ಶ್ಲೋಕ – 57
ಯಃ ಸರ್ವತ್ರಾನಭಿಸ್ನೇಹಸ್ತತ್ತತ್ ಪ್ರಾಪ್ಯ ಶುಭಾಶುಭಮ್ ।
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೫೭॥
ಯಃ ಸರ್ವತ್ರ ಅನಭಿಸ್ನೇಹ ತತ್ ತತ್ ಪ್ರಾಪ್ಯ ಶುಭ ಅಶುಭಮ ನ ಅಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ–ಆಯಾ ಒಳಿತು-ಕೆಡುಕುಗಳು ಬಂದೊದಗಿದಾಗ ಎಲ್ಲೂ ಅತಿಯಾಗಿ ಅಂಟಿಕೊಳ್ಳುವುದಿಲ್ಲ. ಒಳಿತಿನ ಬಗೆಗೆ ಮೆಚ್ಚೂ ಇಲ್ಲ. ಕೆಡುಕಿನ ಬಗ್ಗೆ ರೊಚ್ಚೂ ಇಲ್ಲ. ಇಂಥವನ ಅರಿವು ಗಟ್ಟಿಗೊಂಡಿರುತ್ತದೆ.
ಇಲ್ಲಿ ಕೃಷ್ಣ ಹೇಳುತ್ತಾನೆ- “ದುಃಖ ಬಂದಾಗ ಕಂಗೆಡಬೇಡ, ಸುಖ ಬಂದಾಗ ಉಬ್ಬಬೇಡ, ನಿರ್ಲಿಪ್ತತೆಯನ್ನು ಅಭ್ಯಾಸ ಮಾಡು. ಯಾವುದರ ಮೇಲೂ ಅತಿಯಾದ ಆಸಕ್ತಿ( Over attachment) ಬೇಡ. ಮನಸ್ಸಿನ ಸಮತೋಲನವನ್ನು ಸಾಧಿಸು” ಎಂದು. ದುಃಖ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ದೇವಾಂಶ ಸಂಭೂತರಾದ ಪಾಂಡವರು ಪಟ್ಟ ಕಷ್ಟವನ್ನು ನೋಡಿದರೆ ಇದು ಸ್ಪಷ್ಟ. ಜ್ಞಾನಿಗಳಾಗಲಿ, ಅಜ್ಞಾನಿಗಳಾಗಲಿ, ಎಲ್ಲರಿಗೂ ಕಷ್ಟ ಬರುತ್ತದೆ. ನಾವು ಕಷ್ಟವನ್ನು ನೋಡುವ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಅಷ್ಟೆ. “ನಾನು ಬೇಕು-ಬೇಡವನ್ನು ಮೀರಿ ನಿಂತಿದ್ದೇನೆ, ಇಂತದ್ದೇ ಬೇಕು, ಇಂತದ್ದು ಬೇಡ ಎನ್ನುವ ಆಯ್ಕೆ-ಅಧಿಕಾರ ನನಗಿಲ್ಲ”- ಎನ್ನುವ ಸತ್ಯವನ್ನರಿತು ಬದುಕಿದಾಗ ಜೀವನ ಸುಗಮವಾಗುತ್ತದೆ. ಅಂತಹ ವ್ಯಕ್ತಿ ಎತ್ತರಕ್ಕೇರುತ್ತಾನೆ.
ಜ್ಞಾನಿಗಳಲ್ಲಿ ಇಂಥಹ ಮನಃಸ್ಥಿತಿ ಇರುತ್ತದೆ. ಸಾಮಾನ್ಯ ಮಾನವರಾದ ನಮಗೆ ಇಂದ್ರಿಯ ನಿಗ್ರಹ ಬಹಳ ಕಷ್ಟ, ಆದರೆ ಅಸಾಧ್ಯವಲ್ಲ. ನಿರಂತರ ಸಾಧನೆಯಿಂದ ಇದನ್ನು ಸಾಧಿಸಬಹುದು. ಯಾವ ರೀತಿ ನಾವು ಇಂದ್ರಿಯ ನಿಗ್ರಹ ಮಾಡಿ ಸಾಧನೆ ಮಾಡಬೇಕು ಎನ್ನುವುದನ್ನು ದೃಷ್ಟಾಂತದೊಂದಿಗೆ ಕೃಷ್ಣ ಮುಂದಿನಶ್ಲೋಕದಲ್ಲಿ ವಿವರಿಸಿದ್ದಾನೆ.