ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 67

ಇಂದ್ರಿಯಾಣಾಂ ಹಿ ಚರತಾಂ ಯನ್ಮನೋSನುವಿಧೀಯತೇ ।
ತದಸ್ಯ ಹರತಿ ಪ್ರಜ್ಞಾಂ ವಾಯುರ್ನಾವಮಿವಾಂಭಸಿ ॥೬೭॥

ಇಂದ್ರಿಯಾಣಾಂ ಹಿ ಚರತಾಮ್ ಯತ್ ಮನಃ ಅನುವಿಧೀಯತೇ ತತ್ ಅಸ್ಯ ಹರತಿ ಪ್ರಜ್ಞಾಮ್ ವಾಯುಃ ನಾವಮ್ ಇವ ಅಂಭಸಿ–ವಿಷಯಗಳತ್ತ ಹರಿಯುವ ಇಂದ್ರಿಯಗಳ ಬೆನ್ನು ಹತ್ತುವಂತೆ ಮನಸ್ಸು ರೂಪುಗೊಂಡಿದೆಯಲ್ಲವೇ? ಆದ್ದರಿಂದ, ಅದು ಸಾಧಕನ ಅರಿವನ್ನು ದಾರಿಗೆಡಿಸಿಬಿಡುತ್ತದೆ-ಕಡಲಲ್ಲಿ ಬಿರುಗಾಳಿ ಹಡಗನ್ನು ಹೇಗೆ ದಾರಿ ತಪ್ಪಿಸುತ್ತದೋ ಹಾಗೆ.

ಇಷ್ಟೆಲ್ಲಾ ಗಹನವಾದ ವಿಚಾರ ಇದ್ದರೂ ಕೂಡಾ, ಮನಸ್ಸು ಏಕೆ ಅಂತರಂಗದ ಆಳಕ್ಕಿಳಿಯುವುದಿಲ್ಲ? ಅದು ಸಹಜ ಎನ್ನುತ್ತಾನೆ ಕೃಷ್ಣ. ಏಕೆಂದರೆ ಮನಸ್ಸಿಗೆ ಒಂದು ಸ್ವಭಾವವಿದೆ. ಯಾವುದನ್ನು ನಾವು ಅದಕ್ಕೆ ಅಭ್ಯಾಸ ಮಾಡಿದೆವೋ ಅದನ್ನೇ ಮೆಚ್ಚಿಕೊಳ್ಳುವುದು. ಹೊಸದನ್ನು ಅದು ನಿರಾಕರಿಸುತ್ತದೆ ಹಾಗು ಪರಿಚಿತವಾದುದನ್ನು ಮಾತ್ರ ಅದು ಇಷ್ಟಪಡುತ್ತದೆ. ಮನಸ್ಸಿಗೆ ಒಳಪ್ರಪಂಚ ಅಪರಿಚಿತ. ಆದ್ದರಿಂದ ಅದು ಒಳಪ್ರಪಂಚದತ್ತ ಹರಿಯುವುದಿಲ್ಲ. ಮನಸ್ಸಿಗೆ ಗಟ್ಟಿಯಾಗಿ ಹೇಳಿದರೆ ಅದು ಅಂತರ್ಮುಖವಾಗುತ್ತದೆ; ಆದರೆ ಆ ಪ್ರಯತ್ನ ನಾವು ಮಾಡುವುದಿಲ್ಲ! ಈ ಅಪಾಯವನ್ನು ಈ ಶ್ಲೋಕದಲ್ಲಿ ಕೃಷ್ಣ ವಿವರಿಸಿದ್ದಾನೆ.

