ಶ್ಲೋಕ – 6
ನ ಚೈತದ್ ವಿದ್ಮಃ ಕತರನ್ನೋ ಗರೀಯೋ ಯದ್ ವಾ ಜಯೇಮ ಯದಿ ವಾ ನೋ ಜಯೇಯುಃ ।
ಯಾನೇವ ಹತ್ವಾ ನ ಜಿಜೀವಿಷಾಮಸ್ತೇSವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ ॥೬॥
ನ ಚ ಏತತ್ ವಿದ್ಮಃ ಕತರತ್ ನಃ ಗರೀಯಃ ಯತ್ ವಾ ಜಯೇಮ ಯದಿ ವಾ ನಃ ಜಯೇಯುಃ ಯಾನ್ ಏವ ಹತ್ವಾ ನ ಜಿಜೀವಿಷಾಮಃ ತೇ ಅವಸ್ಥಿತಾಃ ಪ್ರಮುಖೇ ಧಾರ್ತರಾಷ್ಟ್ರಾಃ –ಇದೇ ತಿಳಿಯುತ್ತಿಲ್ಲ. ಯಾವುದು ನಮಗೆ ಹೆಚ್ಚು ಒಳಿತು-ನಾವು ಗೆಲ್ಲುವುದೇ? ಅಥವ ನಮ್ಮನ್ನು ಅವರು ಗೆಲ್ಲುವುದೇ? ಯಾರನ್ನು ಕೊಂದು ನಾವು ಬದುಕ ಬಯಸುವುದಿಲ್ಲವೋ, ಅವರು(ಕೌರವರು) ನಮ್ಮೆದುರು ನಿಂತಿದ್ದಾರೆ.
ಇಲ್ಲಿಯ ತನಕ ತನ್ನ ವಾದವನ್ನೇ ಮಂಡಿಸಿದ ಅರ್ಜುನ ಈಗ ಕೃಷ್ಣನಿಗೆ ಶರಣಾಗಿ ತನಗ್ಯಾವುದು ಒಳಿತು ಎಂದು ಪ್ರಶ್ನೆ ಮಾಡುತ್ತಾನೆ. “ನಾವು ಯುದ್ಧ ಮಾಡಿ ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ಅಥವಾ ಗುರುಹಿರಿಯರು ಗೆಲ್ಲುವುದರಲ್ಲಿ ನಮಗೆ ಶ್ರೆಯಸ್ಸೋ ತಿಳಿಯುತ್ತಿಲ್ಲ. ಯುದ್ಧದಲ್ಲಿ ಗೆಲ್ಲಬೇಕು ಎನ್ನುವ ಆಸೆಯೂ ಹೊರಟುಹೋಗಿದೆ” ಎಂದು ತನ್ನ ಮನಸ್ಸಿನ ಸಂಧಿಗ್ಧತೆಯನ್ನು ಅರ್ಜುನ ಕೃಷ್ಣನ ಮುಂದೆ ಬಿಚ್ಚಿಡುತ್ತಾನೆ. ತಂದೆ ಸಮಾನಾದ ಧೃತರಾಷ್ಟ್ರನ ಮಕ್ಕಳು ನಮ್ಮ ಮುಂದೆ ಯುದ್ಧಕ್ಕೆ ನಿಂತಿದ್ದಾರೆ. ಮಕ್ಕಳೆಂದರೆ ಪ್ರಾಣ ಬಿಡುವ ನಮ್ಮ ದೊಡ್ಡಪ್ಪನ ವಿರುದ್ಧ ಹೋರಾಡಲು ಇಷ್ಟವಿಲ್ಲ ಎನ್ನುತ್ತಾನೆ ಅರ್ಜುನ.