ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 59

ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋSಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥೫೯॥

ವಿಷಯಾಃ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ರಸವರ್ಜಮ್ ರಸಃ ಅಪಿ ಅಸ್ಯ ಪರಮ್ ದೃಷ್ಟ್ವಾ ನಿವರ್ತತೇ- -ಆಹಾರ ತೊರೆದ ಜೀವಿಗೆ ವಿಷಯ ಭೋಗದ ಕಸುವಷ್ಟೇ ಕುಂದುತ್ತದೆ-ನಾಲಗೆಯ ಕಸು ಮತ್ತು ಭೋಗದ ಬಯಕೆಯನ್ನು ಬಿಟ್ಟು. ಅಂಥ ಕಸುವು-ಬಯಕೆ ಕೂಡಾ ಭಗವಂತನನ್ನು ಕಂಡಾಗ ಇಲ್ಲವಾಗುತ್ತದೆ.

ನಾವು ಸ್ಥಿತಪ್ರಜ್ಞರಾಗಬೇಕೆಂದರೆ ಇಂದ್ರಿಯಗಳನ್ನು ಅಂತರ್ಮುಖಗೊಳಿಸಬೇಕು ಎನ್ನುವ ವಿಷಯವನ್ನು ನೋಡಿದೆವು. ಆದರೆ ಅದು ಅಷ್ಟು ಸುಲಭದ ವಿಷಯವಲ್ಲ. ಸಾಧನಾ ಶರೀರದಲ್ಲಿರುವ ಸಾಧಕ, ಇಂದ್ರಿಯಗಳನ್ನು ಹೊರಗಿನ ವಿಷಯಗಳ ಜೊತೆಗೆ ಸಂಪರ್ಕ ಆಗದಂತೆ ತಡೆದರೆ(ಏಕಾಂತದ ಅಭ್ಯಾಸ), ನೋಡುವ, ಕೇಳುವ ಎಲ್ಲಾ ಆಸೆಗಳು ಹೊರಟು ಹೋಗಬಹುದು. ಆದರೆ ರುಚಿ(ನಾಲಿಗೆಯ ಚಪಲ) ಮತ್ತು ಶೃಂಗಾರ(ಲೈಂಗಿಕ ಬಯಕೆ)ವನ್ನು ನಿವಾರಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ಬ್ರಹ್ಮಚರ್ಯ ಪಾಲನೆ ಮಾಡಬೇಕೆಂದಿದ್ದರೆ ಒಮ್ಮೆ ಶೃಂಗಾರ ಭೋಗವನ್ನು ಅನುಭವಿಸಿ, ದಾಂಪತ್ಯವೆಂದರೆ ಏನು ಎಂದು ಅರಿತು, ಆನಂತರ ಬ್ರಹ್ಮಚರ್ಯಕ್ಕೆ ಕಾಲಿಟ್ಟರೆ ಸಾಧನೆ ಸುಲಭ. ನಿಯಮಿತ ಆಹಾರ, ಉಪವಾಸ- ಅಧ್ಯಾತ್ಮಕ್ಕೆ ಪೂರಕ. ಅತಿ ಆಹಾರ, ತಾಮಸ ಹಾಗು ರಾಜಸ ಆಹಾರ (ಉದಾ: ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಇತ್ಯಾದಿ) ಅಧ್ಯಾತ್ಮ ಸಾಧನೆಗೆ ತೀರಾ ವಿರುದ್ಧ (ಈ ಕಾರಣಕ್ಕಾಗಿ ಯಾರೇ ಅತಿಥಿ ಬಂದಾಗ ಅವರಿಗೆ ಒತ್ತಾಯ ಪೂರ್ವಕವಾಗಿ ಆಹಾರ ನೀಡಬಾರದು; ಮಾಡಿದ ಅಡಿಗೆ ಮಿಕ್ಕಿದಾಗ ಹಾಳಾಗುತ್ತಲ್ಲಾ ಅಂತ ತಿನ್ನುವುದರಿಂದ ಆಹಾರವೂ ಹಾಳು ದೇಹವೂ ಹಾಳು! ). ಒಟ್ಟಿನಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಏಕಾಂತ ಹಾಗು ಆಹಾರ ನಿಯಂತ್ರಣ ಸಾಧನೆಗೆ ಪೂರಕ . ಇದರಿಂದ ನಮ್ಮ ನಾಲಿಗೆಯ ಮತ್ತು ಭೋಗದ ಚಪಲ ಸಂಪೂರ್ಣ ನಿಗ್ರಹ ಆಗದಿದ್ದರೂ ಕೂಡಾ ಅವು ಭಗವಂತನಲ್ಲಿ ಸಂಪೂರ್ಣ ಶರಣಾದಾಗ ಇಲ್ಲವಾಗುತ್ತವೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *