ಶ್ಲೋಕ – 5
ಗುರೂನಹತ್ವಾ ಹಿ ಮಹಾನುಭಾವಾನ್ ಶ್ರೇಯೋ ಭೋಕ್ತುಂ ಭೈಕ್ಷ್ಯಮಪೀಹ ಲೋಕೇ|
ಹತ್ವಾSರ್ಥಕಾಮಾಂಸ್ತು ಗುರೂನಿಹೈವ ಭುಂಜೀಯ ಭೋಗಾನ್ ರುಧಿರಪ್ರದಿಗ್ಧಾನ್ ॥೫॥
ಗುರೂನ್ ಅಹತ್ವಾ ಹಿ ಮಹಾನುಭಾವಾನ್ ಶ್ರೇಯಃ ಭೋಕ್ತುಮ್ ಭೈಕ್ಷ್ಯಮ್ ಅಪಿ ಇಹ ಲೋಕೇ ಹತ್ವಾ ಅರ್ಥ ಕಾಮಾನ್ ತು ಗುರೂನ್ ಇಹ ಏವ ಭುಂಜೀಯ ಭೋಗಾನ್ ರುಧಿರ ಪ್ರದಿಗ್ಧಾನ್– ಈ ಮಹಾನುಭಾವಿಗಳನ್ನು ಕೊಲ್ಲುವ ಬದಲು ಇಲ್ಲೆ, ಈ ನೆಲದಲ್ಲಿ ಭಿಕ್ಷೆ ಬೇಡುವುದು ಮೇಲು. ಸಿರಿಯ ಬೆನ್ನು ಹತ್ತಿದ ಇವರನ್ನು ಕೊಂದು ಇಲ್ಲೆ ಅವರ ನೆತ್ತರಿನಿಂದ ನೆನೆದ ಐಸಿರಿಯನುಣ್ಣಬೇಕು! ಗುರು ಹಿರಿಯರನ್ನು ಕೊಂದು, ಸಿರಿವಂತಿಕೆಯ ಭೋಗವನ್ನು ಅನುಭವಿಸುವುದಕ್ಕಿಂತ, ಭಿಕ್ಷೆ ಬೇಡಿ ಬದುಕುವುದು ಹಿರಿತನವಲ್ಲವೇ? ಯಾವ ಸಿಂಹಾಸನ ಅಂತರಂಗದ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡ ಭೀಷ್ಮ-ದ್ರೋಣರಂತಹ ಮಹಾನುಭಾವರನ್ನು ಕೊಡಲಾರದೋ, ಅಂತಹ ಸಿಂಹಾಸನ ನಮಗೇಕೆ ಬೇಕು? ದುರ್ಯೋಧನನ ಸಂಬಳದ ದಾಸರಾಗಿ, ಅರಮನೆಯ ಋಣಕ್ಕಾಗಿ ಹೋರಾಟಕ್ಕೆ ನಿಂತ ಇವರನ್ನು ಕೊಂದು ಸಿಂಹಾಸನವೇರಿದರೆ, ಗುರುಗಳ ನೆತ್ತರಿನಿಂದ ತೊಯ್ದ ಭೋಗವನ್ನು ಅನುಭವಿಸಿದಂತೆ.