ಶ್ಲೋಕ – 55
ಭಗವಾನುವಾಚ ।
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್
ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ॥೫೫॥
ಭಗವಾನುವಾಚ -ಭಗವಂತ ಹೇಳಿದನು :ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ ಆತ್ಮನ್ಯೇವಾSತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ- -ಪಾರ್ಥ, ಮನದಲ್ಲಿ ಮನೆಮಾಡಿದ ಎಲ್ಲ ಬಯಕೆಗಳನ್ನು ತೋರೆದಾಗ, ಪರಮಾತ್ಮನಲ್ಲೆ ನೆಲೆನಿಂತು, ಪರಮಾತ್ಮನ ಹಸಾದದಿಂದ ತಣಿದು ನಲಿದಾಗ ಸ್ಥಿತಪ್ರಜ್ಞ ಎನಿಸುತ್ತಾನೆ.
ಕೃಷ್ಣ ನೇರವಾಗಿ ಸ್ಥಿತಪ್ರಜ್ಞನ ನಡೆ-ನುಡಿಗಳ ಬಗ್ಗೆ ಹೇಳದೆ, ಆತ ಹೇಗಿರುತ್ತಾನೆ ಎನ್ನುವುದನ್ನು ಇಲ್ಲಿ ಮೊದಲು ವಿವರಿಸುತ್ತಾನೆ. ನಿಜವಾದ ಸ್ಥಿತಪ್ರಜ್ಞನಿಗೆ ಮೂಲಭೂತವಾಗಿ ಯಾವ ಬಯಕೆಯೂ ಕಾಡುವುದಿಲ್ಲ (ಇಲ್ಲಿ ಬಯಕೆ ಎಂದರೆ ಮನುಷ್ಯನನ್ನು ದಾರಿ ತಪ್ಪಿಸುವ ಕೆಟ್ಟ ಕಾಮನೆಗಳು). ಆತ ಇಂತಹ ಎಲ್ಲಾ ಕ್ಷುದ್ರ ಕಾಮನೆಗಳನ್ನು ತೊರೆದು ತನ್ನೊಳಗಿರುವ ಜ್ಞಾನಾನಂದಮಯನಾದ ಭಗವಂತನನ್ನು ಕಾಣುತ್ತಾ ಸದಾ ಸಂತೋಷವಾಗಿರುತ್ತಾನೆ.
ಮನುಷ್ಯನ ದುಃಖಕ್ಕೆ ಮೂಲ ಕಾರಣ ಆತನ ಕ್ಷುದ್ರ ಬಯಕೆಗಳು. ತನ್ನ ಬಯಕೆ ಈಡೇರದೆ ಇದ್ದಾಗ ದುಃಖ- ಕೋಪ ಇತ್ಯಾದಿ ಆರಂಭವಾಗುತ್ತದೆ. ಇದರಿಂದ ಆತ ತನ್ನ ಜೀವನವನ್ನು ನರಕವನ್ನಾಗಿ ಮಾಡಿಕೊಳ್ಳುತ್ತಾನೆ. ಇಂತಹ ಸ್ಥಿತಿಯಲ್ಲಿ ಆತನಿಗೆ ತನ್ನೊಳಗಿರುವ ಆ ಅಪೂರ್ವ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ. ಸ್ಥಿತಪ್ರಜ್ಞನಾದವನು ಈ ಜಂಜಾಟದಲ್ಲಿ ಸಿಲುಕದೆ, ತನ್ನಂತರಂಗದಲ್ಲಿನ ಆ ಮಹದಾನಂದವನ್ನು ಸದಾ ಸವಿಯುತ್ತ ಸಂತೋಷವಾಗಿರುತ್ತಾನೆ. ಆತ ಕಾಮನೆಗಳಿಗೆ ಬೆಂಬೀಳುವುದಿಲ್ಲ. ಬೇಕು ಎನ್ನುವ ಬಯಕೆ ಆತನನ್ನು ಕಾಡುವುದಿಲ್ಲ. ಆತನ ಮನಸ್ಸು ಸದಾ ಪ್ರಸನ್ನವಾಗಿರುತ್ತದೆ. ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಆತ ಎಂದೂ ಉದ್ವೇಗಕ್ಕೆ (Tension or Stress) ಒಳಗಾಗುವುದಿಲ್ಲ. ಆತನ ಮನಸ್ಸು ಗಟ್ಟಿಯಾಗಿರುತ್ತದೆ ಮತ್ತು ಇದರಿಂದಾಗಿ ಆತ ಯಶಸ್ಸನ್ನು ಕಾಣಬಲ್ಲ.
ಇಲ್ಲಿ ಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ಪಾರ್ಥ ಎಂದರೆ ಪಾರ-ತೀರ-ಗಮನೆ, ಅಂದರೆ ಸತ್ಯದ, ಸಾಧನೆಯ ಕಡಲನ್ನು ದಾಟಿದವ. “ಸಾಧನೆಯ ಕಡಲನ್ನು ದಾಟಿದ ನಿನಗೆ ಇದು ಸ್ಪಷ್ಟವಾಗಿ ತಿಳಿಯಬೇಕು” ಎನ್ನುವ ಅರ್ಥದಲ್ಲಿ ಈ ಸಂಬೋಧನೆ ಇದೆ.
ಮುಂದೆ ಬರುವ ಮೂರು ಶ್ಲೋಕಗಳಲ್ಲಿ ಕೃಷ್ಣ ಕಾಮನೆಗಳನ್ನು ಬಿಡುವುದು ಅಂದರೆ ಏನು ಹಾಗು ಹೇಗೆ? ಎನ್ನುವುದನ್ನು ವಿವರಿಸುತ್ತಾನೆ.