ಶ್ಲೋಕ – 60
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥
ಯತತಃ ಹಿ ಅಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಮ್ ಮನಃ — ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲಕಿ ಸೆಳೆದುಬಿಡುತ್ತವೆ.
ನಾವು ಎಷ್ಟು ಓದಿ , ಕೇಳಿ ತಿಳಿದುಕೊಂಡರೂ ಕೂಡಾ, ಸಾಧನೆಯ ಈ ದಾರಿ ಅಷ್ಟು ಸುಲಭದ್ದಲ್ಲ. ಪ್ರಯತ್ನದ ಛಲವಿಲ್ಲದೆ ಇದು ಅಸಾಧ್ಯ. ಅಧ್ಯಾತ್ಮದ ದಾರಿಯಲ್ಲಿ ಸಾಗಲು ಮನಸ್ಸು ಗಟ್ಟಿಯಾಗಿರಬೇಕು. ಆದರೆ ಇಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಮನಸ್ಸು ಗಟ್ಟಿಯಾದಾಗ ಇಂದ್ರಿಯಗಳು ಸಡಿಲವಾಗುತ್ತವೆ. ರಾಗ ದ್ವೇಷ ಮಾಡಬಾರದು, ಕಾಮ ಕ್ರೋಧಗಳಿಗೆ ಒಳಗಾಗಬಾರದು, ಬಯಕೆಯ ಮೇಲೆ ಕಡಿವಾಣವಿರಬೇಕು ಎಂದು ಗಟ್ಟಿ ಮನಸ್ಸಿನಲ್ಲಿ ತೀರ್ಮಾನ ಮಾಡಿ ಕುಳಿತಾಗ, ಇಂದ್ರಿಯಗಳು ಮನಸ್ಸನ್ನು ಗೊಂದಲಗೊಳಿಸುತ್ತವೆ. ಶಾಸ್ತ್ರವನ್ನು ಓದಿ ಪರೋಕ್ಷವಾಗಿ ಸತ್ಯವನ್ನು ಕಂಡವನನ್ನೂ ಸಹ ಈ ಸಮಸ್ಯೆ ಕಾಡದೆ ಬಿಡದು. ಬಲಾತ್ಕಾರವಾಗಿ ಇಂದ್ರಿಯಗಳು ಮನಸ್ಸನ್ನು ದಾರಿ ತಪ್ಪಿಸುತ್ತವೆ. ಇದರಿಂದಾಗಿ ಮೊದಲು ನಂಬಿದ್ದನ್ನು ನಂಬಬೇಕೋ ಬಿಡಬೇಕೋ ಅನ್ನುವ ಸಂಶಯ ಹುಟ್ಟಿಕೊಳ್ಳುತ್ತದೆ. ಇದು ಪ್ರತಿಯೊಬ್ಬ ಸಾಧಕ ಜೀವನಿಗೆ ಅನುಭವಕ್ಕೆ ಬರುವ ಸಂಗತಿ. ಈ ಸಮಸ್ಯೆ ಗಂಭೀರವಾಗಿ ಕಂಡರೂ ಕೂಡಾ ಕೃಷ್ಣ ಮುಂದಿನ ಶ್ಲೋಕದಲ್ಲಿ ಇದಕ್ಕೆಸರಳ ಪರಿಹಾರ ಸೂಚಿಸುತ್ತಾನೆ.