ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 66

ನಾಸ್ತಿ ಬುದ್ಧಿರಯುಕ್ತಸ್ಯ ನಚಾಯುಕ್ತಸ್ಯ ಭಾವನಾ ।
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ ॥೬೬॥

ನ ಅಸ್ತಿ ಬುದ್ಧಿಃ ಅಯುಕ್ತಸ್ಯ ನ ಚ ಅಯುಕ್ತಸ್ಯ ಭಾವನಾ ನ ಚ ಅಭಾವಯತಃ ಶಾಂತಿಃ ಅಶಾಂತಸ್ಯ ಕುತಃ ಸುಖಮ್–ಮನಸ್ಸು ಮಣಿಸದವನಿಗೆ ತಿಳಿಯಾದ ತಿಳಿವಿಲ್ಲ. ಮನಸ್ಸು ಮಣಿಸದವನಿಗೆ ಧ್ಯಾನವೂ ಇಲ್ಲ. ಧ್ಯಾನ ಇರದವನಿಗೆ ಮುಕ್ತಿಯಿಲ್ಲ[ಭಗವಂತನಲ್ಲಿ ಬಗೆ ನೆಲೆಸದು]. ಮುಕ್ತನಾಗದವನಿಗೆ[ಭಗವಂತನಲ್ಲಿ ಬಗೆ ನೆಡದವನಿಗೆ] ಎಲ್ಲಿಯ ಸುಖ ?

ಸುಖ ಬೇಕಿದ್ದರೆ ಶಾಂತಿ ಬೇಕು. ಮನಸ್ಸು ಪ್ರಸನ್ನವಾಗದೆ ವಿಕ್ಷಿಪ್ತವಾಗಿದ್ದರೆ ಅದು ಭಗವಂತನನ್ನು ಹೋಗಿ ಸೇರುವುದಿಲ್ಲ. ಯಾರ ಮನಸ್ಸು ಭಗವಂತನಲ್ಲಿ ಸಂಯೋಗ ಹೊಂದುವುದಿಲ್ಲವೋ ಅವನಿಗೆ ಅಪರೋಕ್ಷವಿಲ್ಲ. ಅಂಥವನ ಮನಸ್ಸು ತಿಳಿಯಾಗದು. ಇಂಥವರು ಏಕಾಗ್ರವಾಗಿ ಚಿಂತಿಸಲು ಸಾಧ್ಯವಿಲ್ಲ. ಏಕಾಗ್ರವಾಗಿ ಚಿಂತಿಸದ ಹೊರತು ಯಥಾರ್ಥ ಜ್ಞಾನವಿಲ್ಲ. ಇಂಥವರಿಗೆ ಧ್ಯಾನ(Meditation) ಅಸಾಧ್ಯ. ಇಲ್ಲಿ ಧ್ಯಾನ ಅಂದರೆ ಏಕಾಗ್ರವಾಗಿ ಒಂದು ವಸ್ತುವಿನ ಬಗ್ಗೆ ಚಿಂತಿಸುವುದು. ಯಾವುದೇ ಒಂದು ವಸ್ತುವಿನ ಬಗ್ಗೆ ನಮಗೆ ಖಚಿತವಾದ ಅರಿವು ಬರಬೇಕಾದರೆ ನಮಗೆ ಏಕಾಗ್ರತೆ ಬೇಕು. ಅದನ್ನೇ ಇಲ್ಲಿ ‘ಭಾವನಾ’ ಎಂದಿದ್ದಾರೆ. ಮನಸ್ಸು ಏಕಾಗ್ರವಾದರೆ ಮಾತ್ರ ಆಳವಾದ ಚಿಂತನೆ ಸಾಧ್ಯ. ಯಾವುದನ್ನೂ ಆಳವಾಗಿ ಚಿಂತಿಸದ ಹೊರತು ಅದರ ಬಗ್ಗೆ, ಅದರ ವೈಶಾಲ್ಯತೆ ಬಗ್ಗೆ ಅರಿವು ಮೂಡದು. ಹೀಗೆ ಆಳಕ್ಕಿಳಿದು ಚಿಂತನೆ ಮಾಡದವನಿಗೆ ಶಾಂತಿ ಇಲ್ಲ. ಇಲ್ಲಿ ಶಾಂತಿ ಎನ್ನುವುದಕ್ಕೆ ಎರಡು ಅರ್ಥವಿದೆ. ಮೇಲ್ನೋಟಕ್ಕೆ ಶಾಂತಿ ಅಂದರೆ ಆನಂದಮಯವಾದ ಸ್ಥಿತಿ. ಶಾಸ್ತ್ರಕಾರರ ಪ್ರಕಾರ ಜೀವನಿಗೆ ಪೂರ್ಣ ಆನಂದದ ಸ್ಥಿತಿ ಅಂದರೆ ಮೋಕ್ಷ. ಆದ್ದರಿಂದ ಯಾರು ಧ್ಯಾನದಿಂದ ಭಗವಂತನನ್ನು ಕಂಡುಕೊಳ್ಳುವುದಿಲ್ಲವೋ ಅವನಿಗೆ ಮೋಕ್ಷವಿಲ್ಲ. ಮೋಕ್ಷದ ದಾರಿಯಲ್ಲಿ ಸಾಗದವನಿಗೆ ಸುಖವಿಲ್ಲ. ಇನ್ನು ಶಾಂತಿ ಎಂದರೆ ಆನಂದದ ತುತ್ತತುದಿ ಅಥವಾ ಪರಾಕಾಷ್ಠೆ. ಮನಸ್ಸು ಭಗವಂತನಲ್ಲಿ ನೆಲೆಗೊಂಡಾಗ ನಮಗೆ ಶಾಂತಿ.

ಹೀಗೆ ಇಂದ್ರಿಯಗಳನ್ನು ಸಂಯಮ ಮಾಡಿಕೊಂಡು, ಮನಸ್ಸನ್ನು ಏಕಾಗ್ರಗೊಳಿಸಿ, ಅದರಲ್ಲಿ ಆಳವಾಗಿ ಚಿಂತನೆ ಮಾಡಿ, ಸತ್ಯವನ್ನು ಕಂಡುಕೊಳ್ಳಬೇಕು. ನಾವು ಹೊರ ಪ್ರಪಂಚವನ್ನು ಬಿಟ್ಟು ಒಳ ಪ್ರಪಂಚದಲ್ಲಿ ಆಳವಾಗಿ ಮುಳುಗದ ಹೊರತು ಸತ್ಯದ ಸಾಕ್ಷಾತ್ಕಾರವಾಗದು. ಸತ್ಯದ ಸಾಕ್ಷಾತ್ಕಾರವಾಗದ ಹೊರತು ಸುಖವಿಲ್ಲ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *