯಸ್ಯ ಮಹಾಬಾಹೋ ನಿಗೃಹೀತಾನಿ ಸರ್ವಶಃ ಇಂದ್ರಿಯಾಣಿ ಇಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ-ಆದ್ದರಿಂದ ಓ ಮಹಾವೀರ, ಯಾರ ಇಂದ್ರಿಯಗಳು ಎಲ್ಲ ಬಗೆಯಿಂದಲು ಇಂದ್ರಿಯ ವಿಷಯಗಳಿಂದ ಪಾರಾಗಿ ಹಿಡಿತದಲ್ಲಿರುವವೋ ಅವನ ಅರಿವು ಗಟ್ಟಿಗೊಡಿರುತ್ತದೆ.
ಕೃಷ್ಣ ಹೇಳುತ್ತಾನೆ, ಮನಸ್ಸು ಯಾವಾಗಲೂ ಹೊರಗಿನ ಇಂದ್ರಿಯಗಳು ಎನನ್ನು ಅಭ್ಯಾಸ ಮಾಡಿದವೋ ಅದರ ಹಿಂದೆಯೇ ಹೋಗುತ್ತದೆ. ಇಂದ್ರಿಯಗಳನ್ನು ನಿಯಂತ್ರಿಸದೆ ಮನಸ್ಸನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಮೊದಲು ನಾವು ಇಂದ್ರಿಯಗಳಿಗೆ ತರಬೇತಿ ಕೊಡಬೇಕು. ಇದಕ್ಕಾಗಿ ಚಿಕ್ಕ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಅತಿ ಮುಖ್ಯ. ಚಿಕ್ಕಂದಿನಿಂದಲೂ ಪಾಲಿಸಿಕೊಂಡು ಬಂದ ಅಭ್ಯಾಸವನ್ನು ಮುರಿಯುವುದು ಅಸಾಧ್ಯ. ಈ ಕಾರಣಕ್ಕಾಗಿ ಹಿಂದೆ ಶಾಲೆಯಲ್ಲಿ ಹಾಗು ಮನೆಯಲ್ಲಿ ಅನೇಕ ಸಂಸ್ಕಾರಗಳನ್ನು ರೂಢಿ ಮಾಡಿಕೊಂಡು ಮಕ್ಕಳಿಗೆ ತರಬೇತಿ ಕೊಡುತ್ತಿದ್ದರು. ಆದರೆ ಇಂದು ಶಾಲೆಯಲ್ಲಾಗಲಿ, ಮನೆಯಲ್ಲಾಗಲೀ ಇಂತಹ ಮಾರ್ಗದರ್ಶನ ಮಕ್ಕಳಿಗೆ ಸಿಗದೇ, ಇಂದಿನ ಯುವ ಪೀಳಿಗೆ ಬಿರುಗಾಳಿಗೆ ಸಿಕ್ಕ ದೋಣಿಯಂತಾಗಿದೆ.
ಇಂದ್ರಿಯ ನಿಗ್ರಹ ಮಾಡಲು ಪೂರಕವಾದ ಸಂಸ್ಕಾರ ಬಾಲ್ಯದಿಂದ ಬಂದರೆ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುವ ಪರಿಸ್ಥಿತಿ ಬಂದೊದಗುವುದಿಲ್ಲ. ಇದರಿಂದ ಮನಸ್ಸು ಗಟ್ಟಿಯಾಗುತ್ತದೆ. ಏಕಾಗ್ರತೆ ಸಾಧ್ಯವಾಗುತ್ತದೆ. ಏಕಾಗ್ರತೆ ಬಂದಾಗ ಅರಿವು ಗಟ್ಟಿಗೊಳ್ಳುತ್ತದೆ.
ಮನಸ್ಸನ್ನು ನಿಗ್ರಹ ಮಾಡುವುದು ಹೇಗೆ, ನಿಗ್ರಹ ಮಾಡಿದಂತಹ ಮನಸ್ಸು ಯಾವ ರೀತಿ ವರ್ತಿಸುತ್ತದೆ, ಅಂತಹ ಮನಃಸ್ಥಿತಿಯವರು ಹೇಗೆ ಜ್ಞಾನಿಗಳಾಗಲು ಸಾಧ್ಯ- ಅನ್ನುವ ಒಂದು ವಿಸ್ತಾರವಾದ ಮನೋವಿಶ್ಲೇಷಣೆಯನ್ನು ಕೃಷ್ಣ ಮಾಡಿದ. ಅರ್ಜುನ ಹಾಕಿದ ಮೂಲ ಪ್ರಶ್ನೆಗೆ ಕೃಷ್ಣ ಮುಂದಿನ ಶ್ಲೋಕದಲ್ಲಿ ಉತ್ತರಿಸುತ್ತಾನೆ. ಒಬ್ಬ ಸ್ಥಿತ ಪ್ರಜ್ಞ ಹೇಗಿರುತ್ತಾನೆ, ಆತನ ನಡೆ ನುಡಿ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಮಹತ್ತರವಾದ ಉತ್ತರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.