Wednesday , 22 May 2024

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 56

ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ॥೫೬॥

ದುಃಖೇಷು ಅನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ ವೀತ ರಾಗ ಭಯ ಕ್ರೋಧಃ ಸ್ಥಿತಧೀ ಮುನಿಃ ಉಚ್ಯತೇ –ಸಂಕಟ ಬಂದಾಗ ಬಗೆಯಲ್ಲಿ ತಳಮಳವಿಲ್ಲ. ಸುಖದ ಸಂಗತಿಗಳಲ್ಲಿ ಹಂಬಲವಿಲ್ಲ. ಯಾವುದರಲ್ಲೂ ರಾಗವಿಲ್ಲ, ಭಯವಿಲ್ಲ, ಕ್ರೋಧವಿಲ್ಲ. ಇಂಥಹ ಚಿಂತನಶೀಲ ‘ಸ್ಥಿತಪ್ರಜ್ಞ’ ಎನಿಸುತ್ತಾನೆ.

ಜೀವನದಲ್ಲಿ ಸುಖ-ದುಃಖಗಳು ಹಗಲು-ರಾತ್ರಿ ಇದ್ದಂತೆ. ಇದು ನಿರಂತರ ಮತ್ತು ಯಾರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ಸುಖ-ನಾವು ಬಯಸದೇ ಬರುತ್ತದೆ. ಅದೇ ತರ ಇನ್ನು ಕೆಲವೊಮ್ಮೆ ದುಃಖ ಸರಮಾಲೆಯಾಗಿ ಬೆನ್ನು ಹತ್ತುತ್ತದೆ. ದುಡ್ಡಿನಿಂದ ದುಃಖವನ್ನು ತಡೆಯಲಾಗದು-ಸುಖವನ್ನು ಖರೀದಿಸಲಾಗದು. ಸಾಮಾನ್ಯವಾಗಿ ದುಃಖ ಬಂದಾಗ ನಾವು ಉದ್ವೇಗಕ್ಕೊಳಗಾಗುತ್ತೇವೆ. ಇದರಿಂದ ಮನಸ್ಸು ಕಂಗೆಡುತ್ತದೆ, ಅದರಿಂದ ದೇಹದ ಆರೋಗ್ಯ ಕೆಡುತ್ತದೆ. ಯಾವುದು ಅನಿವಾರ್ಯವೋ ಅದರ ಬಗ್ಗೆ ಅಳುತ್ತಾ ಕುಳಿತುಕೊಂಡರೆ ಉಪಯೋಗವಿಲ್ಲ. ಅಳುತ್ತಾ ಕೂರುವುದರಿಂದ ಬಂದ ದುಃಖ ಹೋಗದು, ಬರುವ ದುಃಖವನ್ನು ತಡೆಯಲಾಗದು. ದುಃಖ ‘ಸುಖದ ಸಿದ್ಧತೆ’; ಸುಖ ‘ದುಃಖದ ಸಿದ್ಧತೆ’. ಇವು ಜೀವನದ ಅನಿವಾರ್ಯ ದ್ವಂದ್ವಗಳು. ಅಂದರೆ ಸುಖ ಬಂದಾಗ ಸಂತೋಷಪಡಬಾರದು ಎಂದಲ್ಲ, ಆ ಸುಖದಲ್ಲಿ ಮೈಮರೆಯಬಾರದು ಅಷ್ಟೆ. ತಟಸ್ಥತೆಯನ್ನು ಮನಸ್ಸಿಗೆ ಅಭ್ಯಾಸ ಮಾಡಿಸಬೇಕು. ಜೀವನ ಯುದ್ಧದಲ್ಲಿ ಸುಖ-ದುಃಖಗಳು ಹಾಸುಹೊಕ್ಕಾಗಿವೆ ಎನ್ನುವ ಸತ್ಯವನ್ನರಿತು ಜೀವನ ಸಾಗಿಸಬೇಕು. ದುಃಖ ಬಂದಾಗ ಮನಸ್ಸನ್ನು ಗಟ್ಟಿಯಾಗಿಸಿಕೊಂಡು ಬದುಕಬೇಕು ಎಂದು ಹೇಳುವುದು ಸುಲಭ. ಆದರೆ ಅದನ್ನು ಜೀವನದಲ್ಲಿ ಅನುಸರಿಸುವುದು ಅಷ್ಟೇ ಕಷ್ಟ. ಇದಕ್ಕೆ ದೃಷ್ಟಾಂತ ಮಹಾಭಾರತ ಯುದ್ಧದಲ್ಲಿ ಅಭಿಮನ್ಯು ಸತ್ತಾಗ ಕಣ್ಣೀರು ಸುರಿಸಿದ ಅರ್ಜುನ. ಸ್ವಯಂ ಭಗವಂತನಿಂದ ಉಪದೇಶ ಪಡೆದು, ಭಗವಂತನ ಸಾರಥ್ಯದಲ್ಲಿ ಯುದ್ಧಕ್ಕಿಳಿದ ಸ್ಥಿತಪ್ರಜ್ಞನಾದ ಅರ್ಜುನ, ತನ್ನ ಮಗ ಅಭಿಮನ್ಯು ಸತ್ತಾಗ ದುಃಖಿಸುತ್ತಾನೆ. ನಾವು ದುಃಖವನ್ನು ಸ್ವೀಕರಿಸಲು ಅಭ್ಯಾಸ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬದುಕು ದುಸ್ತರವಾಗುತ್ತದೆ.

