ಶ್ಲೋಕ – 4
ಅರ್ಜುನ ಉವಾಚ ।
ಕಥಂ ಭೀಷ್ಮಮಹಂ ಸಂಖೇ ದ್ರೋಣಂ ಚ ಮಧುಸೂದನ ।
ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾವರಿಸೂದನ ॥೪॥
ಅರ್ಜುನ ಉವಾಚ-ಅರ್ಜುನ ಹೇಳಿದನು:
ಕಥಮ್ ಭೀಷ್ಮಮ್ ಅಹಮ್ ಸಂಖೇ ದ್ರೋಣಮ್ ಚ ಮಧುಸೂದನ ಇಷುಭಿಃ ಪ್ರತಿಯೋತ್ಸ್ಯಾಮಿ ಪೂಜಾರ್ಹಾ ಅರಿಸೂದನ- ಅರಿಗಳನ್ನು ತರಿದ ಓ ಮಧುಸೂದನ, ಭೀಷ್ಮನನ್ನು, ದ್ರೋಣನನ್ನು, ಪೂಜಿಸಬೇಕಾದ ಮಂದಿಯನ್ನು ನಾನೆಂತು ರಣದಲ್ಲಿ ಬಾಣಗಳಿಂದ ಹೊಡೆದು ಹೋರಾಡಲಿ?
ಕೃಷ್ಣನ ತೀಕ್ಷ್ಣ ಉತ್ತರ ಹಾಗು ಆತನ ನಗುಮೊಗವನ್ನು ಗಮನಿಸಿದ ಅರ್ಜುನನ ಮಾತಿನ ದಾಟಿ ಈಗ ಬದಲಾಗುತ್ತದೆ. ಆತ ಭಾವಾವೇಶ ಬಿಟ್ಟು ಈಗ ಭಾವುಕತೆಯಿಂದ ಶರಣಾಗತಿಯತ್ತ ಹೊರಳುತ್ತಿದ್ದಾನೆ. ಅರ್ಜುನ ಹೇಳುತ್ತಾನೆ “ನನ್ನ ಕಣ್ಣಮುಂದೆ ನಿಂತ ಭೀಷ್ಮಾಚಾರ್ಯರು, ದ್ರೋಣಾಚಾರ್ಯರನ್ನು ಹೇಗೆ ಎದುರಿಸಲಿ? ಒಬ್ಬರು ನಮ್ಮ ವಂಶದ ಮೂಲಪುರುಷನಾದ ರಾಜರ್ಷಿ. ಇನ್ನೊಬ್ಬರು ಎಲ್ಲಾ ಕ್ಷತ್ರಿಯರಿಗೂ ವಿದ್ಯೆ ಕೊಟ್ಟ ಮಹರ್ಷಿ. ಇಂತಹ ಪೂಜಾರ್ಹರಾದ ಮಹಾನೀಯರತ್ತ ಹೇಗೆ ಬಾಣ ಹೂಡಲಿ ? ಸೃಷ್ಟಿಯ ಆದಿಯಲ್ಲಿ ಮದು-ಕೈತಪರನ್ನು ಸಂಹಾರ ಮಾಡಿದ ಓ ಮದುಸೂದನನೆ; ದುಷ್ಟ ಸಂಹಾರಕ್ಕೆಂದು ಅವತರಿಸಿದ ಅರಿಸೂದನನೆ, ಜ್ಞಾನಿಗಳ, ಆಚಾರ್ಯರ ಹತ್ಯೆ ನಿನ್ನ ಮೂಲ ಉದ್ದೇಶ ಅಲ್ಲ” ಎಂದು ಭಿನ್ನ ದಾಟಿಯಲ್ಲಿ ಅರ್ಜುನ ತನ್ನ ಮಾತನ್ನು ಮುಂದುವರಿಸುತ್ತಾನೆ.