ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 02

ಶ್ಲೋಕ – 46

ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ ।
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ ॥೪೬॥

ಯಾವಾನ್ ಅರ್ಥಃ ಉದಪಾನೇ ಸರ್ವತಃ ಸಂಪ್ಲುತ ಉದಕೇ ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ –ಬಾವಿಯಿಂದ ಏನೇನು ಉಪಯೋಗವಿದೆಯೋ ಅದೆಲ್ಲವೂ ತುಂಬಿ ಹರಿಯುವ ನೀರ ನೆಲೆಯಲ್ಲಿ ಒಳಗೊಂಡಿದೆ. ಎಲ್ಲಾ ವೇದಗಳಲ್ಲಿ ಏನು ಫಲವೋ ಅದು ಬ್ರಹ್ಮವನ್ನು ಬಲ್ಲ ವಿಜ್ಞಾನಿಯ ಫಲದಲ್ಲಿ ಒಳಗೊಂಡಿದೆ.[ಪ್ರಕೃತಿಯೆ ನೀರಂತೆ ಎಲ್ಲೆಡೆ ತುಂಬಿ ಹರಿಯುವ ಪ್ರಳಯದಲ್ಲಿ ಕೂಡಾ ತುಂಬಿದ ಕೊಡವಾಗಿ, ಇನ್ನೊಬ್ಬರ ಕಾಪಿಗೊಳಪಡದೆ, ಕಾಲಾದಿಗಳನ್ನು ನಿಯಮಿಸುವ ಭಗವಂತನಿಂದ ಎನಿತು ಲಭ್ಯವೋ -ಅದು ಎಲ್ಲ ವೇದಗಳನ್ನು ಬಲ್ಲ ಹಿರಿಯ ಜ್ಞಾನಿಗೆ ಮಾತ್ರ ಸುಲಭ] ಈ ಶ್ಲೋಕ ಒಗಟಿನಂತಿದೆ. ನೇರವಾಗಿ ನೋಡಿದರೆ ಅರ್ಥ ತಿಳಿಯದ ಶ್ಲೋಕವಿದು.ಈ ಶ್ಲೋಕವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಶ್ಲೋಕದಲ್ಲಿ ಮುಳುಗಬೇಕು. ಆಗ ಆಳದಲ್ಲಿನ ಮುತ್ತು ರತ್ನಗಳು ನಮಗೆ ಸಿಗುತ್ತವೆ. ನಾವು ನಮ್ಮ ಅಹಂಕಾರವನ್ನು ಸಂಪೂರ್ಣ ತೊರೆದು ಶರಣಾಗತಿಯಿಂದ(Total Submission) ನೋಡಿದಾಗ ಅದು ತನ್ನನ್ನು ತೆರೆದುಕೊಳ್ಳುತ್ತದೆ.

ಈ ಶ್ಲೋಕವನ್ನು ಸ್ವಲ್ಪ ಬಿಡಿಸಿ ಹೀಗೆ ಬರೆಯಬಹುದು : ಯಾವಾನ್ ಅರ್ಥ ಉದಪಾನೇ ಯಾವಾನ್ ಅರ್ಥ ಸರ್ವತಃ ಸಂಪ್ಲುತೋದಕೇ ತಾವಾನ್ ಸರ್ವೇಷು ವೇದೇಷು ತಾವಾನ್ ಬ್ರಾಹ್ಮಣಸ್ಯ ವಿಜಾನತಃ ಒಂದು ಬಾವಿ ತೋಡಿ ಅದರಲ್ಲಿ ಬರುವ ನೀರಿನಿಂದ ಏನು ಪ್ರಯೋಜನವೋ, ಆ ಎಲ್ಲಾ ಪ್ರಯೋಜನಗಳ ಜೊತೆಗೆ ಇನ್ನೂ ಅನೇಕಾನೇಕ ಪ್ರಯೋಜನಗಳನ್ನು ತುಂಬಿ ಹರಿಯುವ ನೀರಿನ ನೆಲೆ ಕೊಡಬಲ್ಲದು. ಕರ್ಮ ಕಾಂಡವನ್ನು ಮಾಡುವವನ ಸ್ಥಿತಿ ಮನೆಯಲ್ಲಿ ಕಷ್ಟಪಟ್ಟು ಬಾವಿ ತೋಡಿ ಅದರಿಂದ ನೀರು ಸೇದಿದಂತೆ. ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಂಡವನ ಸ್ಥಿತಿ ತುಂಬಿ ಹರಿಯುವ ನೀರಿನ ನೆಲೆಯ ದಡದಲ್ಲಿದ್ದಂತೆ. ಅಪರೋಕ್ಷ ಜ್ಞಾನಿ ಎಲ್ಲವುದರಲ್ಲೂ ಭಗವಂತನನ್ನು ಕಾಣುತ್ತಾನೆ. ಬ್ರಹ್ಮಜ್ಞಾನಿ ಸದಾ ನಿರ್ಮಲವಾಗಿ ತುಂಬಿ ಹರಿಯುವ ನೀರಿನ ನೆಲೆಯ ಪಕ್ಕ ನಿಂತವನಂತೆ. ಇಡೀ ವೇದವನ್ನು ಓದಿ ಕರ್ಮದಲ್ಲೇ ಕುಳಿತವನು ಬೆವರು ಸುರಿಸಿ ಬಾವಿಯಿಂದ ನೀರು ಸೇದುವವನಂತೆ.

