ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 63

ಕ್ರೋಧಾದ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ ।
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾದ್ ವಿನಶ್ಯತಿ ॥೬೩॥

ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮಃ ಸ್ಮೃತಿಭ್ರಂಶಾದ್ ಬುದ್ಧಿನಾಶಃ ಬುದ್ಧಿನಾಶಾತ್ ವಿನಶ್ಯತಿ –ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!

ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ, ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು ಹಚ್ಚಿಕೊಳ್ಳುವುದು(Attachment).ನಂತರ ಅವರು ನನ್ನವರಾಗಬೇಕು ಎನ್ನುವ ಆಸೆ. ನಾವು ಆಸೆ ಪಟ್ಟಂತೆ ನೆರವೇರದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ! ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು ತೊರೆಯಬೇಕು. ಆಸೆ ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು ಅಥವಾ ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ ಮಾಡುವ ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತಿಕಾರ ಮಾಡಬೇಕು ಎನ್ನುವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ!

ಬುದ್ಧಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು ಅಧಃಪತನದ ದಾರಿ. ನಾವು ಎತ್ತರಕ್ಕೇರಬೇಕೆಂದರೆ ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ ಮೊದಲು ನಾವು ಹಚ್ಚಿಕೊಳ್ಳುವುದನ್ನು(Over attachment) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ. ಪ್ರೀತಿ ಇರಲಿ, ಸ್ನೇಹವಿರಲಿ, ಆದರೆ ಮೋಹ ಬೇಡ. ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ ಹಚ್ಚಿಕೊಳ್ಳದೇ ಇರುವುದು(Detached attachment). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ.

ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂಥಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *