ಶ್ಲೋಕ – 54
ಅರ್ಜುನ ಉವಾಚ
ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ।
ಸ್ಥಿತಧೀಃ ಕಿಂ ಪ್ರಭಾಷೇತ ಕಿಮಾಸೀತ ವ್ರಜೇತ ಕಿಮ್ ॥೫೪॥
ಅರ್ಜುನ ಉವಾಚ -ಅರ್ಜುನ ಕೇಳಿದನು : ಸ್ಥಿತಪ್ರಜ್ಞಸ್ಯ ಕಾ ಭಾಷಾ ಸಮಾಧಿಸ್ಥಸ್ಯ ಕೇಶವ ಸ್ಥಿತಧೀಃ ಕಿಮ್ ಪ್ರಭಾಷೇತ ಕಿಮ್ ಆಸೀತ ವ್ರಜೇತ ಕಿಮ್– ಓ ಬ್ರಹ್ಮರುದ್ರರ ನಿಯಾಮಕನೆ, ಸಮಾಧಿಯನ್ನೇರಬಲ್ಲ [ತಿಳಿವಿನ ತಪ್ಪುಗಳನ್ನು ತಿದ್ದಿಕೊಂಡ] ಅರಿವು ಗಟ್ಟಿಗೊಡವರನ್ನು ಹೇಗೆ ಗುರುತಿಸುವುದು? ಅಂಥಹ ಸ್ಥಿತಪ್ರಜ್ಞ ಏನೆಂದು ನುಡಿಯುತ್ತಾನೆ? ಏನೆಂದು ಕೂಡುತ್ತಾನೆ? ಏನೆಂದು ನಡೆಯುತ್ತಾನೆ?
ಈ ಹಂತದಲ್ಲಿ ಕೃಷ್ಣ ತನ್ನ ಉಪದೇಶವನ್ನು ನಿಲ್ಲಿಸಿ ಅರ್ಜುನನ ಪ್ರಶ್ನೆಯನ್ನು ಆಲಿಸುತ್ತಾನೆ. ಮನುಷ್ಯನ ಅರಿವು ಗಟ್ಟಿಗೊಳ್ಳಬೇಕು; ಸತ್ಯದ ಸಾಕ್ಷಾತ್ಕಾರದಿಂದ ಮನುಷ್ಯ ಸ್ಥಿತಪ್ರಜ್ಞನಾಗಬಲ್ಲ. ಇಂತಹ ಸ್ಥಿತಪ್ರಜ್ಞರನ್ನು ಗುರುತಿಸುವುದು ಹೇಗೆ ಎನ್ನುವುದು ಅರ್ಜುನನ ಪ್ರಶ್ನೆ. ಒಬ್ಬ ಸ್ಥಿತಪ್ರಜ್ಞನನ್ನು ಆತನ ವೇಷ ಭೂಷಣದಿಂದ ಗುರುತಿಸುವುದು ಅಸಾಧ್ಯ. ಬಾಹ್ಯ ಪ್ರಪಂಚಕ್ಕೆ ಅಂಟಿಕೊಳ್ಳದೆ ಅಂತರಂಗ ಪ್ರಪಂಚದಲ್ಲಿ ಸಮಾಧಿಸ್ಥಿತಿಯನ್ನು ತಲುಪಿದ ಅವರನ್ನು ಹೇಗೆ ಗುರುತಿಸಬಹುದು? ಅವರು ಬಾಹ್ಯ ಪ್ರಪಂಚದೊಂದಿಗೆ ಹೇಗೆ ವ್ಯವಹರಿಸುತ್ತಾರೆ? ಅವರ ನಡೆ-ನುಡಿ ಹೇಗಿರುತ್ತದೆ? ಎನ್ನುವುದು ಅರ್ಜುನನ ಪ್ರಶ್ನೆ.
ಇಲ್ಲಿ ಅರ್ಜುನ ಕೃಷ್ಣನನ್ನು ‘ಕೇಶವ’ ಎಂದು ಸಂಬೋಧಿಸಿದ್ದಾನೆ. ಈ ಸಂಬೋಧನೆಯಿಂದಲೇ ಅರ್ಥವಾಗುತ್ತದೆ, ಅರ್ಜುನ ಸ್ವಯಂ ಒಬ್ಬ ಮಹಾಜ್ಞಾನಿ ಎಂದು. ಕೇಶವ ಎಂದರೆ ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ- ಕೇಶವ . ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ. “ಜಗತ್ತಿಗೆ ಬೆಳಕು ಕೊಡುವ ನಿನ್ನಿಂದ ನಾನು ಈ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ” ಎನ್ನುವ ಅರ್ಥದಲ್ಲಿ ಈ ಸಂಬೋಧನೆಯಿದೆ.