ಈ ಶ್ಲೋಕದಲ್ಲಿ ‘ಬ್ರಾಹ್ಮಣ’ ಎನ್ನುವ ಪದ ಬಂದಿದೆ. ಇದನ್ನು ‘ಜಾತಿ’ ಎಂದು ಪರಿಗಣಿಸಿದರೆ ಈ ಶ್ಲೋಕದ ನಿಜ ಸಂದೇಶ ತಿಳಿಯುವುದಿಲ್ಲ. ವೇದ ಗ್ರಂಥಗಳಲ್ಲಿ ಎಲ್ಲೂ ಜಾತಿಯ ಬಗ್ಗೆ ಪ್ರಸ್ತಾಪವಿಲ್ಲ. ಬ್ರಾಹ್ಮಣ ಅಂದರೆ ‘ಬ್ರಹ್ಮ ಅಣತೀತಿ’; ಅಂದರೆ ಬ್ರಹ್ಮ ತತ್ವವನ್ನು ಅರ್ಥ ಮಾಡಿಕೊಂಡವ ಎಂದರ್ಥ. ‘ಬ್ರಹ್ಮ’ ಎಂದರೆ ಎಲ್ಲಕ್ಕಿಂತ ದೊಡ್ಡದಾದದ್ದು. ಎಲ್ಲಕ್ಕಿಂತ ದೊಡ್ಡದು ವೇದ ಮತ್ತು ವೇದವೇದ್ಯನಾದ ಭಗವಂತ. ಆದ್ದರಿಂದ ವೇದವನ್ನು ಅರಿತವನು, ವೇದವೇದ್ಯ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡವನು ಬ್ರಾಹ್ಮಣ. ಬ್ರಹ್ಮನನ್ನು ಅಪರೋಕ್ಷವಾಗಿ ತಿಳಿದ ಜ್ಞಾನಿಗೆ ತುಂಬಿ ಹರಿವ ನೀರನ ಫಲವಾದರೆ, ಕರ್ಮಕನಿಗೆ ಬಾವಿಯ ಫಲ. ಶಾಸ್ತ್ರದಿಂದ ವಿಶಿಷ್ಟವಾದ ಅರಿವನ್ನು ಪಡೆದ ವಿಜ್ಞಾನಿ ಮಾತ್ರ ಭಗವಂತನನ್ನು ಕಾಣಬಲ್ಲ. ಇಲ್ಲಿ ವಿಜ್ಞಾನಿ ಅಂದರೆ ಯಾವುದೇ ಒಂದು ವಸ್ತುವಿನ ಬಗ್ಗೆ ತಳಸ್ಪರ್ಶಿ ಜ್ಞಾನ ಉಳ್ಳವನು ಎಂದರ್ಥ. ಈ ಶ್ಲೋಕದಲ್ಲಿ ಇನ್ನೊಂದು ವಿಷಯವಡಗಿದೆ. “ಸರ್ವತಃ ಸಂಪ್ಲುತೋದಕ” ಎಂದರೆ ನೀರು ತುಂಬಿದ ಸ್ಥಿತಿ. ಇಲ್ಲಿ ನೀರು ಎಂದರೆ ಪ್ರಳಯಜಲ. ಪ್ರಕೃತಿ ಸೂಕ್ಷ್ಮವಾದ ಪರಮಾಣುವಿನ ಸಮುದ್ರ ರೂಪದಲ್ಲಿರುವ ಕಾಲ-ಪ್ರಳಯ ಕಾಲ. ಇಂತಹ ಪ್ರಳಯ ಸಮುದ್ರದಲ್ಲಿ ಮಲಗಿರುವವ ‘ಉದಪಾನ’. ಉತ್+ಅಪ+ಪಾನ-ಅಂದರೆ ಎಲ್ಲಕ್ಕಿಂತ ಉತ್ಕೃಷ್ಟವಾದ, ಸದಾ ಎಚ್ಚರದಿಂದಿರುವ(ಉತ್); ಎಲ್ಲರನ್ನು ಪಾಲಿಸುವ, ಹಾಗು ತನಗೆ ಹಿರಿದಾದ ಇನ್ನೊಬ್ಬ ಪಾಲಕನಿಲ್ಲದ ಸರ್ವೋತ್ತಮ(ಅಪ); ಎಲ್ಲರನ್ನೂ ನಿಯಂತ್ರಿಸುವ ಸರ್ವಚೇಷ್ಟಕ(ಅನ). ಈ ತತ್ವದ ಮೂಲಕ ಏನೇನು ಉಪಯೋಗವನ್ನು ಪಡೆಯಬಹುದೋ ಆ ಉಪಯೋಗವನ್ನು ಸಮಸ್ತ ವೇದದಲ್ಲಿ, ವೇದದ ಒಂದೊಂದು ಮಂತ್ರದಲ್ಲಿ, ಮಂತ್ರದ ಒಂದೊಂದು ವಾಕ್ಯದಲ್ಲಿ, ವಾಕ್ಯದ ಒಂದೊಂದು ಪದದಲ್ಲಿ, ಪದದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಾಣುವ ಬ್ರಹ್ಮಜ್ಞಾನಿ ಪಡೆಯುತ್ತಾನೆ.

ವೇದವನ್ನು ಕೇವಲ ಮೇಲ್ನೋಟದಲ್ಲಿ ಓದಿದರೆ ಅದರಿಂದ ಏನೂ ಉಪಯೋಗವಿಲ್ಲ. ವೇದದ ಸಮಗ್ರ ಮಂತ್ರದಲ್ಲಿ, ಮಂತ್ರದ ಒಂದೊಂದು ಅಕ್ಷರದಲ್ಲಿ ಭಗವಂತನನ್ನು ಕಂಡು ಭಗವನ್ಮಯನಾದಾಗ, ಭಗವಂತನ ಸಮಸ್ತ ಅನುಗ್ರಹಕ್ಕೆ ಪಾತ್ರನಾಗಿ, ಸಮಗ್ರ ಉಪಯೋಗವನ್ನು ಪಡೆಯಬಹುದು. “ಫಲ ಕಾಮನೆಯಿಂದ ಕರ್ಮಕಾಂಡ ಬೇಡ, ಸಮಗ್ರವೇದವನ್ನು ಭಗವಂತನ ಚಿಂತನೆಗೆ ಮೀಸಲಿಡಿ” ಎಂದು ಹೇಳಿದ ಕೃಷ್ಣನ ಮಾತಿನಿಂದ ನಮಗೆ ಸ್ವಲ್ಪ ಗೊಂದಲವಾಗಬಹುದು. ಏಕೆಂದರೆ ವೇದದಲ್ಲಿ ಪ್ರತಿಯೊಂದು ಕಡೆ ಫಲವನ್ನು ಹೇಳಿದ್ದಾರೆ. ಏಕೆ ಹೀಗೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಹಿಂದೆ ಹೇಳಿದಂತೆ ಅಧ್ಯಾತ್ಮದ ಪಠ್ಯಪುಸ್ತಕ ಸಾಧನೆಯ ಎಲ್ಲಾ ಹಂತದಲ್ಲೂ-ಚಿಕ್ಕವರಿಂದ ದೊಡ್ಡವರಿಗೆ ಎಲ್ಲರಿಗೂ ಒಂದೆ. ಇನ್ನೂ ಆರಂಭದ ಹಂತದಲ್ಲಿರುವವರಿಗೆ ಏನನ್ನೂ ಬಯಸದೆ ನಿರ್ಲಿಪ್ತರಾಗಿ ಅನುಸರಿಸಿ ಎಂದು ಹೇಳಿದರೆ ಅವರಿಗೆ ವೇದಾಂತದ ಬಗ್ಗೆ ಆಸಕ್ತಿಯೇ ಬಾರದಿರಬಹುದು. ಅದಕ್ಕಾಗಿ, ಮಕ್ಕಳಿಗೆ ಬೆಲ್ಲ ಕೊಟ್ಟು ಔಷಧ ಕುಡಿಸಿದಂತೆ ವೇದಗಳಲ್ಲಿ ಫಲವನ್ನು ಹೇಳಿದ್ದಾರೆ. ಇದು ವೇದಾಭ್ಯಾಸದ ಆರಂಭದ ಹಂತದಲ್ಲಿ ಉಪಯುಕ್ತ. ಕರ್ಮ ಮಾಡುವಾಗ ನಮ್ಮ ಮನಃಸ್ಥಿತಿ ಹೇಗಿರಬೇಕು ಎನ್ನುವುದನ್ನು ಮುಂದಿನ ಶ್ಲೋಕದಲ್ಲಿ ಕೃಷ್ಣ ವಿವರವಾಗಿ ಹೇಳಿದ್ದಾನೆ.

ಇವುಗಳೂ ನಿಮಗಿಷ್ಟವಾಗಬಹುದು

ಭಗವದ್ಗೀತೆ ಶ್ಲೋಕಗಳು : ಅಧ್ಯಾಯ – 13

ಶ್ಲೋಕ – 01 ಇದು ಭಗವದ್ಗೀತೆಯ ಮೂರನೇ ಷಟ್ಕದ ಮೊದಲ ಅಧ್ಯಾಯ. ಗೀತೆಯ ಈ ಹದಿಮೂರನೇ ಅಧ್ಯಾಯ ಒಂದು ಅಪೂರ್ವ …

Leave a Reply

Your email address will not be published. Required fields are marked *