ಮನಸ್ಸಿಗೆ ನಾವು ಬಾಲ್ಯದಿಂದ ಎನನ್ನು ಅಭ್ಯಾಸ ಮಾಡಿಸಿದ್ದೆವೋ ಅದರ ಹಿಂದೆ ಅದು ಹೋಗುತ್ತದೆ. ಉದಾಹರಣೆಗೆ ಬಾಲ್ಯದಿಂದಲೂ ಶಾಖಾಹಾರಿಯಾಗಿದ್ದವನಿಗೆ ಮಾಂಸವನ್ನು ಕಂಡಾಗ ಅಸಹ್ಯ ಅನಿಸುತ್ತದೆ. ಆದರೆ ಅದೇ ಮಾಂಸ ಮಾರುವವ ಮಾಂಸದ ಮಧ್ಯದಲ್ಲೇ ಇದ್ದು ಅದನ್ನೇ ಬೇಯಿಸಿ ತಿಂದರೂ ಅವನಿಗೆ ಹೇಸಿಗೆ ಅನಿಸುವುದಿಲ್ಲ. ಇದೆಲ್ಲವೂ ಮನಸ್ಸಿಗೆ ನಾವು ಕೊಡುವ ತರಬೇತಿ. ಮನಸ್ಸು ನಿರಂತರ ಯಾವುದನ್ನು ನೋಡುತ್ತದೋ ಅದನ್ನೇ ರೂಢಿ ಮಾಡಿಕೊಳ್ಳುತ್ತದೆ. ಆ ರೀತಿ ಮನಸ್ಸು ಭಗವಂತನಿಂದ ನಿರ್ಮಿಸಲ್ಪಟ್ಟಿದೆ. ಇಂದ್ರಿಯಗಳು ನಿತ್ಯ ಯಾವುದನ್ನು ನೋಡುತ್ತವೋ ಅದನ್ನು ಮೆಚ್ಚುವಂತಹ ಸ್ವಭಾವವನ್ನು ಭಗವಂತ ಮನಸ್ಸಿಗೆ ಕೊಟ್ಟಿದ್ದಾನೆ. ಇಂತಹ ಮನಸ್ಸಿನ ಸ್ವಭಾವವನ್ನು ಅರಿಯದಿದ್ದರೆ ಅಪಾಯಕಾರಿ. ಅದು ನಮ್ಮ ಪ್ರಜ್ಞೆಯನ್ನು ಅಪಹಾರ ಮಾಡಿಬಿಡುತ್ತದೆ. ಇದನ್ನು ಒಂದು ಒಳ್ಳೆಯ ದೃಷ್ಟಾಂತದ ಮುಖೇನ ಕೃಷ್ಣ ವಿವರಿಸಿದ್ದಾನೆ:

ನಾವು ಹಾಯಿ ದೋಣಿಯಲ್ಲಿ ಪ್ರಯಾಣಿಸುವ ನಾವಿಕನಂತೆ. ನಮ್ಮ ಮನಸ್ಸು ಆ ದೋಣಿಗೆ ಕಟ್ಟಿದ ಬಟ್ಟೆ. ಒಂದು ವೇಳೆ ನಮಗೆ ಈ ಬಟ್ಟೆಯನ್ನು ತಿರುಗಿಸಿ ನಮಗೆ ಬೇಕಾದಂತೆ ದೋಣಿಯನ್ನು ನಿಯಂತ್ರಿಸುವ ಕಲೆ ಗೊತ್ತಿಲ್ಲದಿದ್ದರೆ, ಗಾಳಿ ಬೀಸಿದತ್ತ ನಾವು ಹೋಗುತ್ತೇವೆ ಹೊರತು ನಮಗೆ ತಲುಪಬೇಕಾದಲ್ಲಿಗಲ್ಲ. ಈ ದೃಷ್ಟಾಂತ ತುಂಬಾ ಔಚಿತ್ಯಪೂರ್ಣವಾಗಿದೆ. ಒಂದು ವೇಳೆ ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವ ಕಲೆಯನ್ನು ಕಲಿಯದಿದ್ದರೆ ಬದುಕು ಛಿದ್ರ-ವಿಛಿದ್ರವಾಗುತ್ತದೆ. ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ ಎನ್ನುವ ಎಚ್ಚರವನ್ನು ಕೃಷ್ಣ ಇಲ್ಲಿ ಕೊಟ್ಟಿದ್ದಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *