ಶ್ಲೋಕ – 41
ವ್ಯವಸಾಯಾತ್ಮಿಕಾ ಬುದ್ಧಿರೇಕೇಹ ಕುರುನಂದನ।
ಬಹುಶಾಖಾ ಹ್ಯನನಂತಾಶ್ಚ ಬುದ್ಧಯೋSವ್ಯವಸಾಯಿನಾಮ್ ॥೪೧॥
ವ್ಯವಸಾಯ ಆತ್ಮಿಕಾ ಬುದ್ಧಿಃ ಏಕಾ ಇಹ ಕುರುನಂದನ ಬಹುಶಾಖಾಃ ಹಿ ಅನಂತಾಃ ಚ ಬುದ್ಧಯಃ ಅವ್ಯವಸಾಯಿನಾಮ್–ಕುರುಕುಮಾರ, ಈ ದಾರಿಯಲ್ಲಿ ಮನನದಿಂದ ಹದಗೊಂಡ ಮಾತು ಒಂದೇ ತರ. ಹದವಿರದವರ ತುದಿಯಿರದ ಹರಟೆಗಳಿಗೆ ಹತ್ತು ಹಲವು ಟಿಸಿಲುಗಳು.
ಏಕನಿಷ್ಠೆಯಿಂದ ನಾವು ಮಾಡುವ ಸಾಧನೆ ವ್ಯರ್ಥವಲ್ಲ ಎನ್ನುವ ವಿಷಯ ನಮಗೆ ತಿಳಿಯಿತು, ಆದರೆ ಯಾವುದು ಸರಿ ಹಾಗು ಯಾವುದು ತಪ್ಪು ಎನ್ನುವುದನ್ನು ತಿಳಿಯುವ ಬಗೆ ಹೇಗೆ? ಕೃಷ್ಣ ಈ ಶ್ಲೋಕದಲ್ಲಿ ನಮ್ಮ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾನೆ.
ಎಲ್ಲಾ ಕಾಲದಲ್ಲೂ ನಿರ್ಣಾಯಕವಾದ ಮಾತು ಏಕರೂಪವಾಗಿರುತ್ತದೆ. ನಿರ್ಣಯ ಇಲ್ಲದೆ ಆಡುವ ಮಾತು ಒಂದೊಂದು ಒಂದೊಂದು ತರ. ಗೊತ್ತಿಲ್ಲದೆ ಅಜ್ಞಾನದಿಂದ ಆಡುವ ಮಾತುಗಳಿಗೆ ತಲೆಬುಡವಿಲ್ಲದ ಅನಂತ ಶಾಖೆ. ಆದರೆ ನಿಜವಾಗಿ ತಿಳಿದವರ ನಿರ್ಣಯಾತ್ಮಕವಾದ ಮಾತು ಸದಾ ಒಂದೇ ಆಗಿರುತ್ತದೆ. ಆದ್ದರಿಂದ ಸತ್ಯವನ್ನು ಅರಿತವರ ಮಾರ್ಗದರ್ಶನದಂತೆ ನಡೆ ಎನ್ನುತ್ತಾನೆ ಕೃಷ್ಣ.