ಯಾವುದೇ ಒಂದು ವಸ್ತುವಿನ ಬಗ್ಗೆ ಮೂರು ವಿಷಯಗಳು ಮನಸ್ಸಿನಲ್ಲಿರಬಾರದು. ಅವುಗಳೆಂದರೆ ರಾಗ-ಭಯ-ಕ್ರೋಧ. ದುಃಖದ ಪೂರ್ವ ಸ್ಥಿತಿ ಭಯ; ಭಯದ ಉತ್ತರ ಸ್ಥಿತಿ ದುಃಖ! ಅತಿಯಾಗಿ ಆಸೆ ಪಡುವುದು ರಾಗ, ಆಸೆಪಟ್ಟ ವಸ್ತು ಸಿಗದಿದ್ದಾಗ ನಿರಾಶೆ. ಆ ವಸ್ತು ನಮ್ಮಿಂದ ದುರ್ಬಲರಿಗೆ ಸಿಕ್ಕಿದರೆ ಅವರ ಮೇಲೆ ಕ್ರೋಧ; ನಮ್ಮಿಂದ ಬಲಿಷ್ಠರಿಗೆ ಸಿಕ್ಕರೆ ಅವರಿಂದ ಭಯ! ಇವೆಲ್ಲವೂ ಮನಸ್ಸಿನ ಹೊಯ್ದಾಟ. ವ್ಯಾಸರು ಹೇಳಿದಂತೆ “ಈ ಜಗತ್ತಿನಲ್ಲಿ ಈವರೆಗೆ ಆಗಬಾರದ್ದು ಯಾವುದೂ ಆಗಿಲ್ಲ, ಹಾಗು ಇನ್ನು ಮುಂದೆ ಆಗುವುದೂ ಇಲ್ಲ”. ಆಗಬೇಕಾದದ್ದು ಆಗಿಯೇ ತೀರುತ್ತದೆ, ಅದರ ಬಗ್ಗೆ ಚಿಂತಿಸಿ ಫಲವಿಲ್ಲ. ಇಂತಹ ಚಿಂತನಶೀಲತೆಯನ್ನು ಮೈಗೂಡಿಸಿಕೊಂಡವನು ಸ್ಥಿತಪ್ರಜ್ಞ ಎನಿಸುತ್ತಾನೆ.

ಇಲ್ಲಿ ಮುನಿಃ ಎನ್ನುವ ಪದ ಬಳಕೆಯಾಗಿದೆ. ಮುನಿಃ ಎಂದರೆ ಕಾಮ-ಕ್ರೋಧವನ್ನು ಗೆದ್ದವನು. ನಾವು ಮನಸ್ಸನ್ನು ಎಲ್ಲಾ ಸಂದರ್ಭದಲ್ಲೂ ಏಕರೂಪವಾಗಿ ತಟಸ್ಥವಾಗಿಡಲು ಪ್ರಯತ್ನಿಸಬೇಕು. ಏನು ಬಂದರೂ ಬರಲಿ, ಭಗವಂತನ ದಯೆಯೊಂದಿರಲಿ ಎಂದು ಜೀವನದಲ್ಲಿ ಸುಖ-ದುಃಖವನ್ನು ಸಮದೃಷ್ಟಿಯಲ್ಲಿ ಕಾಣುವವ ಮುನಿ. “ನೀನೂ ಕೂಡ ಅಂಥಹ ಮುನಿಯಾಗು” ಎನ್ನುವುದು ಇಲ್ಲಿರುವ ಸಂದೇಶ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *