ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 64

ರಾಗದ್ವೇಷವಿಮುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ ।
ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದಮಧಿಗಚ್ಛತಿ ॥೬೪॥

ರಾಗ ದ್ವೇಷ ವಿಮುಕ್ತೈ: ತು ವಿಷಯಾನ್ ಇಂದ್ರಿಯೈ: ಚರನ್ ಆತ್ಮವಶ್ಯೈ: ವಿಧೇಯ ಆತ್ಮಾ ಪ್ರಸಾದಮ್ ಅಧಿಗಚ್ಛತಿ –ಒಲವು ಹಗೆತನಗಳಿಂದ ಪಾರಾಗಿ ತನ್ನ ಹಿಡಿತದಲ್ಲಿರುವ ಇಂದ್ರಿಯಗಳಿಂದ ವಿಷಯಗಳನ್ನು ಅನುಭವಿಸುವಾಗಲೂ, ಅಂಕೆ ತಪ್ಪದವನ ಮನಸ್ಸು ತಿಳಿಗೊಳ್ಳುತ್ತದೆ.

ಇಂದ್ರಿಯ ನಿಗ್ರಹ ಅಥವಾ ಹಚ್ಚಿಕೊಳ್ಳದೆ ಇರುವುದು ಅಂದರೆ ಎಲ್ಲಾ ವಿಷಯ ಭೋಗಗಳನ್ನು ತೊರೆದು ಪ್ರಾಪಂಚಿಕ ವ್ಯವಹಾರದಿಂದ ದೂರಸರಿದು ಕಣ್ಮುಚ್ಚಿ ಕುಳಿತುಕೊಳ್ಳುವುದಲ್ಲ. ಇಂದ್ರಿಯದಿಂದ ವಿಷಯ ಗ್ರಹಿಸು, ಅದು ನಿರಂತರ. ಆದರೆ ಅದರಿಂದ ಪ್ರಭಾವಿತನಾಗಿ ಅದರ ದಾಸನಾಗಬೇಡ ಎನ್ನುತ್ತಾನೆ ಕೃಷ್ಣ. ವಿಷಯಗಳನ್ನು ಇಂದ್ರಿಯಗಳಿಂದ ಅನುಭವಿಸು, ಆದರೆ ವಿಷಯಗಳಿಗೆ ರಾಗ-ದ್ವೇಷಗಳ ಹವ್ಯಾಸವನ್ನು ಅಂಟಿಸಬೇಡ. ಏನು ಬಂತೋ ಹಾಗೇ ಅನುಭವಿಸು. ಇಂತಹ ಮನೋವೃತ್ತಿಯನ್ನು ಬೆಳೆಸಿಕೊಂಡಾಗ ಇಂದ್ರಿಯ ಯಾವ ವಿಷಯವನ್ನು ಗ್ರಹಿಸಿದರೂ ಅಪಾಯವಿಲ್ಲ. ತಟಸ್ಥ ಮನಸ್ಸಿನಿಂದ ಯಾವ ವಿಷಯ ಕೇಳುವುದರಿಂದ, ನೋಡುವುದರಿಂದ ಯಾವ ಅಪಾಯವೂ ಇಲ್ಲ. ಇಲ್ಲಿ ತಟಸ್ಥ ಮನಸ್ಸು ಅನ್ನುವುದಕ್ಕೆ ಉದಾಹರಣೆ ಎಂದರೆ, ಕೆಲವೊಮ್ಮೆ, ನಾವು ನಮ್ಮ ಸ್ನೇಹಿತರನ್ನು ದಾರಿ ಮಧ್ಯದಲ್ಲಿ ಭೇಟಿಯಾಗುತ್ತೇವೆ. ನಾವು ಅಲ್ಲಿ ಕುಳಿತು ಸಂಭಾಷಣೆ ಮಾಡುತ್ತೇವೆ. ಆದರೆ ನಂತರ ಯಾರಾದರೂ ಬಂದು ನಿನ್ನ ಸ್ನೇಹಿತ ಯಾವ ಬಣ್ಣದ ಬಟ್ಟೆ ಧರಿಸಿದ್ದ ಎಂದು ಕೇಳಿದರೆ ನಮಗೆ ಗೊತ್ತಿರುವುದಿಲ್ಲ. ನಾವು ನೋಡಿರುತ್ತೇವೆ, ಆದರೆ ಗಮನಿಸಿರುವುದಿಲ್ಲ. ಏಕೆಂದರೆ ಅದರ ಅಗತ್ಯವಿರುವುದಿಲ್ಲ. ಇದೇ ರೀತಿ ಮನಸ್ಸನ್ನು ತಟಸ್ಥವಾಗಿಟ್ಟು ಯಾವ ವಿಷಯ ಗ್ರಹಿಸಿದರೂ ಅಪಾಯವಿಲ್ಲ. ಇದರಿಂದ ಇಂದ್ರಿಯಗಳು ಅಧೀನವಾಗಿರುತ್ತವೆ. ಮನಸ್ಸು ವಿಧೇಯವಾಗಿರುತ್ತದೆ. ಒಳಗಿನಿಂದ ನಿರ್ಲಿಪ್ತತೆಯನ್ನು ಬೆಳೆಸಿಕೊಂಡಾಗ ಎಲ್ಲರ ಜೊತೆಗಿದ್ದು ಏಕಾಂತತೆಯನ್ನು ಗಳಿಸಬಹುದು. ಎಲ್ಲರ ಜೊತೆ ಬೆರೆತು ಬೇರೆಯಾಗಿರಬಹುದು. ಅಂತರಂಗದ ಪ್ರಪಂಚದಲ್ಲಿ ಬೇರೆಯಾಗಿರುವ ಸ್ಥಿತಿ ಇದು. ಈ ರೀತಿ ಬದುಕಲು ಕಲಿತಾಗ ಮನಸ್ಸು ತಿಳಿಗೊಳ್ಳುತ್ತದೆ. ಯಾವಾಗಲೂ ಸಂತೋಷ ಉಕ್ಕಿ ಹೊರಬರುತ್ತಿರುತ್ತದೆ. ಸಾಧನೆ ಸುಗಮವಾಗುತ್ತದೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *